ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರೆದ ವರುಣನ ಆರ್ಭಟ

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ: ಮೈದುಂಬಿದ ಮಲ್ಲಳ್ಳಿ ಜಲಪಾತ
Last Updated 16 ಜೂನ್ 2021, 5:46 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಆಗಾಗ ಬಿಡುವು ಕೊಟ್ಟರೂ ಉತ್ತಮ ಮಳೆಯಾಗುತ್ತಿದೆ. ಮಡಿಕೇರಿಯಲ್ಲೂ ಬೆಳಿಗ್ಗೆ ಬಿಡುವು ನೀಡಿದ್ದ ಮಳೆ, ಮಂಗಳವಾರ ಮಧ್ಯಾಹ್ನದ ಬಳಿಕ ಬಿರುಸಾಗಿ ಸುರಿಯಿತು.

ಕೆಲವೆಡೆ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಪ್ರವಾಸಿಗರ ಆಕರ್ಷಣೆಯ ತಾಣ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿ ಜಲಪಾತವು ಮೈದುಂಬಿಕೊಂಡಿದೆ. ನಾಪೋಕ್ಲು, ಭಾಗಮಂಡಲ, ತಲಕಾವೇರಿ ಭಾಗದಲ್ಲೂ ಮಳೆಯಾಗುತ್ತಿದೆ.

ಸತತ ಮಳೆ

ಸೋಮವಾರಪೇಟೆ: ಕಳೆದ ನಾಲ್ಕು ದಿನಗಳಿಂದ ತಾಲ್ಲೂಕಿನಾದ್ಯಂತ ಗಾಳಿ ಮಳೆ ಹೆಚ್ಚಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ಮಂಗಳವಾರ ಬೆಳಿಗ್ಗೆಯಿಂದಲೂ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಮೊದಲೇ ಲಾಕ್‌ಡೌನ್‌ನಿಂದಾಗಿ ರಸ್ತೆಯಲ್ಲಿ ಜನ ಸಂಚಾರ ಇಲ್ಲದಿರುವು ದರಿಂದ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಶಾಂತಳ್ಳಿ ಹೋಬಳಿಯಾದ್ಯಂತ ಬಿರುಸುಗೊಂಡಿರುವ ಮಳೆಯಿಂದಾಗಿ ಹೊಳೆ, ಕೊಳ್ಳಗಳು ತುಂಬಿ ಹರಿಯುತ್ತಿದೆ. ರಾಜ್ಯ ಸೇರಿದಂತೆ
ಹೊರ ರಾಜ್ಯದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿ ಜಲಪಾತ ಮೈದುಂಬಿ ಹರಿಯುತ್ತಿದೆ.

‘ನಿರಂತರ ಮಳೆಯಿಂದ ಜಲಪಾತಕ್ಕೆ ಸಾಕಷ್ಟು ನೀರು ಹರಿದು ಬರುತ್ತಿರುವುದರಿಂದ ಧುಮ್ಮಿಕ್ಕುತ್ತಿರುವ ಜಲಪಾತದ ದೃಶ್ಯ ಹಾಲ್ನೋರೆಯಂತೆ ಕಾಣುತ್ತಿದೆ. ಆದರೆ, ನಿಷೇಧ ಇರುವುದರಿಂದ
ಯಾವುದೇ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ’ ಎಂದು ಸ್ಥಳೀಯರಾದ ಶಿವಣ್ಣ ಹೇಳಿದರು.

ದಿನವೊಂದಕ್ಕೆ 90ರಿಂದ 100 ಮಿ.ಮೀ. ಮಳೆಯಾಗುತ್ತಿದೆ. ಈಗಾಗಲೇ 500 ಮಿ. ಮೀ. ಮಳೆಯಾಗಿರುವುದಾಗಿ ತಿಳಿಸಿದರು.

ಎಲ್ಲೆಲ್ಲಿ ಮಳೆ ಎಷ್ಟು: ಕಳೆದ 24 ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿಗೆ 94 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ 43, ಕೊಡ್ಲಿಪೇಟೆ 37, ಶನಿವಾರಸಂತೆ 36,
ಸುಂಟಿಕೊಪ್ಪ 29.2 ಹಾಗೂ ಕುಶಾಲನಗರದಲ್ಲಿ 15 ಮಿ.ಮೀ. ಮಳೆಯಾದ ವರದಿಯಾಗಿದೆ.

ಸಾಧಾರಣ ಮಳೆ

ವಿರಾಜಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಸಾಧಾರಣ ಮಳೆ ಸುರಿಯಿತು.

ಕಳೆದ 4 ದಿನಗಳಿಂದಲೂ ವಿರಾಜಪೇಟೆ ವಿಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಗದ್ದೆಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರುವ ನಿರೀಕ್ಷೆಯಿದೆ.

ಕದನೂರು, ಬೇಟೋಳಿ, ಆರ್ಜಿ, ಕಾಕೋಟುಪರಂಬು ಮತ್ತಿತರರ ಗ್ರಾಮಗಳ ವ್ಯಾಪ್ತಿಯಲ್ಲಿನ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಆರಂಭಿಸಲು ರೈತರು ಸಿದ್ಧತೆ ನಡೆಸಿದ್ದಾರೆ. ಕೆಲವೆಡೆ ಮೊದಲ ಸುತ್ತಿನ ಉಳುಮೆ ಕಾರ್ಯ ಪೂರ್ಣಗೊಂಡಿದೆ. ಕದನೂರು ಗ್ರಾಮದ ಉಪನದಿ ಹಾಗೂ ಭೇತ್ರಿಯಲ್ಲಿನ ಕಾವೇರಿ ಹೊಳೆಯ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.

ವಿರಾಜಪೇಟೆಯ ಪಟ್ಟಣ ವ್ಯಾಪ್ತಿ ಹಾಗೂ ಬೆಟ್ಟ ಪ್ರದೇಶಗಳಲ್ಲಿ ಮಳೆಯಿಂದ ಯಾವುದೇ
ಹಾನಿಯಾದ ಕುರಿತು ದೂರುಗಳು ಬಂದಿಲ್ಲ ಎಂದು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 38 ಮಿ.ಮೀ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT