ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Year Ender - 2022| ಕೊಡಗು: ಮಳೆ, ಕುಸಿತದ ಆತಂಕ –  ದಸರೆ, ಹಬ್ಬ ಸಾಂತ್ವನ

ವರ್ಷದ ಸಿಂಹಾವಲೋಕನ, ಹರುಷದ ಸಿಹಿ, ಸಂಕಷ್ಟಗಳ ಕಹಿ ಹೂರಣ– 2022
Last Updated 30 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2022 ಸಿಹಿ, ಕಹಿಗಳ ಹೂರಣದಂತೆ ಕಂಡು ಬಂತು.

2018, 2019ರಷ್ಟು ಪ್ರಮಾಣದ ವಿಕೋಪಗಳು ಸಂಭವಿಸಲಿಲ್ಲ ಎನ್ನುವ ಸಮಾಧಾನ, 2020, 2021ರಷ್ಟು ಕೋವಿಡ್‌ನ ನಿರ್ಬಂಧಗಳು ಬರಲಿಲ್ಲ ಎಂಬ ತೃಪ್ತಿ ಜನರಿಗಾಯಿತು. ಆದರೆ, 2022ರ ಮುಂಗಾರು ಪೂರ್ವದಿಂದ ಆಗಸವೇ ತೂತು ಬಿದ್ದ ಹಾಗೆ ಚಳಿಗಾಲದವರೆಗೂ ಸುರಿದ ಮಳೆಯಿಂದ ಕಾಫಿ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳೂ ಹಾನಿಯಾದವು. ಅನ್ನದಾತ ಅಕ್ಷರಶಃ ಮಳೆಗೆ ನಲುಗಿ ಹೋದ. ಬೆಳೆಗಾರರು ಚಿಂತಿತರಾದರು. ಈ ಕಹಿಯ ನಡುವೆಯೂ ಅದ್ಧೂರಿ ದಸರೆ, ತೀರ್ಥೋದ್ಭವಗಳು ನೆರವೇರಿದರೆ, ಕ್ರೀಡಾ ಚಟುವಟಿಕೆಗಳು ಮತ್ತೆ ಗರಿಗೆದರಿದವು. ಜತೆಗೆ, ವರ್ಷಾಂತ್ಯದಲ್ಲಿ ಪ್ರವಾಸೋದ್ಯಮವೂ ಚಿಗುರೊಡೆಯಿತು.

ಇವುಗಳ ಮಧ್ಯೆ ಹೆಚ್ಚಿದ ವನ್ಯಜೀವಿ ಮಾನವ ಸಂಘರ್ಷ, ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಕೊಡಗಿನ 54 ಪ್ರದೇಶಗಳು ಸೇರ್ಪಡೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಮೊಟ್ಟೆ ಎಸೆತದಂತಹ ಪ್ರಕರಣ
ಗಳೂ ಸಾಕಷ್ಟು ಸಂಚಲನ ಸೃಷ್ಟಿಸಿದವು.

ಮುಖ್ಯವಾಗಿ ಹುಲಿ ಮತ್ತು ಕಾಡಾನೆಗಳ ದಾಳಿಗೆ ಒಳಗಾಗಿ ಜನರ ಸಾವು ಹಾಗೂ ಹುಲಿ, ಆನೆಗಳ ಸಾವು ಎರಡೂ ಈ ವರ್ಷವೂ ನಿಲ್ಲಲಿಲ್ಲ.

ಮಾರ್ಚ್ 28ರಂದು ವಿರಾಜಪೇಟೆ ತಾಲ್ಲೂಕಿನ ರುದ್ರಗುಪ್ಪೆ ಗ್ರಾಮದಲ್ಲಿ ಹುಲಿ ದಾಳಿಗೆ ಸಿಲುಕಿ ಕಾರ್ಮಿಕ ಗಣೇಶ್ (40) ಸ್ಥಳದಲ್ಲೇ ಮೃತಪಟ್ಟರೆ, ಸೆ. 24ರಂದು ಗೋಣಿಕೊಪ್ಪಲು ಸಮೀಪದ ಕಾನೂರು ಕೋತೋರಿನ ಬೊಮ್ಮಾಡು ಹಾಡಿ ನಿವಾಸಿ ಕೃಷ್ಣ ಅಲಿಯಾಸ್ ದಾಸ (50) ಅವರು ಹುಲಿ ದಾಳಿಗೆ ಸಿಲುಕಿ ಮೃತಪಟ್ಟರು.

ಜೂನ್ 11ರಂದು ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಬಾಳೆಎಲೆ ಮುಖ್ಯ ರಸ್ತೆ ಕೋಣನ ಕಟ್ಟೆ ಮಾರಪಾಲ ಬೀಟ್ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದವರ ಮೇಲೆ ದಾಳಿ ನಡೆಸಿದ ಕಾಡಾನೆ ಚೋಮ ವ್ಯಕ್ತಿಯೊಬ್ಬರನ್ನು ತುಳಿದು ಸಾಯಿಸಿತು. ಸೆ. 29ರಂದು ದುಬಾರೆ ಹಾಡಿಯಲ್ಲಿ ಸಾಕಾನೆ ಶಿಬಿರದ ನಂಜುಂಡ ಎಂಬ ಆನೆಯ ದಾಳಿಗೆ ಸಿಲುಕಿ ಹಾಡಿ ನಿವಾಸಿ ಬಸಪ್ಪ (28) ಮೃತಪಟ್ಟರು. ಆ. 10ರಂದು ಸಿದ್ದಾಪುರ ಸಮೀಪದ ಚೆಟ್ಟಳ್ಳಿಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮಹಮ್ಮದ್ (60) ಎಂಬುವವರು ಮೃತಪಟ್ಟರು.

ಜುಲೈ 3ರಂದು ಗೋಣಿಕೊಪ್ಪಲು ಸಮೀಪ ಕಾಡಿನಿಂಡ ಕಾಫಿ ತೋಟಕ್ಕೆ ಬಂದ ಕಾಡಾನೆ ವಿದ್ಯುತ್ ತಂತಿ ತಗುಲಿ ಕುಟ್ಟ ಬಾಡಗದಲ್ಲಿ ಮೃತಪಟ್ಟರೆ, ಸೆ. 3ರಂದು ಸಿದ್ದಾಪುರ ಭಾಗದಲ್ಲಿ ಹೆಣ್ಣಾನೆ ಹಾಗೂ ಮರಿಯಾನೆ ಬುಧವಾರ ಮೃತಪಟ್ಟಿದ್ದವು. ಮೇ 31ರಂದು ನಾಪೋಕ್ಲು ಸಮೀಪದ ಮರಂದೋಡ ಗ್ರಾಮದಲ್ಲಿ ಮಂಗಳವಾರ ಕಾರ್ಯಾ ಚರಣೆ ವೇಳೆ ಅರಿವಳಿಕೆ ಚುಚ್ಚು ಮದ್ದು ನೀಡಿದ ನಂತರ ಕಾಡಾನೆಯು ಕುಸಿದುಬಿದ್ದು ಮೃತಪಟ್ಟಿತು. ಫೆ. 14ರಂದು ಕುಶಾಲನಗರದ ದಾಸವಾಳ ಕಾಫಿ ತೋಟದಲ್ಲಿ ತೀವ್ರ ಅಸ್ವಸ್ಥ ಗೊಂಡಿದ್ದ ಕಾಡಾನೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿತು.

ಸೆ. 29ರಂದು ಉಪಟಳ ನೀಡುತ್ತಿದ್ದ ಹುಲಿಯನ್ನು ಸಿದ್ದಾಪುರ ಭಾಗದಲ್ಲಿ ಸೆರೆ ಹಿಡಿದರೆ, ಜೂನ್ 29ರಂದು ಪೊನ್ನಂಪೇಟೆ ವಲಯ ಅರಣ್ಯ ವ್ಯಾಪ್ತಿಯ ರುದ್ರಗುಪ್ಪೆ ಒಂದರಲ್ಲಿ ಹುಲಿಯೊಂದರ ಮೃತದೇಹ ದೊರಕಿತ್ತು.

ಹೀಗೆ, ಮಾನವ ವನ್ಯಜೀವಿ ಸಂಘರ್ಷ ಪ್ರಕರಣಗಳು ಈ ವರ್ಷದಲ್ಲಿ ಸಾಲು ಸಾಲು ಸಂಭವಿಸಿದವು. ಜನ–ಜಾನುವಾರುಗಳು ಅಕ್ಷರಶಃ ನಲುಗಿ ಹೋದ ವರ್ಷ ಇದು.

ಪಶ್ಚಿಮ ಘಟ್ಟ ಪ್ರದೇಶದ 56,825 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಜುಲೈ ತಿಂಗಳಿನಲ್ಲಿ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿತು. ಇದರ ವ್ಯಾಪ್ತಿಗೆ ಕೊಡಗು ಜಿಲ್ಲೆಯ 54 ಪ್ರದೇಶಗಳನ್ನು ಸೇರಿಸಲಾಯಿತು.

ಮೊಟ್ಟೆ ಎಸೆತದ ಸಂಚಲನ

ಆಗಸ್ಟ್ 18ರಂದು ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಲು ಬಂದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿದರು. ಕಪ್ಪು ಬಾವುಟ ಪ್ರದರ್ಶಿಸಿ, ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕೋಳಿಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಇದು ರಾಜಕೀಯ ಸಂಚಲನಕ್ಕೆ ವೇದಿಕೆಯಾಯಿತು. ಇದು ಉಭಯ ಪಕ್ಷಗಳ ಮುಖಂಡರ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಯಿತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮಡಿಕೇರಿ ಚಲೊಗೆ ಕರೆ ಕೊಟ್ಟರೆ, ಅಂದೇ ಬಿಜೆಪಿ ಜನಜಾಗೃತಿ ಸಮಾವೇಶ ಆಯೋಜಿಸಿತು. ಎರಡೂ ಕಾರ್ಯಕ್ರಮ ತಡೆಯಲು ಪೊಲೀಸರು ನಿಷೇಧಾಜ್ಞೆ ಹೇರಿದರು. ನಿಷೇಧಾಜ್ಞೆ ಹೇರಿದ್ದರಿಂದ ಉಭಯ ಪಕ್ಷಗಳು ತಮ್ಮ ತಮ್ಮ ಕಾರ್ಯಕ್ರಮಗಳನ್ನು ವಾಪಸ್ ತೆಗೆದುಕೊಂಡರು. ಆದರೆ, ಮಡಿಕೇರಿಯಲ್ಲಿ ನಡೆಯಬೇಕಿದ್ದ ಸಂತೆ ನಿಂತಿತು. ಸಾವಿರಾರು ಮಂದಿ ಬದುಕಿನ ಕೂಳನ್ನು ಪ್ರತಿಷ್ಠೆ, ನಿಷೇಧಾಜ್ಞೆಗಳು ಕಸಿದವು. ಈ ಕುರಿತು ಸಾರ್ವಜನಿಕರಿಂದ ವ್ಯಾಪಕವಾದ ಅಸಮಾಧಾನಗಳು ವ್ಯಕ್ತವಾದವು.

ದಸರೆಗೆ ಮರುಕಳಿಸಿದ ವೈಭವ

ಮಡಿಕೇರಿಯ ಕರಗೋತ್ಸವ ಹಾಗೂ ದಸರೆಯ ವೈಭವ ಮರುಕಳಿಸಿತು. ಸಹಸ್ರಾರು ಮಂದಿ ದಶಮಂಟಪಗಳ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. ಕಾವೇರಿ ತೀರ್ಥೋದ್ಭವವೂ ಈ ಬಾರಿ ಅಷ್ಟೇ ಅದ್ಧೂರಿಯಾಗಿ ನೆರವೇರಿತು. ಕೊಡಗು ಮಾತ್ರವಲ್ಲ ನಾಡಿನ ಭಕ್ತವೃಂದ ಈ ಉತ್ಸವಗಳಲ್ಲಿ ಭಾಗಿಯಾಯಿತು.

ಹುತ್ತರಿ ಹಬ್ಬವನ್ನೂ ಜನರು ಸಂಭ್ರಮದಿಂದ ಬರಮಾಡಿಕೊಂಡರು. ಹಲವೆಡೆ ಸಂಭ್ರಮದ ಆಚರಣೆಗಳು, ಕೋಲಾಟ, ಉಮ್ಮತ್ತಾಟ್ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಕುಸಿದ ಗುಡ್ಡ, ತಡೆಗೋಡೆ

ಮುಂಗಾರು ಮಳೆ ವಾಡಿಕೆಗಿಂತ ಅಧಿಕವಾಗಿಯೇ ಸುರಿಯಿತು. 2022 ಒಂದು ರೀತಿಯಲ್ಲಿ ಮಳೆಯ ವರ್ಷದಂತಾಯಿತು. ಇದರಿಂದ ಸಾಕಷ್ಟು ಕಡೆ ಭೂಕುಸಿತಗಳು ಸಂಭವಿದವು. ಮಂಗಳೂರು- ಮಡಿಕೇರಿ ರಸ್ತೆಯಲ್ಲಿ ಮದೆನಾಡು ಸಮೀಪ ಗುಡ್ಡವು ಬಿರುಕು ಬಿಟ್ಟಿದ್ದರಿಂದ ಎರಡು ದಿನಗಳ ಕಾಲ ಇಲ್ಲಿ ವಾಹನ ಸಂಚಾರ ನಿಷೇಧಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯ ಸ್ಲ್ಯಾಬ್‌ಗಳು ಹೊರಚಾಚಿದ್ದರಿಂದ ಅಲ್ಲೂ ವಾಹನ ಸಂಚಾರ ನಿಷೇಧಿಸಲಾಯಿತು. ಇದಕ್ಕಾಗಿ ₹ 7 ಕೋಟಿಗೂ ಅಧಿಕ ಹಣ ವ್ಯಯ ಮಾಡಿದ್ದರೂ ಸಮರ್ಪಕ ಕಾಮಗಾರಿ ಮಾಡಿಲ್ಲ ಎಂದು ಕಾಂಗ್ರೆಸ್, ಜೆಡಿಎಸ್‌ ನಾಯಕರು ಟೀಕಾ ಪ್ರಹಾರ ನಡೆಸಿದರು. ಮಳೆಯಿಂದ ಶನಿವಾರಸಂತೆ ಭಾಗದಲ್ಲಿ ಮಹಿಳೆಯೊಬ್ಬರು ಮೃತಪಟ್ಟರು. ಸಾವಿರಾರು ಎಕರೆ ಬೆಳೆನಾಶವಾಯಿತು. ಚಳಿಗಾಲದಲ್ಲೂ ಮಳೆ ಬಂದಿದ್ದರಿಂದ ಬೆಳೆಗಾರರಿಗೆ ಇನ್ನಿಲ್ಲದ ಪಡಿಪಾಟಲು ಉಂಟಾಯಿತು.

ಚಿಗುರೊಡೆದ ಕ್ರೀಡಾ ಕಲರವ

ಜಿಲ್ಲೆಯಲ್ಲಿ ಕಳೆದ 4 ವರ್ಷಗಳಿಂದ ನಿಂತಿದ್ದ ಕ್ರೀಡಾ ಚಟುವಟಿಕೆಗಳು ಮತ್ತೆ ಗರಿಗೆದರಿದವು. ಕೊಡವ ಹಾಕಿ ಅಸೋಸಿಯೇಷನ್ ವತಿಯಿಂದ ಪಾಂಡಂಡ ಕುಟ್ಟಪ್ಪ ಸ್ಮಾರಕ ಹಾಕಿ ಸೇರಿದಂತೆ ಹಲವು ಕ್ರೀಡೆಗಳು ನಡೆದವು. ಯುವಮನಸ್ಸುಗಳು ಅತ್ಯುತ್ಸಾಹದಿಂದ ಇದರಲ್ಲಿ ಭಾಗಿಯಾದವು. ಮತ್ತೆ ಕೊಡಗಿಗೆ 2022ರಲ್ಲಿ ಕ್ರೀಡಾ ವೈಭವ ದಕ್ಕಿತು.

ಕಂಪಿಸಿದ ಧರೆ

ಚೆಂಬು ಗ್ರಾಮದ ಆಸುಪಾಸಿ ನಲ್ಲಿ ಭೂಮಿ ಪದೇ ಪದೇ ಕಂಪಿ ಸಿತು. ಇದರಿಂದ ಜನರು ಸಾಕಷ್ಟು ಭೀತಿಗೆ ಒಳಗಾದರು. ಕಂದಾಯ ಸಚಿವ ಆರ್. ಅಶೋಕ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಧೈರ್ಯ ತುಂಬುವ ಯತ್ನ ಮಾಡಿದರು. ಮಳೆ ಆರಂಭವಾದ ನಂತರ ಭೂಮಿ ಕಂಪಿಸುವುದು ನಿಂತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT