ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ
Last Updated 27 ಮಾರ್ಚ್ 2023, 12:41 IST
ಅಕ್ಷರ ಗಾತ್ರ

ಮಡಿಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಇಲ್ಲಿನ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಹಾಗೂ ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ಶೈಕ್ಷಣಿಕ ಸಹಾಯಧನ ನೀಡಲಾಗುವುದು ಎಂದು ಸರ್ಕಾರವೇನೋ ಪ್ರಕಟಿಸಿದೆ. ಆದರೆ, ಅದಕ್ಕೆ ಅರ್ಜಿ ಸಲ್ಲಿಸುವ ವ್ಯವಸ್ಥೆಯೇ ತೀರಾ ತ್ರಾಸದಾಯಕವಾಗಿದೆ. ಇದನ್ನು ಇನ್ನಷ್ಟು ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಅನೇಕರಿಗೆ ಇನ್ನೂ ಸಹಾಯಧನ ಸಿಕ್ಕಿಲ್ಲ. ಎಲ್ಲರಿಗೂ ಸಹಾಯಧನವನ್ನು ಮಂಜೂರು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.

ಈಗ ಜಾರಿಯಲ್ಲಿರುವ ಸಿಜಿಎಸ್ ಆಧಾರಿತ ವೈದ್ಯಕೀಯ ಮರುಪಾವತಿ ಸೇವೆಯನ್ನು ರದ್ದುಗೊಳಿಸಿ, ‘ಆರೋಗ್ಯ ಸಂಜೀವಿನಿ’ ನಗದುರಹಿತ ಸೇವೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕಟ್ಟಡ ಕಾರ್ಮಿಕರು ಅಲ್ಲದವರೂ ಕಟ್ಟಡ ಕಾರ್ಮಿಕರು ಎಂಬ ಕಾರ್ಡ್ ಪಡೆದು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಉದ್ಯೋಗ ಪ್ರಮಾಣಪತ್ರವನ್ನು ಕಾರ್ಮಿಕ ಇಲಾಖೆಯ ಕಚೇರಿ, ನೋಂದಾಯಿತ ಕಟ್ಟಡ ಕಾರ್ಮಿಕರ ಸಂಘ, ನೋಂದಾಯಿಯ ಬಿಲ್ಡರ್‌ಗಳು ನೀಡುವ ಪ್ರಮಾಣಪತ್ರದ ಆಧಾರದ ಮೇಲೆ ಕಾರ್ಮಿಕರನ್ನು ನೋಂದಣಿ ಮಾಡಿಸಬೇಕು. ಸಿಎಲ್‌ಸಿ ಕೇಂದ್ರಗಳು, ಗ್ರಾಮ ಒನ್‌ ಕೇಂದ್ರಗಳಲ್ಲಿ ನೋಂದಾಯಿಸುವ ಅವಕಾಶವನ್ನು ರದ್ದುಪಡಿಸಬೇಕು ಎಂದು ಹೇಳಿದರು.

ಕಾರ್ಮಿಕ ಮಂಡಳಿಯಿಂದ ಪ್ರತ್ಯೇಕವಾಗಿ ಶಿಶುವಿಹಾರಗಳನ್ನು ಆರಂಭಿಸಿ, ಕಟ್ಟಡ ಕಾರ್ಮಿಕರ ಮಕ್ಕಳನ್ನು ಇತರೆ ಮಕ್ಕಳಿಂದ ಪ್ರತ್ಯೇಕಿಸುವುದು ಬೇಡ ಎಂದರು.

ಫಲಾನುಭವಿ ಕಾರ್ಮಿಕರರಿಗೆ ಮನೆ ನಿರ್ಮಾಣಕ್ಕೆ ₹5 ಲಕ್ಷ ಅನುದಾನ ಒದಗಿಸಬೇಕು. ವಿವಿಧ ಸಹಾಯಧನಕ್ಕಾಗಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿಯನ್ನು ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT