ಭಾನುವಾರ, ಆಗಸ್ಟ್ 14, 2022
28 °C
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ ತುಣುಕು

ರಾಯ್ ಡಿಸೋಜಾ ಸಾವು: ಸಿಐಡಿ ಅಧಿಕಾರಿಗಳಿಂದ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಜಪೇಟೆ (ಕೊಡಗು): ರಾಯ್ ಡಿಸೋಜಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡ ದೂರುದಾರರನ್ನು ಹಾಗೂ ಸಾಕ್ಷಿಗಳನ್ನು ಮಂಗಳವಾರ ವಿಚಾರಣೆಗೊಳಪಡಿಸಿತು.

ಡಿವೈಎಸ್ಪಿ ದರ್ಜೆಯ ಅಧಿಕಾರಿ ನೇತೃತ್ವದ ಸಿಐಡಿ ತಂಡ, ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಮಂಗಳವಾರ ದಿನವಿಡೀ ವಿಚಾರಣೆ ನಡೆಸಿತು. ವಿಶೇಷವಾಗಿ ಈ ಸಂದರ್ಭ ರಾಯ್ ಡಿಸೋಜಾ ಅವರ ತಾಯಿ ಮೆಟಿಲ್ಡಾ ಲೋಬೊ ಹಾಗೂ ಕೆಲ ಸಾಕ್ಷಿಗಳ ವಿಚಾರಣೆ ನಡೆಸಿ ಮಾಹಿತಿಯನ್ನು ದಾಖಲಿಸಿಕೊಂಡಿದ್ದಾಗಿ ತಿಳಿದುಬಂದಿದೆ.

ಹರಿದಾಡಿದ ವಿಡಿಯೊ:

ರಾಯ್ ಡಿಸೋಜಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಹೇಳಲಾದ ಕೆಲ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕತ್ತಲಿರುವುದರಿಂದ ವಿಡಿಯೊದಲ್ಲಿನ ವ್ಯಕ್ತಿಗಳ ಮುಖ ಸ್ಪಷ್ಟವಾಗಿ ಗೋಚರಿಸುವುದಿಲ್ಲ.

ಮೊದಲ ವಿಡಿಯೊದಲ್ಲಿ ಪಟ್ಟಣದ ಮಲಬಾರ್ ರಸ್ತೆಯಲ್ಲಿನ ಪೆಟ್ರೋಲ್ ಬಂಕ್‌ ಬಳಿ ರಸ್ತೆಗೆ ಅಡ್ಡಲಾಗಿ ಬಂದ ವ್ಯಕ್ತಿಯೊಬ್ಬ ಆಯುಧವನ್ನು ಹಿಡಿದು ಬೈಕ್ ಸವಾರನ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ಹಲ್ಲೆಯಿಂದ ಬೈಕ್ ಸವಾರ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೈಕ್ ಕೆಳಗೆ ಬೀಳುತ್ತದೆ. ಅದೇ ಸಮಯಕ್ಕೆ ಅಲ್ಲಿಗೆ ಜೀಪೊಂದು ಬಂದಾಗ ಹಲ್ಲೆಗೆ ಮುಂದಾದ ವ್ಯಕ್ತಿ, ಅಲ್ಲಿಂದ ಓಡಿ ಹೋಗುತ್ತಾನೆ. ಆಗ ಬೈಕ್ ಸವಾರ ಹಾಗೂ ಜೀಪಿನಿಂದ ಇಳಿದ ಮತ್ತೊಬ್ಬ ವ್ಯಕ್ತಿ ಆತನ ಬೆನ್ನಟ್ಟುತ್ತಾರೆ.

2ನೇ ವಿಡಿಯೋದಲ್ಲಿ, ಕೈಯಲ್ಲಿ ಆಯುಧ ಹಿಡಿದಿರುವ ವ್ಯಕ್ತಿ ಪಟ್ಟಣದಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗ ಅತ್ತಿಂದಿತ್ತ ಓಡಾಡುತ್ತಾ ಯಾರಿಗೋ ಬೈಯುತ್ತಾ, ‘ಪತ್ರಿಕೆಯವರನ್ನು ಹಾಗೂ ಎಸ್ಪಿಯನ್ನು ಕರೆಸು, ಕರೆ ಮಾಡು' ಎಂದಲ್ಲದೆ ಬೇರೆ ಏನೋ ಹೇಳುತ್ತಿದ್ದು ಅಸ್ಪಷ್ಟವಾಗಿದೆ. ವಿಡಿಯೊದಲ್ಲಿ ಠಾಣೆಯ ಮುಂಭಾಗ ಪೊಲೀಸ್ ಸಿಬ್ಬಂದಿ ನಿಂತಿರುವುದು ಹಾಗೂ ಚಿತ್ರೀಕರಣ ಮಾಡುತ್ತಿರುವ ವ್ಯಕ್ತಿಗಳು ‘ಆತ ಮಾನಸಿಕ ಅಸ್ವಸ್ಥನೇ ಇರಬೇಕು’ ಎಂದು ಆಯುಧ ಹಿಡಿದ ವ್ಯಕ್ತಿಯ ಬಗ್ಗೆ ಮಾತನಾಡಿಕೊಳ್ಳುತ್ತಿರುವುದು ಇದೆ.

3ನೇ ವಿಡಿಯೋದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ಕೈಗೆ ಗಾಯವಾಗಿ ರಕ್ತ ಸುರಿಯುತ್ತಿರುವ ಚಿತ್ರವಿದೆ.

ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾದ ಕಾನ್‌ಸ್ಟೆಬಲ್‌ ಸಂಗಮೇಶ, ರಾಯ್‌ ವಿರುದ್ಧ ದೂರು ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.