ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲು, ಮಳೆಯ ಕಣ್ಣಾಮುಚ್ಚಾಲೆ

ತಗ್ಗಿದ ಮಳೆ, ಮತ್ತೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ
Published 29 ಜೂನ್ 2024, 6:36 IST
Last Updated 29 ಜೂನ್ 2024, 6:36 IST
ಅಕ್ಷರ ಗಾತ್ರ

ಮಡಿಕೇರಿ: ಒಂದೆರಡು ದಿನಗಳ ಕಾಲ ಅಬ್ಬರಿಸಿದ ಆರಿದ್ರಾ ಮಳೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಮತ್ತೆ ಬಿರುಸಿನ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಮಧ್ಯೆ ಮಡಿಕೇರಿಯಲ್ಲಿ ಬಿಸಿಲು, ಮಳೆಯ ಕಣ್ಣಾಮುಚ್ಚಾಲೆಯಾಟ ಶುಕ್ರವಾರ ಕಂಡು ಬಂತು.

ಬೆಳಿಗ್ಗೆಯಿಂದಲೂ ಬಿಸಿಲು ಒಂದಿಷ್ಟು ಹೊತ್ತು, ಮಳೆ ಒಂದಷ್ಟು ಹೊತ್ತು ಬೀಳುತ್ತಿತ್ತು. ಕೆಲ ಹೊತ್ತು ಜಿಟಿಜಿಟಿಯಾಗಿ ಮಳೆ ಸುರಿದು, ಶೀತಮಯ ವಾತಾವರಣ ಸೃಷ್ಟಿಸಿತು. ಮತ್ತೆ ಬಿಸಿಲು ಮೂಡಿ ಆಹ್ಲಾದಕಾರ ವಾತಾವರಣ ಮೂಡುತ್ತಿತ್ತು.

ಗಾಳಿಯ ವೇಗವೂ ತುಸು ಕಡಿಮೆ ಇತ್ತು. ದಟ್ಟವಾಗಿ ಮೋಡ ಕವಿಯಿತು ಎನ್ನುವಷ್ಟರಲ್ಲಿ ಬಿಸಿಲು ಇಣುಕಿ ನೋಡುತ್ತಿತ್ತು. ಇಂತಹ ಅಪರೂಪದ ವಾತಾವರಣ ಕಂಡ ಪ್ರವಾಸಿಗರು ಪುಳಕಿತರಾದರು.

ಮಳೆ ಕಡಿಮೆಯಾದರೂ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಏರಿಕೆಯಾಯಿತು. ಗುರುವಾರ 1,425 ಕ್ಯುಸೆಕ್‌ ಇದ್ದ ಒಳಹರಿವು ಶುಕ್ರವಾರ 2,562 ಕ್ಯುಸೆಕ್‌ಗೆ ಏರಿಕೆ ಕಂಡಿತು. 2832.65 ಅಡಿ ಇದ್ದ ಜಲಾಶಯದ ಮಟ್ಟ 2835.28 ಅಡಿಗೆ ಹೆಚ್ಚಳ ಕಂಡಿತು.

ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 6 ಸೆಂ.ಮೀನಷ್ಟು ಮಳೆ ಸುರಿದಿರುವುದು ಬಿಟ್ಟರೆ ಉಳಿದ ಕಡೆ ಹೆಚ್ಚಿನ ಮಳೆಯಾಗಿಲ್ಲ. ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ 3, ಸಂಪಾಜೆ ಹೋಬಳಿ, ಪೊನ್ನಂಪೇಟೆ ಹೋಬಳಿ, ವಿರಾಜಪೇಟೆ ಹಾಗೂ ಸುತ್ತಮುತ್ತಲ ಪ್ರದೇಶಗಳು, ಶ್ರೀಮಂಗಲ ವ್ಯಾಪ್ತಿಯಲ್ಲಿ ತಲಾ 2 ಸೆಂ.ಮೀನಷ್ಟು ಮಳೆಯಾಗಿದೆ.

ಬುಧವಾರವಷ್ಟೇ ಕಲ್ಲು, ಮಣ್ಣು ಕುಸಿದು ಹಾನಿಗೀಡಾಗಿದ್ದ ಕೊಯನಾಡಿನ ಸರ್ಕಾರಿ ಶಾಲೆಗೆ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಣ್ಣು ಕುಸಿದ ಭಾಗದಲ್ಲಿ ನಡೆಯುತ್ತಿದ್ದ ಎಲ್ಲ 3 ತರಗತಿಗಳನ್ನು ಸುರಕ್ಷಿತವಾದ ಬೇರೆ ಕೊಠಡಿಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಿದರು. ಯಾವುದೇ ಸಂದರ್ಭವಾದರೂ ಸರಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಕಡೆಗೆ ಗಮನ ಕೊಡಬೇಕು ಎಂದು ಅವರು ಮುಖ್ಯ ಶಿಕ್ಷಕರಿಗೆ ಸೂಚಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಅವರು ಕೊಯನಾಡು ಶಾಲೆಗೆ ಶುಕ್ರವಾರ ಭೇಟಿ ನೀಡಿ ಮಳೆ ಹಾನಿ ವೀಕ್ಷಿಸಿದರು.
ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಅವರು ಕೊಯನಾಡು ಶಾಲೆಗೆ ಶುಕ್ರವಾರ ಭೇಟಿ ನೀಡಿ ಮಳೆ ಹಾನಿ ವೀಕ್ಷಿಸಿದರು.

ಅನಧಿಕೃತ ‘ಗಾಜಿನ ಸೇತುವೆ’

ವೀಕ್ಷಣೆ ಬಂದ್ ಮಡಿಕೇರಿಯಲ್ಲಿನ ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಶುಕ್ರವಾರ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಅವರು ಗಾಜಿನ ಸೇತುವೆ ವೀಕ್ಷಣೆ ಹಾಗೂ ಶಾಲಾ ಮಕ್ಕಳ ಸುರಕ್ಷತೆ ವಿಚಾರಗಳಿಗೆ ಆದ್ಯತೆ ನೀಡಿ ಚರ್ಚೆ ನಡೆಸಿದರು. ಅಂತಿಮವಾಗಿ ಅವರು ಸೆ. 15ರವರೆಗೆ ಅನಧಿಕೃತ ಗಾಜಿನ ಸೇತುವೆಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರುವ ಕುರಿತು ನಿರ್ಧರಿಸಿದರು. ಈ ಕುರಿತು ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಅವರು ಸಭೆಯಲ್ಲಿ ಹೇಳಿದರು. ಜಿಲ್ಲೆಯಲ್ಲಿ ಯಾವುದೇ ರೀತಿಯ ಸುರಕ್ಷತೆ ಇಲ್ಲದ ಗಾಜಿನ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಸುರಕ್ಷತೆ ಇಲ್ಲದಿರುವ ಗಾಜಿನ ಸೇತುವೆಗಳಿಗೆ ಪಿಡಿಒಗಳು ಹೇಗೆ ಎನ್‌ಒಸಿ ನೀಡುತ್ತಾರೆ. ಸಭೆಯ ನಡಾವಳಿ ಮಾಡಿಕೊಂಡು ‘ಎನ್‌ಒಸಿ’ ನೀಡಿದರೆ ಸಾಕೆ ಸುರಕ್ಷತೆ ಬೇಡವೇ ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗಾಜಿನ ಸೇತುವೆ ವೀಕ್ಷಣೆಗೆ ಭೇಟಿ ನೀಡುವುದರಿಂದ ಏನಾದರೂ ತೊಂದರೆಯಾದಲ್ಲಿ ಯಾರು ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎಂದೂ ಪ್ರಶ್ನಿಸಿದರು. ಶಾಲೆಗಳು ಸೇರಿದಂತೆ ಸರ್ಕಾರಿ ಕಟ್ಟಡಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಶಿಥಿಲ ವ್ಯವಸ್ಥೆಯಲ್ಲಿರುವ ಶಾಲೆಗಳ ಮಾಹಿತಿ ನೀಡಬೇಕು. ಈ ಸಂಬಂಧ ಅಗತ್ಯ ಕ್ರಮವಹಿಸುವಂತೆ ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್‌ಗಳಿಗೆ ಅವರು ಸೂಚಿಸಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಯಾರೂ ಸಹ ಕೇಂದ್ರ ಸ್ಥಾನದಿಂದ ಹೊರಗೆ ಹೋಗಬಾರದು. ಬೆಂಗಳೂರಿನಲ್ಲಿ ಸಭೆ ಇದೆ ಎಂದು ತೆರಳಬಾರದು. ಈ ಸಂಬಂಧ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿ ವಿನಾಯತಿ ಪಡೆಯಲಾಗುವುದು ಎಂದು ಅವರು ಹೇಳಿದರು. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ್ ಅವರು ಪ್ರವಾಹಪೀಡಿತ ಪ್ರದೇಶಗಳಲ್ಲಿ ಮುನ್ನಚ್ಚರಿಕೆ ವಹಿಸಲಾಗಿದೆ ಎಂದರು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT