ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ: ಆಗಸ್ಟ್ 3ರಂದು ಕಕ್ಕಡ ಮಾಸ ಪದಿನೆಟ್ ಸಂಭ್ರಮ

ಮಧುಬನ ಗಿಡದ ಸೊಪ್ಪು ಹಾಗೂ ಮರಕೆಸ ಸೇವನೆಗೆ ಸಕಲ ತಯಾರಿ
Last Updated 3 ಆಗಸ್ಟ್ 2022, 5:22 IST
ಅಕ್ಷರ ಗಾತ್ರ

ಶನಿವಾರಸಂತೆ: ಕರ್ಕಾಟಕ ಮಾಸದ 18ನೇ ದಿನವಾದ ಆಗಸ್ಟ್ 3ರಂದು ಬುಧವಾರ ‘ಕಕ್ಕಡ ಪದಿನೆಟ್ ಹಾಗೂ ತುಳು ಭಾಷಿಗರ ‘ಆಟಿ ಪದಿನೆಣ್ಮ’ ಆಚರಣೆಗೆ ಕೊಡಗು ಜಿಲ್ಲೆಯಲ್ಲಿ ಸಕಲ ತಯಾರಿಗಳು ನಡೆದಿವೆ.

ಈ ಮಾಸ ಮಳೆಗಾಲದ ಮಧ್ಯ ಭಾಗವಾಗಿದ್ದು, ಇಂದು ಸಮುದ್ರಕ್ಕೆ ಹಾಲು ಸುರಿಯುವ ದಿನ ಹಾಗೂ ಕಡಲು ತನ್ನ ಒಡಲನ್ನು ಸಂಪೂರ್ಣ ತುಂಬಿ ಉಕ್ಕುವುದೆಂಬ ಪ್ರತೀತಿ ಇದೆ.

ಕೊಡಗಿನ ಜನರ ಕೃಷಿ ಚಟುವಟಿಕೆಯ ‘ಕಕ್ಕಡ ಪದಿನೆಟ್ ಹಾಗೂ ತುಳು ಭಾಷಿಗರ ‘ಆಟಿ ಪದಿನೆಣ್ಮ’ ಆಚರಣೆ ಪ್ರತಿವರ್ಷದಂತೆ ಈ ವರ್ಷವೂ ಸಂಪ್ರದಾಯಬದ್ಧವಾಗಿ ಆಚರಿಸಲಾಗುತ್ತಿದೆ. ಕನ್ನಡ ಭಾಷಿಗರ ‘ಆಷಾಢ’ ಎಂಬ ಪದವೇ ಕೊಡವರ ‘ಕಕ್ಕಡ ’ಹಾಗೂ ತುಳು ಭಾಷಿಗರ ’ಆಟಿ’ ಆಚರಣೆಯಾಗಿದೆ.

ಕೊಡಗಿನಲ್ಲಿ ಕಕ್ಕಡ ಮಾಸ ಅಥವಾ ಆಟಿ ತಿಂಗಳ 18ನೇ ದಿನವನ್ನು ಆಯುರ್ವೇದ ಸಂಬಂಧದ ಜಾನಪದ ಹಬ್ಬವನ್ನಾಗಿ ಆಚರಿಸುವುದು ವಿಶೇಷ. ಅಂದು ಸಂಪ್ರದಾಯದಂತೆ ಸಾಮೂಹಿಕವಾಗಿ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿ, ನಂತರ ಮನೆಯಲ್ಲಿ ಮಧುಬನ ಅಥವಾ ಮದ್ದುಸೊಪ್ಪಿನ ಪಾಯಸ ಹಾಗೂ ಮರಕೆಸುವಿನ ಪತ್ರೊಡೆಯೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಕಕ್ಕಡ ಪದಿನೆಟ್ ಹಾಗೂ ಆಟಿ ಪದಿನೆಣ್ಮದ ವೈಶಿಷ್ಟ್ಯವೇ ಮದ್ದುಸೊಪ್ಪಿನ ಪಾಯಸ ಸೇವನೆ. ಮಧುಬನ ಹಸಿರು ಎಲೆಗಳಿಂದ ಕೂಡಿದ ಪೊದೆಯಂತೆ ಬೆಳೆಯುವ ಸಸ್ಯ. ಉದ್ದನೆಯ ಕಡ್ಡಿಯಲ್ಲಿ ಎಲೆಗಳು ತುಂಬಿರುತ್ತವೆ. ಕಕ್ಕಡ ಅಥವಾ ಆಟಿ ತಿಂಗಳ ಆರಂಭ ದಿನದಿಂದ ಹಿಡಿದು ಮಧುಬನ ಗಿಡದಲ್ಲಿ ಒಂದೊಂದು ವಿಧದ ಔಷಧಿಯ ಗುಣಗಳು ಸೇರಲಾರಂಭಿಸುತ್ತದೆಯಂತೆ. 18ನೇ ದಿನದಂದು 18 ವಿಧದ ಔಷಧಿಗಳು ಸೇರಿ ಸಂಪೂರ್ಣವಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನದಂದು ಮಾತ್ರ ಅದು ಸುವಾಸನಾಭರಿತವಾಗಿರುತ್ತದೆ.

‘ಮನೆಯ ಹಿತ್ತಲಲ್ಲಿ ಬೆಳೆಯುವ ಮಧುಬನ ಗಿಡದ ಸೊಪ್ಪನ್ನು ಕಕ್ಕಡ ಪದಿನೆಟ್ ರಂದು ಕೊಯ್ದು ನಾವೂ ಅಕ್ಕಿಯೊಂದಿಗೆ ಪಾಯಸ, ಕೇಸರಿಬಾತ್ ಮಾಡಿ ಉಪಯೋಗಿಸುತ್ತೇವೆ. ಅಲ್ಲದೇ ಬಂಧುಗಳಿಗೆ, ಸ್ನೇಹಿತರಿಗೆ ಹಾಗೂ ಅಕ್ಕಪಕ್ಕದವರಿಗೆಲ್ಲಾ ಮದ್ದು ಸೊಪ್ಪು ಜತೆಗೆ ಮಾಡಿದ ಸಿಹಿಯನ್ನು ಹಂಚಿ, ಖುಷಿಪಡುತ್ತೇವೆ’ ಎನ್ನುತ್ತಾರೆ ತಾಲ್ಲೂಕು ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಹೊನ್ನೆಂಗಡ ಸುಮತಿಸತ್ಯ ಮತ್ತು ಕುಟುಂಬಸ್ಥರು.

18ನೇ ದಿನದಂದು ಮಧುಬನವನ್ನು ತಂದು ಕೇಸರಿ ಬಾತ್ ಹಾಗೂ ಅಕ್ಕಿ ಪಾಯಸ ಇಲ್ಲವೇ ವಿವಿಧ ರೀತಿಯ ಅನ್ನದ ಅಡುಗೆಯನ್ನು ತಯಾರಿಸಿ ಸವಿಯಲಾಗುತ್ತದೆ. ಆರೋಗ್ಯಕ್ಕೆ ಒಳ್ಳೆಯದೆಂಬ ಭಾವನೆಯೇ ಮಧುಬನದ ಸೇವನೆಗೆ ಕಾರಣ ಎಂದು ಹೇಳಲಾಗುತ್ತದೆ.

ಮದ್ದುಸೊಪ್ಪನ್ನು ದಂಟಿನ ಸಹಿತ ನೀರಿನಲ್ಲಿ ಚೆನ್ನಾಗಿ ಬೇಯಿಸಲಾಗುತ್ತದೆ. ನಂತರ, ಆ ನೀರನ್ನು ಸೋಸಿ ಕಡು ನೇರಳೆ ಹಣ್ಣಿನ ಬಣ್ಣದ ನೀರನ್ನು ಬಳಸಿ, ರವೆ, ಸಕ್ಕರೆ, ಗೋಡಂಬಿ–ದ್ರಾಕ್ಷಿ ಮತ್ತು ತುಪ್ಪ ಸೇರಿಸಿ ಕೇಸರಿಭಾತ್ ಸಹ ಮಾಡಲಾಗುತ್ತದೆ. ಇಲ್ಲವೇ ಆ ನೀರಿನಲ್ಲಿ ಅಕ್ಕಿ, ಬೆಲ್ಲ, ಕಾಯಿತುರಿ ಸೇರಿಸಿ ಅನ್ನ ಮಾಡುತ್ತಾರೆ. ಸುವಾಸನೆಯುಕ್ತ ಕಡುಬಣ್ಣದ ಖಾದ್ಯ ಸವಿಯಲು ತುಂಬಾ ರುಚಿಯಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಔಷಧೀಯ ಗುಣಗಳಿವೆ ಎಂಬ ಕಾರಣಕ್ಕಾಗಿಯೇ ಮಧುಬನ ಸೊಪ್ಪಿನ ಪಾಯಸವಾಗಲೀ ಸಿಹಿ ಅನ್ನವಾಗಲಿ ಇಲ್ಲವೇ ತುಪ್ಪದನ್ನವಾಗಲಿ ಮಕ್ಕಳಾದಿಯಾಗಿ ಹಿರಿಯರಿಗೂ ಇಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT