ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಜ‍‍ಪೇಟೆ: ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಪೊಲೀಸರ ‘ಮೊಬೈಲ್’ ಕಣ್ಣು

ವಿರಾಜ‍‍ಪೇಟೆಯಲ್ಲಿ ಜಾರಿಗೆ ಬಂದಿತು ಅತ್ಯಾಧುನಿಕ ವಿಧಾನ, 20 ದಿನದಲ್ಲಿ 200ಕ್ಕೂ ಅಧಿಕ ಪ್ರಕರಣ ಪತ್ತೆ
ಹೇಮಂತ್ ಎಂ.ಎನ್
Published 13 ಜೂನ್ 2024, 6:20 IST
Last Updated 13 ಜೂನ್ 2024, 6:20 IST
ಅಕ್ಷರ ಗಾತ್ರ

ವಿರಾಜಪೇಟೆ: ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ವಿನೂತನ ಕಾರ್ಯಾಚರಣೆಯನ್ನು ಸದ್ದಿಲ್ಲದೇ ಪೊಲೀಸರು ಆರಂಭಿಸಿದ್ದಾರೆ. ಈ ನೂತನ ವಿಧಾನದಿಂದ ಕೇವಲ 20 ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯ 200ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.

ಪಟ್ಟಣದ ಮಟ್ಟಿಗೆ ಹೊಸತು ಎನಿಸುವ ಈ ಕ್ರಮ ಅನೇಕರಿಗೆ ಅಚ್ಚರಿಯನ್ನೂ ತಂದಿದೆ. ಈ ಕ್ರಮದಿಂದ ಸಂಚಾರ ನಿಯಮ ಪಾಲನೆ ಇನ್ನಷ್ಟು ಕರಾರುವಕ್ಕಾಗಿಯಾಗಬಹುದು ಎಂಬುದು ಪೊಲೀಸರ ಲೆಕ್ಕಾಚಾರ.

ಸಂಚಾರ ನಿಯಮ ಉಲ್ಲಂಘಿಸಿದ ಸವಾರರನ್ನು ಒಳಗೊಂಡಂತೆ ವಾಹನ ಚಿತ್ರವನ್ನು ಸ್ಥಳದಲ್ಲಿದ್ದ ಪೊಲೀಸರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಂಬಂಧಿಸಿದ ಅಧಿಕಾರಿಗೆ ಕಳುಹಿಸುತ್ತಾರೆ. ಆ ಅಧಿಕಾರಿ ಚಿತ್ರದಲ್ಲಿರುವ ವಾಹನ ಸಂಖ್ಯೆಯನ್ನು ಆಧರಿಸಿ ವಾಹನದ ಮಾಲೀಕರ ವಿಳಾಸ ಸೇರಿದಂತೆ ದೂರವಾಣಿ ಸಂಖ್ಯೆಯನ್ನು ಪತ್ತೆ ಹಚ್ಚುತ್ತಾರೆ. ಈ ವೇಳೆ ಅಧಿಕಾರಿಯು ವಾಹನದ ವಿಮೆ, ಫಿಟ್ನೆಸ್ ಪ್ರಮಾಣ ಪತ್ರ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ತಪಾಸಣೆ ನಡೆಸಲಿದ್ದಾರೆ. ಈ ಸಂದರ್ಭ ವಿಮೆ ಸೇರಿದಂತೆ ಫಿಟ್ನೆಸ್ ಪ್ರಮಾಣ ಪತ್ರವೂ ಸಮರ್ಪವಾಗಿಲ್ಲದಿದ್ದಲ್ಲಿ ಈ ಕುರಿತು ಕ್ರಮಕೈಗೊಳ್ಳಲಿದ್ದಾರೆ.

ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಗೆ ನಿಗದಿತ ದಂಡ ತೆರುವಂತೆ ಒಂದೆರಡು ದಿನಗಳಲ್ಲಿ ನೋಟಿಸ್ ನೀಡಲಾಗುವುದು. ನೋಟಿಸ್‌ಗೆ ಆತ ಸ್ಪಂದಿಸದೆ ದಂಡವನ್ನು ಪಾವತಿಸದಿದ್ದಲ್ಲಿ ನ್ಯಾಯಾಲಯದ ಮೂಲಕ ನೋಟಿಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಲ್ಮೆಟ್ ಸೇರಿದಂತೆ ಸಾಮಾನ್ಯ ನಿಯಮ ಉಲ್ಲಂಘನೆ ₹ 500 ದಂಡ ವಿಧಿಸಲಾಗುತ್ತಿದೆ. ಪಟ್ಟಣದ ವಿವಿಧ ಭಾಗದಲ್ಲಿನ ಟ್ರಾಫಿಕ್ ಪಾಯಿಂಟ್ ಸೇರಿದಂತೆ ಪಟ್ಟಣದ ಬಹುತೇಕ ಭಾಗದಲ್ಲಿ ನಿಯಮ ಉಲ್ಲಂಘಿಸುತ್ತಿರುವವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಇದರಿಂದ ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿಯ ಸವಾರ ಹೆಲ್ಮೆಟ್ ಧರಿಸದಿರುವುದು, ಮೂವರು ಸವಾರರು ಸಂಚರಿಸುವುದು, ನಾಲ್ಕು ಚಕ್ರ ವಾಹನ ಸವಾರರು ಸೀಟ್ ಬೆಲ್ಟ್ ಧರಿಸದಿರುವುದು, ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡದಿರುವುದು, ಆಟೊ ಸೇರಿದಂತೆ ಹಳದಿ ನಂಬರ್ ಪ್ಲೇಟ್ ಹೊಂದಿರುವ ವಾಹನ ಚಾಲಕರು ಸಮವಸ್ತ್ರ ಧರಿಸದಿರುವುದು, ದೋಷಪೂರಿತ ನಂಬರ್ ಪ್ಲೇಟ್ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆಗೆ ಈ ಮೂಲಕ ದಂಡ ವಿಧಿಸಲಾಗುತ್ತಿದೆ.

ಪಟ್ಟಣದ ವ್ಯಾಪ್ತಿಯಲ್ಲಿ ಕಳೆದ 20 ದಿನಗಳಿಂದ 200ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಸುಮಾರು 70ಕ್ಕು ಹೆಚ್ಚು ಮಂದಿ ದಂಡ ಪಾವತಿ ಮಾಡಿದ್ದಾರೆ. ಉಳಿದವರಿಗೆ ನೋಟಿಸ್ ನೀಡಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿರಾಜಪೇಟೆ ನಗರ ಠಾಣೆಯ ಎಸ್.ಐ ರವೀಂದ್ರ ಅವರು ಮಾಹಿತಿ ನೀಡಿದರು.

ವಿರಾಜಪೇಟೆ ಪಟ್ಟಣದಲ್ಲಿ ನಿಯಮ ಉಲ್ಲಂಘಿಸಿದ ವಾಹನ ಸವಾರರ ಚಿತ್ರವನ್ನು ಸೆರೆ ಹಿಡಿಯುತ್ತಿರುವ ಪೊಲೀಸ್ ಸಿಬ್ಬಂದಿ
ವಿರಾಜಪೇಟೆ ಪಟ್ಟಣದಲ್ಲಿ ನಿಯಮ ಉಲ್ಲಂಘಿಸಿದ ವಾಹನ ಸವಾರರ ಚಿತ್ರವನ್ನು ಸೆರೆ ಹಿಡಿಯುತ್ತಿರುವ ಪೊಲೀಸ್ ಸಿಬ್ಬಂದಿ
ವಿರಾಜಪೇಟೆ ಪಟ್ಟಣದಲ್ಲಿ ನಿಯಮ ಉಲ್ಲಂಘಿಸಿದ ವಾಹನ ಸವಾರರ ಚಿತ್ರವನ್ನು ಸೆರೆ ಹಿಡಿಯುತ್ತಿರುವ ಪೊಲೀಸ್ ಸಿಬ್ಬಂದಿ
ವಿರಾಜಪೇಟೆ ಪಟ್ಟಣದಲ್ಲಿ ನಿಯಮ ಉಲ್ಲಂಘಿಸಿದ ವಾಹನ ಸವಾರರ ಚಿತ್ರವನ್ನು ಸೆರೆ ಹಿಡಿಯುತ್ತಿರುವ ಪೊಲೀಸ್ ಸಿಬ್ಬಂದಿ
ಅಪಘಾತ ತಡೆಗಟ್ಟಲು ಡಿವೈಎಸ್ಪಿ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ನಿಯಮ ಉಲ್ಲಂಘಿಸಿದ ವಾಹನಗಳ ಚಿತ್ರ ಸೆರೆಹಿಡಿದು ನೋಟಿಸ್ ನೀಡುವ ಮೂಲಕ ದಂಡ ವಿಧಿಸಲಾಗುತ್ತಿದೆ
-ರವೀಂದ್ರ ಎಸ್.ಐ ವಿರಾಜಪೇಟೆ ನಗರ ಪೊಲೀಸ್ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT