ಮಂಗಳವಾರ, ನವೆಂಬರ್ 24, 2020
19 °C
ನೈಜ ಸೌಂದರ್ಯದ ರಾಜಾಸೀಟ್‌ ಉಳಿಯಲಿ; ಹಸಿರು ಹೆಸರಿನಲ್ಲಿ ‘ಕೋಟ್ಯಂತರ’ ರೂಪಾಯಿ ಕಾಮಗಾರಿ!

ಚರ್ಚೆಗೆ ಗ್ರಾಸವಾದ ರಾಜಾಸೀಟ್‌ ‘ಅಭಿವೃದ್ಧಿ’

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಹಸಿರು ಹೊಂದಿರುವ ಬೆಟ್ಟದ ಸಾಲು, ಸೂರ್ಯಾಸ್ತದ ಸೊಬಗು ನೋಡಲು ಹೆಸರಾದ ಪ್ರದೇಶ ಮಡಿಕೇರಿಯ ರಾಜಾಸೀಟ್‌. ಇಡೀ ವಿಶ್ವದ ಪ್ರವಾಸಿಗರನ್ನೇ ತನ್ನ ಸೆಳೆಯುವ ಅಪಾರ ಪ್ರಕೃತಿ ಸೌಂದರ್ಯದ ಗಣಿ. ಕೊಡಗಿಗೆ ಬಂದ ಯಾರೇ ಆಗಲಿ, ಈ ಪ್ರದೇಶಕ್ಕೆ ಭೇಟಿ ನೀಡಿದೇ ವಾಪಸ್‌ ತೆರಳುವುದಿಲ್ಲ. ನೈಜ ಸೌಂದರ್ಯಕ್ಕೆ ಹೆಸರಾದ ಪ್ರದೇಶವಿದು. ಮಳೆಗಾಲದಲ್ಲಿ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಪ್ರವಾಸಿಗರ ಸೆಳೆಯುತ್ತದೆ. ಅಲ್ಲೀಗ ‘ಕೋಟ್ಯಂತರ ರೂಪಾಯಿ ಕಾಮಗಾರಿಯ ಅಭಿವೃದ್ಧಿಯ ಲೇಪನ’ ಅಂಟಿಕೊಂಡಿದೆ.

ಕೃತಕ ಕಲಾಕೃತಿಗಳನ್ನು ಮತ್ತಷ್ಟು ತಂದಿಡಲು ಯೋಜನೆ ರೂಪಿಸಲಾಗಿದೆ. ಬೆಟ್ಟದ ಸಾಲಿಗೆ ಧಕ್ಕೆಯಾಗುವ ಹಾಗೂ ಕಾಂಕ್ರೀಟ್‌ ಮಯವಾಗುವ ಆತಂಕ ಎದುರಾಗಿದೆ.

ಈ ಅಭಿವೃದ್ಧಿ ಕಾಮಗಾರಿಗೆ ಪರಿಸರ ಪ್ರೇಮಿಗಳೂ ಸೇರಿದಂತೆ ಕೊಡಗಿನ ಹಲವರು ಆಕ್ಷೇಪಿಸಿದ್ದಾರೆ. ವೀಣಾ ಅಚ್ಚಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಬಳಸಿ ಕಾಮಗಾರಿ ನಡೆಸುತ್ತಿದ್ದ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

2018ರಲ್ಲಿ ರಾಜಾಸೀಟ್‌ ಕೆಳಭಾಗದಲ್ಲಿ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿತ್ತು. ಮಾನವ ಹಸ್ತಕ್ಷೇಪದಿಂದ ಬೆಟ್ಟಗಳು ಜರಿಯುತ್ತಿವೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಭೂವಿಜ್ಞಾನಿಗಳು ಎಚ್ಚರಿಸಿದ್ದರು. ಆದರೂ, ಅಲ್ಲಲ್ಲಿ ಯಂತ್ರ ಬಳಸಿ, ಗುಡ್ಡ ಅಗೆಯುವ ಕೆಲಸ ನಡೆಯುತ್ತಿವೆ ಎಂದು ಪರಿಸರ ಪ್ರೇಮಿಗಳು ದೂರಿದ್ದಾರೆ.

ಉದ್ಯಾನ ಆಗುವುದೇ ಕಾಂಕ್ರೀಟ್‌ ಮಯ:

ಪ್ರವಾಸೋದ್ಯಮ ಇಲಾಖೆ, ಲೋಕೋಪಯೋಗಿ ಇಲಾಖೆಯೇ ಹೇಳಿರುವಂತೆ ₹ 4.55 ಕೋಟಿ ಮೊತ್ತದ ಕಾಮಗಾರಿ ಅನುಮೋದನೆ ಸಿಕ್ಕಿದೆ. ಅದರಲ್ಲಿ ಈಗಾಗಲೇ ₹ 3.69 ಕೋಟಿ ಅನುದಾನವೂ ಬಿಡುಗಡೆಯಾಗಿದೆ. ಇಷ್ಟು ದೊಡ್ಡ ಮೊತ್ತದ ಹಣದಿಂದ ಏನೆಲ್ಲಾ ಕಾಮಗಾರಿ ನಡೆಸಬಹುದು ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಹಸಿರು ಬೆಳೆಸುವುದಕ್ಕೆ ಆಕ್ಷೇಪವಿಲ್ಲ. ಆದರೆ, ಕಾಂಕ್ರೀಟ್‌ ಮಯವಾಗುವ ಕಾಮಗಾರಿ ಕೈಗೊಂಡರೆ ಅದಕ್ಕೆ ಆಕ್ಷೇಪವಿದೆ ಎಂದು ವಿವಿಧ ಸಂಘಟನೆಗಳು ಎಚ್ಚರಿಸಿವೆ. ಪಾಥ್ ವೇ, ಎರಡು ವೀಕ್ಷಣಾ ಗೋಪುರ ಹಾಗೂ ಮೂರು ಅಲಂಕಾರಿಕ ಮಂಟಪಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಕಾಂಕ್ರೀಟ್‌ ಕಾಮಗಾರಿಯಿಂದ ರಾಜಾಸೀಟ್‌ ಮೇಲೆ ಮತ್ತಷ್ಟು ಒತ್ತಡ ಬೀಳುವುದಿಲ್ಲವೇ ಎಂದು ಪ್ರಶ್ನೆ ಎದುರಾಗಿದೆ.

ಆಸನ ಬೇಕಿತ್ತೆ?: ಉದ್ಯಾನ ಉದ್ದಕ್ಕೂ ಸಾಕಷ್ಟು ಆಸನಗಳಿವೆ. ಕೆಳಗಿರುವ ವ್ಯೂವ್‌ ಪಾಯಿಂಟ್‌ ಬಳಿಯೂ ಆಸನಗಳಿವೆ. ಬಿಸಿಲು, ಮಳೆಯ ಕಾರಣಕ್ಕೆ ಅವುಗಳಲ್ಲಿಯೇ ಪ್ರವಾಸಿಗರು ಹೆಚ್ಚು ಹೊತ್ತು ಕೂರುವುದಿಲ್ಲ. ಮತ್ತಷ್ಟು ಆಸನ ವ್ಯವಸ್ಥೆ ಬೇಕಿತ್ತೇ ಎಂದು ಹೋರಾಟಗಾರ ರವಿ ಅವರು ಪ್ರಶ್ನಿಸಿದ್ದಾರೆ.

ಹಿಂದೊಮ್ಮೊ ಮಾಜಿ ಸಚಿವ ಎಂ.ಸಿ.ನಾಣಯ್ಯ, ರಾಜಾಸೀಟ್‌ ಸಹಜ ಸೌಂದರ್ಯಕ್ಕೆ ಧಕ್ಕೆ ಮಾಡುವ ಕೆಲಸ ನಡೆಯುತ್ತಿದ್ದು ಪ್ರಾಣಿ ಕಲಾಕೃತಿಗಳು ತಂದು ಹಾಳು ಮಾಡಲಾಗುತ್ತಿದೆ. ಕೃತಕತೆ ಸೃಷ್ಟಿಸುವ ಕೆಲಸ ನಡೆಯುತ್ತಿದ್ದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಮಕ್ಕಳ ರೈಲಿನ ಪ್ರಸ್ತಾಪವೇ ಇಲ್ಲ:

ಇನ್ನು ಕಾರಂಜಿ ನಿರ್ಮಿಸಲಾಗಿದೆ. ಅದೂ ಪ್ರತಿನಿತ್ಯ ಚಿಮ್ಮುವುದಿಲ್ಲ. ‘ಮಕ್ಕಳ ರೈಲು’ ಕೆಟ್ಟು ನಿಂತು ಮೂರು ವರ್ಷವೇ ಕಳೆದಿದೆ. ₹ 4.55 ಕೋಟಿ ಯೋಜನೆಯಲ್ಲಿ ಅದರ ಪ್ರಸ್ತಾಪವೇ ಆಗಿಲ್ಲ. ಅದರ ನಡುವೆ ಹೊಸ ಕಾಮಗಾರಿ ಅನುಮೋದನೆ ಸಿಕ್ಕಿದೆ!

ನೈಜತೆಗೆ ಧಕ್ಕೆಯಾದರೆ ಹೋರಾಟ:

ಪ್ರಕೃತಿ ಸೌಂದರ್ಯಕ್ಕೆ ಮತ್ತು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುವ ಕಾಮಗಾರಿಗಳನ್ನು ಕೈಗೊಂಡರೆ ಹೋರಾಟ ನಡೆಸುತ್ತೇವೆ ಎಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಅವರು ಎಚ್ಚರಿಸಿದ್ದಾರೆ.

ಕೊಡಗಿನ ಭೌಗೋಳಿಕ ವಸ್ತುಸ್ಥಿತಿಯ ಅರಿವಿಲ್ಲದವರು, ಪ್ರಕೃತಿಗೆ ವಿರುದ್ಧವಾದ ಯೋಜನೆ ರೂಪಿಸಿ ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.