ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರವಾಸೋದ್ಯಮಕ್ಕೆ ಪರಿಸರಸ್ನೇಹಿ ಸ್ಪರ್ಶ ಸಿಗಲಿ’

ಮಡಿಕೇರಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ
Last Updated 28 ಸೆಪ್ಟೆಂಬರ್ 2022, 5:24 IST
ಅಕ್ಷರ ಗಾತ್ರ

ಮಡಿಕೇರಿ: ಪ್ರವಾಸೋದ್ಯಮ ಪರಿಸರಸ್ನೇಹಿಯಾಗಿರಬೇಕು ಎಂಬ ಆಶಯ ಇಲ್ಲಿ ಮಂಗಳವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಅಭಿವ್ಯಕ್ತಗೊಂಡಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ ವತಯಿಂದ ‘ಪ್ರವಾಸೋದ್ಯಮದ ಪುನರಾವಲೋಕನ’ ಎಂಬ ಶೀರ್ಷಿಕೆಯಡಿ ಹೋಟೆಲ್ ಲೀ ಕೂರ್ಗ್‍ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ. ಪರಿಸರಸ್ನೇಹಿಯಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದರತ್ತ ಎಲ್ಲರೂ ಕೈಜೋಡಿಸಬೇಕಿದೆ. ಕುಶಾಲನಗರದಲ್ಲಿ ಪ್ರವಾಸೋದ್ಯಮ ಮಾರ್ಗದರ್ಶಿ ಮಾಹಿತಿ ಕೇಂದ್ರ ತೆರೆಯಬೇಕು ಎಂಬ ಪ್ರಸ್ತಾಪವಿದೆ ಎಂದರು.

ಸಿಂಗಾಪುರ ಮತ್ತು ಮಲೇಷಿಯಾ ರಾಷ್ಟ್ರಗಳು ಪ್ರವಾಸೋದ್ಯಮವನ್ನೇ ಆರ್ಥಿಕತೆಯನ್ನಾಗಿ ಬಳಸಿಕೊಂಡು ಮುನ್ನಡೆಯುತ್ತಿವೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಹ ಕೃಷಿ ಜೊತೆಗೆ ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ‘ಕೊಡಗು ಜಿಲ್ಲೆ ಪ್ರಾಕೃತಿಕವಾಗಿ ತನ್ನದೇ ಆದ ಸ್ಥಾನ ಹೊಂದಿದ್ದು, ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ. ಪ್ರವಾಸಿಗರು ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇನ್ನಷ್ಟು ಪ್ರವಾಸಿಗರು ಭೇಟಿ ನೀಡುವಲ್ಲಿ ಇಲ್ಲಿನ ಪ್ರವಾಸಿತಾಣಗಳ ಬಗ್ಗೆ ನಿಖರ ಮಾಹಿತಿ ಒದಗಿಸಬೇಕಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿಯಂತೆ ಗ್ರೇಟರ್ ರಾಜಸೀಟು ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ. ಸದ್ಯದಲ್ಲೇ ಗ್ರೇಟರ್ ರಾಜಸೀಟು ಉದ್ಘಾಟನೆಯಾಗಲಿದೆ. ಚೇಲಾವರ, ಅಬ್ಬಿ ಜಲಪಾತ ಹೀಗೆಯೇ ಜಿಲ್ಲೆಯ ಜಲಪಾತ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಮತ್ತಿತರ ಕಾರ್ಯಗಳು ನಡೆಯುತ್ತಿವೆ ಎಂದರು.

ಕೊಡಗು ಜಿಲ್ಲೆಯಲ್ಲಿ ಕಾಫಿ ಟೇಬಲ್ ಬುಕ್ ಹೊರ ತರಲಾಗುತ್ತದೆ. ಖಾಸಗಿಯವರ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಅವರು ತಿಳಿಸಿದರು.

ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷ ನಾಗೇಂದ್ರಪ್ರಸಾದ್ ಮಾತನಾಡಿ, ‘ಕೊಡಗು ಜಿಲ್ಲೆ 20 ವರ್ಷಗಳ ಹಿಂದೆ ಪ್ರವಾಸೋದ್ಯಮದಲ್ಲಿ ಅಷ್ಟಾಗಿ ಬೆಳವಣಿಗೆ ಹೊಂದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದ್ದು, 1.50 ಲಕ್ಷ ಜನರು ಹೋಟೆಲ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.

ಟ್ರಾವೆಲ್ ಕೂರ್ಗ್ ಅಸೋಷಿಯೇಷನ್ ಅಧ್ಯಕ್ಷ ಚೆಯ್ಯಂಡ ಸತ್ಯ ಮಾತನಾಡಿ, ‘ಕೊಡಗು ಉತ್ಸವ ಆಯೋಜಿಸಬೇಕು’ ಎಂದು ಸಲಹೆ ನೀಡಿದರು.

ಹೋಂಸ್ಟೇ ಅಸೋಷಿಯೇಷನ್‍ನ ಮೋಂತಿ ಗಣೇಶ್, ನಾಣಿ, ಯೋಗಾನಂದ, ನವೀನ್ ಅಂಬೆಕಲ್ ಇತರರು ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಿದರು.

ಪೌರಾಯುಕ್ತ ವಿಜಯ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಯತೀಶ್ ಉಳ್ಳಾಲ್, ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷ ಕರ್ನಲ್ ಭರತ್, ಪ್ರವಾಸೋದ್ಯಮ ಜಿಲ್ಲಾ ಸಂಯೋಜಕ ಜತೀನ್ ಬೋಪಣ್ಣ ಇದ್ದರು.

ಪ್ರವಾಸೋದ್ಯಮ ಇಲಾಖೆಯಿಂದ ಏರ್ಪಡಿಸಲಾಗಿದ್ದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಎಸ್.ಮದನ್ ಮತ್ತು ಯತಿರಾಜು (ಪ್ರಥಮ), ಎಚ್.ಟಿ.ಅನಿಲ್ ಮತ್ತು ಪಿ.ಆರ್.ಶುಭ (ದ್ವಿ), ಶಭಾಜ್ ಆಸಿಂ ಮತ್ತು ಮಿಥುನ್ ಚಂಗಪ್ಪ (ತೃ), ವಿಡಿಯೊ ವಿಭಾಗದಲ್ಲಿ ಎಚ್.ಟಿ.ಅನಿಲ್ (ಪ್ರ), ಗೋಪಾಲ್ ಸೋಮಯ್ಯ (ದ್ವಿ), ವಿನಯ್ ಕುಮಾರ್ (ತೃ).

ಪ್ರೌಢಶಾಲಾ ವಿಭಾಗದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪಿ.ವೈ.ರಿಷಬ್ (ಪ್ರ), ನಗರದ ಸಂತ ಜೋಸೆಫರ ಶಾಲೆಯ ಎನ್.ಕೆ.ಪುನೀತ್ (ದ್ವಿ) ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT