ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆ ಕಚೇರಿಗೆ ಹರಗ ಗ್ರಾಮಸ್ಥರ ಮುತ್ತಿಗೆ

ಬಡವರ ಮೇಲೆ ಅರಣ್ಯಾಧಿಕಾರಿಗಳ ಗದಾಪ್ರಹಾರ– ಆರೋಪ
Last Updated 7 ನವೆಂಬರ್ 2022, 15:17 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಹರಗದಲ್ಲಿ ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿಕೊಂಡಿದ್ದ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ತೆರಳಿ ಗಿಡಗಳನ್ನು ಕಡಿದಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸೋಮವಾರ ಮುತ್ತಿಗೆ ಹಾಕಿದರು.

ಗ್ರಾಮದ ಕೆ.ಎಂ.ಲಿಂಗರಾಜು ಎಂಬುವವರು 3.89 ಎಕರೆ ಜಾಗದಲ್ಲಿ ಕಾಫಿ ತೋಟ ಮಾಡಿದ್ದು, ಸರ್ಕಾರಕ್ಕೆ ಫಾರಂ 53 ಕೊಟ್ಟು ಸಕ್ರಮಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆಯವರು ಏಕಾಎಕಿ ಅಕ್ರಮ ಪ್ರವೇಶ ಮಾಡಿ ಬೇಲಿಯನ್ನು ಕಿತ್ತು, ಕಾಫಿ ಗಿಡಗಳನ್ನು ನಾಶ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅರಣ್ಯ ಇಲಾಖೆಯವರು ಹರಗ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ನೆಡುತೋಪನ್ನು ಬೆಳೆಸಿದ್ದು, ಅದು ಪ್ರಯೋಜನಕ್ಕೆ ಬಾರದಂತಾಗಿದೆ. ಗ್ರಾಮದ 1,800 ಹೆಕ್ಟೇರ್ ಜಾಗ ಅರಣ್ಯ ಪ್ರದೇಶ ಎಂದು ಹೇಳುತ್ತಾರೆ. ಇಡೀ ಹರಗ ಗ್ರಾಮದಲ್ಲಿ ಇರುವುದೇ 1,800 ಹೆಕ್ಟೇರ್ ಜಾಗ. ಇಡೀ ಊರನ್ನೇ ಮೀಸಲು ಅರಣ್ಯ ಮಾಡಲು ಇಲಾಖೆಯವರು ಹೊರಟಿದ್ದು, ಗ್ರಾಮಸ್ಥರು ತಮ್ಮ ಜೀವನವನ್ನು ಹೇಗೆ ಮಾಡಬೇಕು ಎಂದು ಶಾಂತಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತ್ರೀಶೂಲ್ ಪ್ರಶ್ನಿಸಿದರು.

ರೈತರಿಗೆ ಅನ್ಯಾಯ ಮಾಡಬಾರದು. ಕೃಷಿಕರು ವ್ಯವಸಾಯ ಮಾಡವುದನ್ನು ಬಿಟ್ಟರೆ ಅಧಿಕಾರಿಗಳು ಮಣ್ಣು ತಿನ್ನಬೇಕಾಗುತ್ತದೆ. ‘ಸಿ’ ಮತ್ತು ‘ಡಿ’ ಜಾಗದ ಸಮಸ್ಯೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕಾಫಿ ಬೆಳೆಗಾರರಿಗೆ ಅಕ್ರಮ-ಸಕ್ರಮ ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ. ಯೋಜನೆ ಕಾರ್ಯಗತವಾಗುವವರೆಗೆ ಅರಣ್ಯ ಇಲಾಖೆಯವರು ತಾಳ್ಮೆಯಿಂದ ಇರಬೇಕು. ಈಗ ಕಿತ್ತಿರುವ ಬೇಲಿಯನ್ನು ಸರಿಪಡಿಸಿಕೊಡಬೇಕು. ಕಿತ್ತು ಎಸೆದ ಗಿಡಗಳಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ಕೊಡಬೇಕು ಎಂದು ಹರಗ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎ. ಧರ್ಮಪ್ಪ ಒತ್ತಾಯಿಸಿದರು.

ಸ್ಥಳಕ್ಕೆ ಆರ್.ಎಫ್.ಓ. ಚೇತನ್ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಮೈಸೂರಿನಲ್ಲಿ ಇಲಾಖಾ ಮಟ್ಟದ ಸಭೆಗೆ ತೆರಳಿದ್ದಾರೆ ಎಂದು ಕಚೇರಿಯಲ್ಲಿದ್ದ ಡಿಆರ್‌ಎಫ್‌ಒ ಸತೀಶ್ ತಿಳಿಸಿದರು. ಈ ಮಧ್ಯೆ ಸತೀಶ್ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಆರ್.ಎಫ್.ಒ ಕಚೇರಿಯಲ್ಲಿ ಇಲ್ಲದ ಕಾರಣ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದು, ಶಾಸಕರಿಗೆ ದೂರು ನೀಡಲು ಪ್ರತಿಭಟನಕಾರರು ಮುಂದಾದರು. ಪ್ರತಿಭಟನೆಯಲ್ಲಿ ಗ್ರಾಮದ ಪ್ರಮುಖರಾದ ಶರತ್, ಆದಿತ್ಯ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT