ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನದಿ ಕೊಂದು ಜೀವನ ಕಟ್ಟಿಕೊಳ್ಳಬಾರದು: ಶಾಸಕ ಎ.ಎಸ್.ಪೊನ್ನಣ್ಣ

ಕೀರೆಹೊಳೆ ಕಸದ ತಡೆಗೋಡೆ ಉದ್ಘಾಟಿಸಿದ ಶಾಸಕ ಪೊನ್ನಣ್ಣ, ಒತ್ತುವರಿ ತೆರವಿಗೆ ಕಾನೂನಾತ್ಮಕ ಅಡಚಣೆ ನಿವಾರಿಸಲು ಸೂಚನೆ
Published 16 ಜೂನ್ 2024, 16:16 IST
Last Updated 16 ಜೂನ್ 2024, 16:16 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ನದಿ ಕೊಂದು ಜೀವನ ಕಟ್ಟಿಕೊಳ್ಳಬಾರದು’ ಎಂದು ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.

ಕೀರೆಹೊಳೆಗೆ ಕ್ಲೀನ್ ಕೂರ್ಗ್ ಇನಿಸಿಯೇಟೀವ್ ಹಾಗೂ ಗ್ರಾಮ ಪಂಚಾಯಿತಿ ಜಂಟಿಯಾಗಿ ನಿರ್ಮಿಸಿರುವ ಕಸದ ತಡೆಗೋಡೆಯನ್ನು ಭಾನುವಾರ ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೀರೆಹೊಳೆ ಒತ್ತುವರಿ ತೆರವು ಬಗ್ಗೆ ಇರುವ ಕಾನೂನಾತ್ಮಕ ಅಡಚಣೆಗಳನ್ನು ನಿವಾರಿಸಿ ಸೂಕ್ತ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ಪೊನ್ನಂಪೇಟೆ ತಹಶೀಲ್ದಾರ್ ಮೋಹನ್ ಕುಮಾರ್ ಅವರಿಗೆ ಸೂಚಿಸಿದರು.

ಹಿಂದಿನ ತಹಶೀಲ್ದಾರ್ ಯೋಗಾನಂದ ಅವರು ಕೀರೆ ಹೊಳೆ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದರು. ಆದರೆ, ಕೆಲವು ಕಾನೂನಾತ್ಮಕ ಅಡಚಣೆಯಿಂದ ಒತ್ತವರು ತೆರವು ಕಾರ್ಯ ಸ್ಥಗಿತಗೊಂಡಿದೆ. ಇರುವ ಅಡಚಣೆಯನ್ನು ಪರಿಶೀಲಿಸಿ ಯಾವುದೇ ಮುಲಾಜಿಗೆ ಒಳಗಾಗದೆ ತೆರವುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಕೀರೆಹೊಳೆಯನ್ನು ಯಾರೂ ಕೂಡ ನದಿ ಎಂದು ಕರೆಯಲಾರರು. ತ್ಯಾಜ್ಯ ತುಂಬಿಸಿಕೊಂಡು ಕಸದ ಹೊಂಡವಾಗಿರುವ ಕೀರೆ ಹೊಳೆಯು ಹಿಂದಿನ ಸ್ಥಿತಿಗೆ ಮರಳಬೇಕಾದರೆ ಉದ್ಯಮಿಗಳು, ಅಂಗಡಿ ಮಾಲೀಕರು, ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರೆಲ್ಲರೂ ನದಿ ಸ್ವಚ್ಛತೆಗೆ ಕೈಜೋಡಿಸಬೇಕು. ನದಿಗೆ ತ್ಯಾಜ್ಯ ಸೇರಿಸುವುದು ಪಾಪದ ಕೆಲಸ. ಇದು ಇಲ್ಲಿಗೆ ನಿಲ್ಲಬೇಕು. ನದಿ ಕೊಂದು ಜೀವನ ಕಟ್ಟಿಕೊಳ್ಳಬಾರದು ಎಂದು ಕೀರೆಹೊಳೆಯ ಇಂದಿನ ಸ್ಥಿತಿಗತಿ ಕಂಡು ನೊಂದು ನುಡಿದರು.

ಕೀರೆಹೊಳೆಗೆ ಯಾರೇ ತ್ಯಾಜ್ಯ ಎಸೆದರೂ ಅವರ ಮೇಲೆ ಗ್ರಾಮಪಂಚಾಯಿತಿ ಕಠಿಣ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ರಾಜಕೀಯ ಬೆರೆಸಬಾರದು. ಅರಣ್ಯ ಇಲಾಖೆಯವರು ನದಿ ದಡದಲ್ಲಿ ಬಿದಿರು, ಮತ್ತಿತರ ಸಸಿ ನೆಡುವ ಮೂಲಕ ನದಿ ದಡದಲ್ಲಿ ಹಸಿರು ಹೊದಿಕೆ ನಿರ್ಮಿಸಬೇಕು ಎಂದು ಸೂಚಿಸಿದರು.

ಕ್ಲೀನ್ ಕೊಡಗು ಇನಿಸಿಯೇಟೀನ್‌ನ ತಾಂತ್ರಿಕ ತಜ್ಞ ಪವನ್ ಅಯ್ಯಪ್ಪ ಮಾತನಾಡಿ, ‘ಕೊಡಗಿನ ಪರಿಸರ ದಿನದಿಂದ ದಿನಕ್ಕೆ ಹಾಳಾಗುತ್ತಿರುವುದನ್ನು ಕಂಡು 2016ರಿಂದ ಕ್ಲೀನ್ ಕೊಡಗು ಸಂಸ್ಥೆ ಆರಂಭಿಸಲಾಯಿತು. 2016ರಿಂದ ಕೊಡಗಿನ ಪರಸರ ಉಳಿಸಲು ಶ್ರಮಿಸಲಾಗುತ್ತಿದೆ. ಪರಿಸರ ರಕ್ಷಣೆಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಮುಖ್ಯವಾಗಿದೆ. ನಮ್ಮ ತಂದೆ, ತಾಯಂದಿರು ನಿಮಗೆ ಬಿಟ್ಟು ಹೋಗಿರುವ ಮಾದರಿಯಲ್ಲಿಯೇ ನಾವೂ ಕೂಡ ನಮ್ಮ ಪರಿಸರವನ್ನು ನಮ್ಮ ಮಕ್ಕಳಿಗೆ ಬಿಟ್ಟುಹೋಗಬೇಕು. ಪರಿಸರವನ್ನು ಕಸದ ಹೊಂಡ ಮಾಡಿ ಹೋದರೆ ಪ್ರಕೃತಿ ನಮ್ಮನ್ನು ಕ್ಷಮಿಸಲಾರದು. ಪರಸರಕ್ಕೆ ಪೂರಕವಾದ ಕೆಲಸ ಮಾಡಬೇಕು’ ಎಂದು ಹೇಳಿದರು.

ಡಿಸಿಎಫ್ ಜಗನ್ನಾಥ್ ಮಾತನಾಡಿ, ‘ಕೀರೆಹೊಳೆ ದಡದ ಉದ್ದಕ್ಕೂ ಸಸಿ ನೆಡುವ ಮೂಲಕ ಹಸಿರು ಹೊದಿಕೆ ನಿರ್ಮಿಸಲು ಶ್ರಮಿಸಲಾಗುವುದು. ಜನತೆ ಹಳ್ಳಕೊಳ್ಳಗಳಿಗೆ ಪ್ಲಾಸ್ಟಿಕ್ ತುಂಬಿಸಿ ನೀರನ್ನು ಮುಚ್ಚಬಾರದು. ಕಾವೇರಿ ನದಿ ಸ್ವಚ್ಛವಾಗಬೇಕಾದರೆ ಅದಕ್ಕೆ ಸೇರುವ ತೊರೆತೋಡುಗಳು ಮತ್ತು ಉಪ ನದಿಗಳು ಮೊದಲು ಸ್ವಚ್ಛವಾಗಿರಬೇಕು’ ಎಂದು ನುಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಂಜುಳಾ, ಪೊನ್ನಂಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೀದಿರಿರ ನವೀನ್, ತಹಶೀಲ್ದಾರ್ ಮೋಹನ್ ಕುಮಾರ್, ತಿತಿಮತಿ ಎಸಿಎಫ್ ಗೋಪಾಲ್. ಆರ್ ಎಫ್ ಒ ಗಂಗಾಧರ್, ಪಿಡಿಒ ತಿಮ್ಮಯ್ಯ, ಪೊನ್ನಂಪೇಟೆ ಪಿಡಿಒ ಪುಟ್ಟರಾಜು, ಮುಖಂಡರಾದ ಬಿ.ಎನ್.ಪ್ರಕಾಶ್, ಶಿವಾಜಿ ಹಾಜರಿದ್ದರು.

ಅರಣ್ಯ ಇಲಾಖೆ ಸಿಬ್ಬಂದಿ ಹೊಳೆ ದಡದಲ್ಲಿ ನೇರಳೆ, ಬಿದಿರು, ಅತ್ತಿ, ಮೊದಲಾದ ಹತ್ತಾರು ಬಗೆಯ ಸಸಿಗಳನ್ನು ನೆಟ್ಟರು.

34 ಗಂಟೆಯಲ್ಲಿ 7 ಸಾವಿರ ಕೆ.ಜಿ ಪ‍್ಲಾಸ್ಟಿಕ್

ತ್ಯಾಜ್ಯ ಸಂಗ್ರಹ ಕ್ಲೀನ್ ಕೊಡಗು ಇನಿಸಿಯೇಟೀವ್‌ನವರು ಕೊಡಗಿನ ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೀರೆಹೊಳೆ ತ್ಯಾಜ್ಯ ಸಂಗ್ರಹದ ಬಗ್ಗೆ ನಿರ್ಮಿಸಿರುವ ಕಸದ ತಡೆಗೋಡೆಯಿಂದ 34 ಗಂಟೆಗಳ ಅವಧಿಯಲ್ಲಿ 7 ಸಾವಿರ ಕೆ.ಜಿಯಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ. ಇದೆಲ್ಲ ಮಳೆಗಾಲದಲ್ಲಿ ಲಕ್ಷ್ಮಣತೀರ್ಥ ನದಿ ಮೂಲಕ ಕಾವೇರಿ ನದಿ ಸೇರುತ್ತಿತ್ತು. ಜರ್ಮನ್ ತಾಂತ್ರಿಕತೆ ಬಳಸಿ ನಿರ್ಮಿಸಿರುವ ತ್ಯಾಜ್ಯ ಸಂಗ್ರಹ ತಡೆಗೋಡೆ ರಾಜ್ಯದಲ್ಲಿ 2ನೆಯ ದಾಗಿದ್ದು ಕೊಡಗಿನಲ್ಲಿ ಮೊದಲನೆಯದಾಗಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಶ್ಲಾಘಿಸಿದರು. ಹೊಳೆಯಲ್ಲಿ ನೀರು ಏರಿದಾಗ ಅದಕ್ಕೆ ತಡೆಗೋಡೆಗೆ ಹಾಕಿರುವ ತಂತಿ ಬಲೆ ಕೂಡ ಮೇಲೆ ಏಳಲಿದೆ. ನೀರು ಕಡಿಮೆಯಾದರೆ ಕುಗ್ಗಲಿದೆ. ತಡೆಗೋಡೆ ಕೊಚ್ಚಿ ಹೋಗದಂತೆ ದಡದ ಎರಡು ಬದಿಯಲ್ಲಿ ವಿದ್ಯುತ್ ಕಂಬ ನೆಟ್ಟು ಭದ್ರಪಡಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT