ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ: ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ, ಎಸ್‌ಪಿ ಭೇಟಿ

ಸಿದ್ದಾಪುರ: ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ, ಎಸ್‌ಪಿ ಭೇಟಿ
Last Updated 29 ಮೇ 2021, 4:09 IST
ಅಕ್ಷರ ಗಾತ್ರ

ಸಿದ್ದಾಪುರ: ನೆಲ್ಯಹುದಿಕೇರಿ ಹಾ‌ಗೂ ಸಿದ್ದಾಪುರ ವ್ಯಾಪ್ತಿಯ ನದಿ ದಡದ ಪ್ರವಾಹಪೀಡಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ಶುಕ್ರವಾರ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪರಿಶೀಲಿಸಿದರು.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು, ಗುಹ್ಯ ಹಾಗೂ ನೆಲ್ಯಹುದಿಕೇರಿ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕಾಡು, ಕುಂಬಾರಗುಂಡಿ, ಬರಡಿ ಭಾಗದ ನದಿ ದಡದಲ್ಲಿ ಪ್ರತಿ ವರ್ಷವೂ ಪ್ರವಾಹ ಉಂಟಾಗುತ್ತಿದ್ದು, ನದಿ ದಡದ ಮನೆಗಳು ಪ್ರವಾಹಕ್ಕೆ ತುತ್ತಾಗುತ್ತಿದ್ದವು. 2019 ಹಾಗೂ 2020ರ ಮಳೆಗಾಲದಲ್ಲಿ ಉಂಟಾದ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ ನದಿ ದಡದ ನಿವಾಸಿಗಳು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಬಳಿಕ ನದಿ ದಡದಲ್ಲೇ ತಾತ್ಕಾಲಿಕ ಶೆಡ್ ನಿರ್ಮಿಸಿ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಮಳೆಗಾಲ ಆರಂಭದ ಸನಿಹದಲ್ಲಿದ್ದು, ಪ್ರವಾಹದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಪರಿಶೀಲಿಸಿದರು.

ಬಳಿಕ‌‌ ಮಾತನಾಡಿದ ಜಿಲ್ಲಾಧಿಕಾರಿಗಳು, ‘ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿದ್ದು, ಕೊರೊನಾ ಇರುವ ಕಾರಣ ಹೆಚ್ಚು ಪರಿಹಾರ ಕೇಂದ್ರ ಆರಂಭಿಸುವ ಬಗ್ಗೆ ಚರ್ಚಿಸಲಾಗಿದೆ’ ಎಂದರು.

‘ಅಧಿಕಾರಿಗಳು ಸೂಚನೆ ನೀಡಿದ ಕೂಡಲೇ ನಿವಾಸಿಗಳು ಪರಿಹಾರ ಕೇಂದ್ರಕ್ಕೆ ತೆರಳಿ ಸಹಕರಿಸಬೇಕು’ ಎಂದು ಹೇಳಿದರು.

ಸಂತ್ರಸ್ತರ ನಿವೇಶನ ಜಾಗಕ್ಕೆ ಭೇಟಿ: ನೆಲ್ಯಹುದಿಕೇರಿ ಭಾಗದ ನದಿ ದಡದ ಸಂತ್ರಸ್ತರಿಗೆ ನಿವೇಶನ‌ ಕಲ್ಪಿಸುವ ನಿಟ್ಟಿನಲ್ಲಿ ಅಭ್ಯತ್ ಮಂಗಲ ಗ್ರಾಮದ ಒತ್ತುವರಿ ತೆರವುಗೊಳಿಸಿದ ಜಾಗಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.

ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ವಿರಾಜಪೇಟೆ ತಹಶೀಲ್ದಾರ್‌ ಡಾ.ಯೋಗಾನಂದ, ಸೋಮವಾರಪೇಟೆ ತಹಶೀಲ್ದಾರ್‌ ಗೋವಿಂದರಾಜು, ಕಂದಾಯ ಪರಿವೀಕ್ಷಕ ಹರೀಶ್, ಪಿಡಿ‌ಒ ವಿಶ್ವನಾಥ್, ಅನಿಲ್ ಕುಮಾರ್, ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ತುಳಸಿ, ನೆಲ್ಯಹುದಿಕೇರಿ ಗ್ರಾ.ಪಂ ಸಾಬು ವರ್ಗೀಸ್, ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಅಧ್ಯಕ್ಷೆ ಅನಿತಾ, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಸೇರಿದಂತೆ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT