ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಾಪುರ: ಕೆಲಸ ತೊರೆದು ಊರಿಗೆ ಬಂದು ಕುಕ್ಕುಟೋದ್ಯಮದಲ್ಲಿ ಯಶಸ್ಸು ಕಂಡ ಸುದೀಶ್

Published 21 ಜೂನ್ 2024, 8:19 IST
Last Updated 21 ಜೂನ್ 2024, 8:19 IST
ಅಕ್ಷರ ಗಾತ್ರ

ಸಿದ್ದಾಪುರ: ಬೆಂಗಳೂರಿನ ಕಂ‍ಪ‍ನಿಗಳಲ್ಲಿ ಗ್ರಾಫಿಕ್ ಡಿಸೈನರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಲ್ಲಿನ ಪುಲಿಯೇರಿ ಗ್ರಾಮದ ನಿವಾಸಿ ಸುದೀಶ್ ಇದೀಗ ಯಶಸ್ವಿ ಕುಕ್ಕುಟ್ಟೋದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಕುಟುಂಬಸ್ಥರು ಹಾಗೂ ಅಮ್ಮತ್ತಿ ಗ್ರಾಮ ಪಂಚಾಯಿತಿಯವರ ಸಹಕಾರದಿಂದ, ವಿಶಾಲವಾದ ಕೋಳಿ ಗೂಡು ನಿರ್ಮಿಸಿರುವ ಇವರು ನಾಟಿ ಹಾಗೂ ಗಿರಿರಾಜ ಕೋಳಿಗಳನ್ನು ಸಾಕುತ್ತಿದ್ದಾರೆ.

ಪ್ರಸ್ತುತ ಸುಮಾರು 230 ಗಿರಿರಾಜ ಕೋಳಿ ಹಾಗೂ ಸುಮಾರು 150 ನಾಟಿಕೋಳಿಗಳಿವೆ. ಸ್ಥಳೀಯವಾಗಿ ಕೋಳಿಗಳನ್ನು ಮಾಂಸಕ್ಕೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ, ಕೋಳಿ ಸಾಕಾಣಿಕೆ ಮಾಡುವವರಿಗೆ ಮರಿಗಳನ್ನೂ ಮಾರಾಟ ಮಾಡುತ್ತಿದ್ದಾರೆ.

ಈಗ ಕೋಳಿ ಮಾಂಸಕ್ಕೆ ಉತ್ತಮ ದರವಿದ್ದು, ಉತ್ತಮ ಲಾಭ ಕಂಡುಕೊಂಡಿದ್ದಾರೆ. ಇದಲ್ಲದೇ ಪ್ರತಿದಿನ ಸುಮಾರು 200 ಮೊಟ್ಟೆಗಳನ್ನು ಸೂಪರ್ ಮಾರ್ಕೆಟ್ ಹಾಗೂ ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿದಿನ ಅಂದಾಜು ₹ 2 ಸಾವಿರ ಮೊಟ್ಟೆಯಿಂದಲೇ ಲಭ್ಯವಾಗುತ್ತಿದೆ.

ಬೆಂಗಳೂರಿನ ಕೆನ್ ಕಲಾ ಶಾಲೆಯಿಂದ ಆರ್ಟ್ ಮಾಸ್ಟರ್ ಪಡೆದಿರುವ ಸುದೀಶ್, ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ, ಚಿತ್ರಸಂತೆ, ಚಿತ್ರಕಲಾ ಪರಿಷತ್ತು ಸೇರಿದಂತೆ ವಿವಿಧ ಭಾಗದಲ್ಲಿ ಚಿತ್ರಕಲೆ ಪ್ರದರ್ಶಿಸಿದ್ದರು. ತಮ್ಮ ಬೆಂಗಳೂರಿನ ಸ್ನೇಹಿತರು ಗ್ರಾಫಿಕ್ ಕೆಲಸಕ್ಕಾಗಿ ಕರೆ ಮಾಡಿದರೇ, ಈಗಲೂ ಮನೆಯಲ್ಲಿಯೇ ಕುಳಿತು ಅವರಿಗೆ ಅಗತ್ಯವಿರುವ ವಿನ್ಯಾಸದ ಗ್ರಾಫಿಕ್ಸ್ ಮಾಡಿ ಕಳುಹಿಸುತ್ತಿದ್ದಾರೆ. ಸುದೀಶ್ ಪತ್ನಿ ಶ್ರುತಿ ಪಿ.ವಿ ಅವರು ಸಿದ್ದಾಪುರದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಗ್ರಾಮದ ಸಾರ್ವಜನಿಕ ಕೆಲಸಗಳಲ್ಲಿಯೂ ಸುದೀಶ್ ಭಾಗಿಯಾಗುತ್ತಿದ್ದಾರೆ.

ಸುದೀಶ್ ಅವರಿಗೆ ಅರ್ಧಎಕರೆ ಸ್ವಂತ ಜಾಗವಿದ್ದು, ಕಾಫಿ, ಕರಿಮೆಣಸು ಹಾಗೂ ಅಡಿಕೆಯನ್ನು ಬೆಳೆಸಿದ್ದಾರೆ. ಕೋಳಿ ಸಾಕಾಣಿಕೆಯೊಂದಿಗೆ ತೋಟದಲ್ಲಿ ಗಿಡ ನೆಡುವುದು, ಗಿಡಗಳ ಹಾರೈಕೆ ಮಾಡುತ್ತಿದ್ದಾರೆ. ಕಾಫಿ ತೋಟದಿಂದ ವಾರ್ಷಿಕ ಆದಾಯ ಪಡೆಯುತ್ತಿದ್ದಾರೆ.

ಕೋವಿಡ್‌ ಕಾಲಕ್ಕೆ ಊರಿಗೆ ಮರಳಿ ಕೋಳಿ ಸಾಕಾಣಿಕೆ ಆರಂಭಿಸಿದೆ. ಕೃಷಿ, ಹೈನುಗಾರಿಕೆಯಿಂದ ಉತ್ತಮ ಲಾಭವಿದೆ. ಮನೆಯ ಸಮೀಪದಲ್ಲೇ ಗೂಡು ನಿರ್ಮಿಸಿದ್ದು, ಕೋಳಿ ಹಾಗೂ ಮೊಟ್ಟೆ ಮಾರಾಟ ಮಾಡುತ್ತಿದ್ದೇನೆ.
ತೇಕುಮ್ ಕಾಟಿಲ್ ಸುದೇಶ್, ಪುಲಿಯೇರಿ ಕುಕ್ಕುಟೋದ್ಯಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT