ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಸಮಸ್ಯೆಗಳ ಪ್ರಸ್ತಾವ; ಪರಿಹರಿಸುವ ಭರವಸೆ ನೀಡಿದ ಡಿ.ಸಿ

ರೈತರಿಗೆ ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಮಾರಾಟ ಸಂಬಂಧಿಸಿದಂತೆ ಸಭೆ
Last Updated 19 ಸೆಪ್ಟೆಂಬರ್ 2022, 16:16 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳು ರೈತರಿಗೆ ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಮಾರಾಟ ಸಂಬಂಧಿಸಿದಂತೆ ಇಲ್ಲಿನ ಕೆಳಗಿನ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ಹಲವು ಸಮಸ್ಯೆಗಳನ್ನು ಮಾರಾಟಗಾರರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಮುಂದೆ ಪ್ರಸ್ತಾಪಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ, ‘ಜಿಲ್ಲೆಯಲ್ಲಿರುವ ಸಹಕಾರ ಸಂಘಗಳು ರೈತರಿಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದು, ಸೆ. 8ರಂದು ವಿರಾಜಪೇಟೆಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಸಹಕಾರ ಸಂಘಗಳ ಮೂಲಕ ರೈತರಿಗೆ ಗೊಬ್ಬರದ ಜೊತೆಯಲ್ಲಿ ಲಘು ಪೋಷಕಾಂಶಗಳನ್ನು ಜೋಡಿಸಿ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ದೂರುಗಳು ಬಂದಲ್ಲಿ ಗೊಬ್ಬರ ಮಾರಾಟದ ಪರವಾನಗಿಯನ್ನು ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಪತ್ರದಲ್ಲಿ ತಿಳಿಸಿದ್ದಾರೆ’ ಎಂದು ಅತೃಪ್ತಿ ವ್ಯಕ್ತಪಡಿಸಿದರು.

‘ಜಿಲ್ಲೆಯ ಸಹಕಾರ ಸಂಘಗಳಿಂದ ಲಘುಪೋಷಕಾಂಶಗಳಿಗೆ ಬೇಡಿಕೆ ಇಲ್ಲದಿದ್ದರೂ ರಸಗೊಬ್ಬರ ಸರಬರಾಜು ಮಾಡುವ ವಿತರಕರು ಪೋಷಕಾಂಶಗಳನ್ನು ಗೊಬ್ಬರದ ಜೊತೆಯಲ್ಲಿ ಲಿಂಕ್ ಮಾಡಿ ಕಳುಹಿಸುತ್ತಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದಾಗ ರೈತರ ಮನವೊಲಿಸಿ ಲಘುಪೋಷಕಾಂಶಗಳನ್ನು ವಿತರಿಸುವಂತೆ ಜಂಟಿ ನಿರ್ದೇಶಕರು ಸಭೆಯಲ್ಲಿ ಸಲಹೆ ನೀಡಿದ್ದಾರೆ. ಗೊಬ್ಬರ ವಿತರಕ ಸಂಸ್ಥೆಯವರು 13 ಟನ್ ಎಂಒಪಿ ಗೊಬ್ಬರಕ್ಕೆ 2 ಟನ್ ಪಾಲಿ ಸಲ್ಫೇಟ್ ಹಾಗೂ 13 ಟನ್ ಯೂರಿಯಾದ ಜೊತೆಯಲ್ಲಿ 24 ಲೀಟರ್ ನ್ಯಾನೋ ಯೂರಿಯಾವನ್ನು ಜೋಡಿಸಿ ಕಳುಹಿಸುತ್ತಾರೆ’ ಎಂದು ದೂರಿದರು.

‘ರೈತರಿಗೆ ಲಘು ಪೋಷಕಾಂಶಗಳನ್ನು ವಿತರಿಸಬೇಕಾದ ಅನಿವಾರ್ಯತೆ ಸಹಕಾರ ಸಂಘಗಳಿಗೆ ಎದುರಾಗಿದೆ. ಈ ವಿಚಾರವು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರ ಗಮನಕ್ಕೂ ಬಂದಿರುತ್ತದೆ. ಆದರೂ, ಗೊಬ್ಬರ ಮಾರಾಟದ ಪರವಾನಗಿಯನ್ನು ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವುದು ಸರಿಯಲ್ಲ’ ಎಂದರು.

ನಂತರ ಗೊಬ್ಬರ ವಿತರಕ ಸಂಸ್ಥೆಯವರು ಮಾತನಾಡಿ, ‘ಕೊಡಗು ಜಿಲ್ಲೆಗೆ ಇನ್ನು ಮುಂದೆ ಲಘು ಪೋಷಕಾಂಶಗಳನ್ನು ಒತ್ತಾಯ ಪೂರ್ವಕವಾಗಿ ಸರಬರಾಜು ಮಾಡುವುದಿಲ್ಲ ಹಾಗೂ ಗೊಬ್ಬರದ ಜೊತೆಯಲ್ಲಿ ಲಿಂಕ್ ಮಾಡುವುದಿಲ್ಲ’ ಎಂದು ಸಭೆಗೆ ಆಶ್ವಾಸನೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಷೇಕ್ ಪ್ರತಿಕ್ರಿಯಿಸಿ, ‘ರಸಗೊಬ್ಬರ ಪೂರೈಕೆ ಸಂಬಂಧಿಸಿದಂತೆ ಜಿಲ್ಲೆಗೊಂದು ನೀತಿ ಮಾಡಿದರೆ ಒಳ್ಳೆಯದು. ಕೃಷಿಗೆ ಸಂಬಂಧಿಸಿದಂತೆ ಭತ್ತ ಮತ್ತು ಮುಸುಕಿನ ಜೋಳ ಕೃಷಿ ಮಂಡಳಿಗೆ ಪತ್ರ ಬರೆದು ರಸಗೊಬ್ಬರ ಬೇಡಿಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೊಡಗು ಜಿಲ್ಲೆಗೆ ದರ ನಿಗದಿಯಾಗಿಲ್ಲ. ಈ ಬಗ್ಗೆ ಕೃಷಿ ಸಚಿವರ ಗಮನಕ್ಕೆ ತರಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ‘ಸಹಕಾರ ಸಂಘಗಳ ಮೂಲಕ ರಸಗೊಬ್ಬರ ಮಾರಾಟ ಮಾಡುವವರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ತಮ್ಮ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಪೂವಯ್ಯ, ನಿರ್ದೇಶಕರಾದ ರಮೇಶ್, ರಘು ನಾಣಯ್ಯ, ಅರುಣ್ ಭೀಮಯ್ಯ, ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಎನ್.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT