ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹40 ಕೋಟಿ ವೆಚ್ಚದಲ್ಲಿ ನೀರಿನ ಯೋಜನೆ: ಡಾ.ಮಂತರ್ ಗೌಡ

ಕುಶಾಲನಗರ: ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಮೋದ್ ಮುತ್ತಪ್ಪ ಅಧಿಕಾರ ಸ್ವೀಕಾರ
Published 4 ಜುಲೈ 2024, 5:19 IST
Last Updated 4 ಜುಲೈ 2024, 5:19 IST
ಅಕ್ಷರ ಗಾತ್ರ

ಕುಶಾಲನಗರ: ತಾಲ್ಲೂಕು ಕೇಂದ್ರ ಕುಶಾಲನಗರ ಪಟ್ಟಣಕ್ಕೆ ಅಮೃತ್ -2 ಯೋಜನೆಯಡಿ ₹40 ಕೋಟಿ ಅನುದಾನದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರದಲ್ಲಿ ಜಾರಿ ಮಾಡಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ಭರವಸೆ ನೀಡಿದರು.

ಪಟ್ಟಣದ ಕಾವೇರಿ ಬಡಾವಣೆಯಲ್ಲಿ ಬುಧವಾರ ಏರ್ಪಡಿಸಿದ್ದ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಕುಶಾಲನಗರಕ್ಕೆ ₹2 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.

ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಸುವಾಗ ಯೋಜನಾಬದ್ಧವಾಗಿ ನಡೆಸುವ ಜವಬ್ದಾರಿ ಪ್ರಾಧಿಕಾರದ ಮೇಲಿದೆ. ಹೊಸ ಯೋಜನೆಗಳು ಮತ್ತು ಕಾಮಗಾರಿ ನಡೆಸುವಾಗ ಕಾನೂನಿನ ಚೌಕಟ್ಟಿನಲ್ಲಿ ನಿಯಮಗಳನ್ನು ಪಾಲಿಸಿ ನಡೆಸುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವ‌ ನಿಟ್ಟಿನಲ್ಲೂ ಪ್ರಾಧಿಕಾರ ಕೆಲಸ‌ಮಾಡಬೇಕು ಎಂದರು.

ಜನಸಾಮಾನ್ಯರ ಕೆಲಸ ಕಾರ್ಯಗಳು ಕಾನೂನಿನ‌ ಚೌಕಟ್ಟಿನಲ್ಲಿ ನಡೆಯುವಂತಾಗಬೇಕಿದೆ. ಜನಸೇವೆಗೆ ನೂತನ ಪದಾಧಿಕಾರಿಗಳು ಹಾಗೂ ಅಧಿಕಾರಿ ವರ್ಗದವರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಧಿಕಾರದ ದರ್ಪ ತೋರದೆ ಕಚೇರಿಗೆ ಬರುವವರನ್ನು ಸೌಜನ್ಯದಿಂದ ಮಾತನಾಡಿಸಿ, ರಾಜಕೀಯ ರಹಿತವಾಗಿ ಸ್ಪಂದಿಸಿ ಕುಶಾಲನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸಬೇಕಿದೆ ಎಂದು ಕರೆ ನೀಡಿದರು.

ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ‌ ಮಾತನಾಡಿ,
ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯನಗರಿಯಲ್ಲಿ ಹಲವು ಪ್ರಮುಖ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ಇದನ್ನು ಸುಸೂತ್ರವಾಗಿ ನಿರ್ವಹಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಪ್ರಾಧಿಕಾರಕ್ಕಿದೆ. ಪಟ್ಟಣವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಅವಕಾಶವನ್ನು ನೂತನ ಪದಾಧಿಕಾರಿಗಳು ಎಲ್ಲರ ಸಹಕಾರದ ಮೂಲಕ ಸಮರ್ಥವಾಗಿ ನಿಭಾಯಿಸಬೇಕು ಎಂದರು.

ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ‌ ಪ್ರಮೋದ್ ಮುತ್ತಪ್ಪ ಮಾತನಾಡಿ,
ಕಾಂಗ್ರೆಸ್ ಯುವ ಘಟಕದ‌ ಅಧ್ಯಕ್ಷನಾಗಿ ಮತ್ತು ನಗರ ಘಟಕದ ಅಧ್ಯಕ್ಷನಾಗಿ ಪಟ್ಟಣ ಪಂಚಾಯತಿ ಹಾಗೂ ಪುರಸಭೆ ಸದಸ್ಯನಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ನನ್ನ ಕಾರ್ಯವೈಖರಿಯನ್ನು ಗಮನಿಸಿ ಪಕ್ಷ ಇದೀಗ ಯೋಜನಾ‌ ಪ್ರಾಧಿಕಾರದ ಅಧ್ಯಕ್ಷನಾಗಿ ಆಯ್ಕೆ ಮಾಡಿದೆ. ಈ ಜವಾಬ್ದಾರಿಯನ್ನು ಸಾಮಾಜಿಕ ಕಳಕಳಿಯಿಂದ‌ ನಿರ್ವಹಿಸುತ್ತೇಣೆ ಎಂದು ಹೇಳಿದರು.

ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಊರಿನ ಆಸ್ತಿಗಳನ್ನು ಉಳಿಸುವಲ್ಲಿ ಪ್ರಾಧಿಕಾರದ ಪದಾಧಿಕಾರಿಗಳು ದುಡಿಯಬೇಕು.
ತಾವರೆಕೆರೆ, ಸೋಮೇಶ್ವರ ಕೆರೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು ಎಂದರು.

ಕೆಪಿಸಿಸಿ‌ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ತಹಶೀಲ್ದಾರ್ ಕಿರಣ್ ಗೌರಯ್ಯ, ಪುರಸಭಾ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸ್ವಾತಿ ಸೇರಿದಂತೆ ಪುರಸಭಾ ಸದಸ್ಯರುಗಳು, ಕಾಂಗ್ರೆಸ್ ವಿವಿಧ ಘಟಕಗಳ ಪ್ರಮುಖರು ಇದ್ದರು.

ಅಧಿಕಾರಿ ಸ್ವೀಕಾರ: ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಪ್ರಮೋದ್ ಮುತ್ತಪ್ಪ, ಸದಸ್ಯರಾಗಿ ವಿ.ಎಸ್.ಸಜಿ, ಸಂಗೀತ, ಕೆ.ಆರ್.ಕಿರಣ್ ಕುಮಾರ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ಕುಶಾಲನಗರದ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ‌ ಸಲ್ಲಿಸಿ, ಪ್ರಾಧಿಕಾರದ ಕಚೇರಿಯಲ್ಲಿ ಹೋಮ‌ ನೆರವೇರಿಸಿದ ಬಳಿಕ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT