ಶನಿವಾರ, ಡಿಸೆಂಬರ್ 14, 2019
21 °C
ಅಬ್ಬಿ ಜಲಪಾತ, ಮಾಂದಲ್‌ಪಟ್ಟಿಗೆ ತೆರಳಲು ಪ್ರವಾಸಿಗರ ಸಾಹಸ

ರಸ್ತೆಯಲ್ಲಿ ಗುಂಡಿ ಹಾವಳಿ: ಸಂಚಾರ ದುಸ್ತರ

ವಿಕಾಸ್‌ ಬಿ. ಪೂಜಾರಿ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಜಿಲ್ಲೆಯ ಪ್ರಮುಖ ರಸ್ತೆಗಳ ಸ್ಥಿತಿ ಮತ್ತೆ ಚಿಂತಾಜನಕವಾಗಿದೆ. ಡಾಂಬರು ರಸ್ತೆಯಲ್ಲಿ ಮುಚ್ಚಿರುವ ಗುಂಡಿಗಳು ಮತ್ತೆ ಬಾಯಿ ಬಿಟ್ಟಿವೆ.

ಲೋಕೋಪಯೋಗಿ ಇಲಾಖೆ ಮುಚ್ಚಿರುವ ತೇಪೆ ಕಾರ್ಯ ಸಣ್ಣ ಮಳೆಗೂ ಎಲ್ಲೆಡೆ ಪ್ರದರ್ಶನಗೊಂಡು ಪ್ರವಾಸಿ ತಾಣಗಳಿರುವ ಮಡಿಕೇರಿಯ ಅಂದ ಕೆಡಿಸಿದೆ. ಸ್ವಲ್ಪ ದಿನದ ಹಿಂದೆ ಬಿಸಿಲು ಬಂದಿದ್ದ ಹಿನ್ನೆಲೆಯಲ್ಲಿ ಕೆಲವು ರಸ್ತೆಗಳ ದುರಸ್ತಿ ಕಾರ್ಯ ಪ್ರಾರಂಭಿಸಲಾಗಿತ್ತು. ಆದರೆ, ಇದೀಗ ಸಣ್ಣ ಮಳೆಗೂ ತೇಪೆ ಕಾರ್ಯ ಪ್ರಯೋಜನ ಇಲ್ಲ ಎಂಬುದು ಸಾಬೀತಾಗಿದೆ.

ಪ್ರವಾಸಿಗರ ಹೆಚ್ಚು ವಾಹನಗಳು ಸಾಗುವ ಭಾಗಮಂಡಲ– ತಲಕಾವೇರಿ ರಸ್ತೆ, ಅಬ್ಬಿ ಜಲಪಾತ ರಸ್ತೆ, ಮಾಂದಲ್‌ ಪಟ್ಟಿ ರಸ್ತೆಗಳ ಸ್ಥಿತಿ ಚಿಂತಾಜನಕವಾಗಿದೆ. ಜಲ್ಲಿಕಲ್ಲುಗಳು ರಸ್ತೆ ಮೇಲೆ ಹರಡಿದ್ದು ವಾಹನ ಸವಾರರನ್ನು ಅಪಾಯಕ್ಕೆ ದೂಡುತ್ತಿವೆ. ಅಂಕುಡೊಂಕಾದ ರಸ್ತೆಯಲ್ಲಿ ಸಂಚಾರ ಮಾಡೋದೇ ಕೆಲವರ ಸಾಹಸ ಈ ನಡುವೆ ರಸ್ತೆ ಹದಗೆಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈಚೆಗೆ ಅಬ್ಬಿ ಫಾಲ್ಸ್‌ ರಸ್ತೆಯಲ್ಲಿ ಕಾಟಾಚಾರಕ್ಕೆಂದು ರಸ್ತೆಯ ಗುಂಡಿ ಮುಚ್ಚುವ ಕಾರ್ಯವೂ ನಡೆದಿತ್ತು. ಆದರೆ, ಗುಂಡಿ ಮುಚ್ಚಿದ ಎರಡೇ ದಿನಕ್ಕೆ ಡಾಂಬರು ಕಿತ್ತು ಬಂದಿದೆ. ಮಾಂದಲಪಟ್ಟಿ ಸೇರಿದಂತೆ ಮೆಡಿಕಲ್ ಕಾಲೇಜು, ಆರ್‌ಟಿಒ ಕಚೇರಿಗೂ ಇದೇ ಮಾರ್ಗದಲ್ಲಿ ಸಾಗಬೇಕು. ಇದರಿಂದ ನಗರಕ್ಕೆ ಬರುವ ನಿವಾಸಿಗಳು, ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ದ್ವಿಚಕ್ರ ವಾಹನ ಸವಾರರ ಪರಿಸ್ಥಿತಿ  ಹೇಳತೀರದು. ಕೆಸರಿನ ರಸ್ತೆಯಲ್ಲಿ ಎದ್ದು ಬಿದ್ದು ಹೋಗಬೇಕಾದ ದುಸ್ಥಿತಿಯೇ ನಿರ್ಮಾಣವಾಗಿದೆ. ಮುತ್ತಪ್ಪ ದೇವಾಲಯದಿಂದ ಅಬ್ಬಿಫಾಲ್ಸ್‌ವರೆಗೆ ರಸ್ತೆ ಡಾಂಬರೀಕರಣ ಕೆಲಸ ನಡೆಯುತ್ತಿದೆ. ಆದರೆ, ಕಾಟಾಚಾರಕ್ಕೆ ತೇಪೆ ಹಚ್ಚಿಕೊಂಡಿದ್ದು, ಒಂದೇ ದಿನದಲ್ಲಿ ಕಿತ್ತು ಹೋಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ರೀತಿ ಕಳಪೆ ಕಾಮಗಾರಿ ನಡೆಸಿರೋದು ಸರಿಯಲ್ಲ. ರಸ್ತೆ ಬದಿಗಳಲ್ಲಿಯೂ ಸರಿಯಾಗಿ ಕಾಡು ಕಡಿದಿರಲಿಲ್ಲ. ಈ ಬಗ್ಗೆ ಸ್ಥಳೀಯ ಪಂಚಾಯಿತಿಗೆ ಮನವಿ ಸಲ್ಲಿಸಿದ್ದೇವೆ. ರಸ್ತೆಯ ಕಳಪೆ ಕಾಮಗಾರಿಯ ಬಿಲ್ ಮಾಡಲು ನಾವು ಬಿಡುವುದಿಲ್ಲ. ಸ್ಥಳೀಯರೆಲ್ಲಾ ಸೇರಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಹೆಬ್ಬೆಟ್ಟಗೇರಿ ಗ್ರಾಮಸ್ಥ ರಮೇಶ್ ಎಚ್ಚರಿಸಿದ್ದಾರೆ.

ರಸ್ತೆಗಳು ಜನಸಾಮಾನ್ಯರು ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದೆ. ಸಣ್ಣ ಗುಂಡಿಗಳು ಮಳೆಗೆ ದೊಡ್ಡ ಗುಂಡಿಗಳಾಗಿವೆ. ಕೆಲವೊಂದು ರಸ್ತೆಗಳಿಗೆ ನಾಮಕಾವಸ್ಥೆಗಿಂದ ತೇಪೆ ಹಚ್ಚಿದ್ದಾರೆ. ಎಂಜಿನಿಯರ್ ಸ್ಥಳ ಪರಿಶೀಲನೆ ಮಾಡದೇ ಸರ್ಕಾರದ ಅನುದಾನಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆಟೋ ಮಾಲೀಕರ ಮತ್ತು ಚಾಲಕರ ಸಂಘ ಅಧ್ಯಕ್ಷ ಮೇದಪ್ಪ ದೂರಿದರು.

ಪ್ರತಿಕ್ರಿಯಿಸಿ (+)