ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾಗೆ ಬೆಂಬಲ; ಹರಿದುಬಂದ ಜನಸಾಗರ

Last Updated 25 ಆಗಸ್ಟ್ 2011, 9:30 IST
ಅಕ್ಷರ ಗಾತ್ರ

ಮಡಿಕೇರಿ: ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ ಅವರಿಗೆ ಮಡಿಕೇರಿಯಲ್ಲಿ ಬುಧವಾರ ವಿದ್ಯಾರ್ಥಿಗಳು, ವರ್ತಕರು, ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಬೃಹತ್ ಮೆರವಣಿಗೆ ನಡೆಸುವ ಮೂಲಕ ಬೆಂಬಲ ಸೂಚಿಸಿದರು.

ವಿವಿಧ ಶಾಲೆಗಳಿಂದ ಮೆರವಣಿಗೆಯಲ್ಲಿ ಹೊರಟ ವಿದ್ಯಾರ್ಥಿಗಳು, ನಗರದ ಇಂದಿರಾಗಾಂಧಿ ವೃತ್ತದ ಬಳಿ ಜಮಾಯಿಸಿದರು. ಅಲ್ಲಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಗಾಂಧಿ ಮೈದಾನ ತಲುಪಿದರು. ವಿದ್ಯಾರ್ಥಿಗಳ ಬೃಹತ್ ಮೆರವಣಿಗೆಗೆ ನಗರದ ಬಹುತೇಕ ವರ್ತಕರು ಸ್ಪಂದಿಸಿ, ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು.

ಮಾತೃ ಸೇವಾ ಸಮಿತಿಯ ಪ್ರಮುಖರಾದ ಜಿ.ಟಿ. ರಾಘವೇಂದ್ರ ಅವರು ಗಾಂಧಿ ಮೈದಾನದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿದ್ದಂತೆ ನೆರದಿದ್ದ ಜನರು ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಹಲವು ಘೋಷಣೆಗಳನ್ನು ಕೂಗಿದರು.

ಭಾರತ ಮಾತಾ ಕಿ ಜೈ, ಅಣ್ಣಾ ಹಜಾರೆ ಕಿ ಜೈ, ಅಣ್ಣಾ ಹಜಾರೆ ಆಗೇ ಬಡೋ, ಹಮ್ ತುಮಾರೇ ಸಾಥ್ ಹೈ... ಘೋಷಣೆಗಳು ಮುಗಿಲು ಮುಟ್ಟಿದವು.

ಇದೇ ಸಂದರ್ಭದಲ್ಲಿ ಕೆ.ಕೆ. ಮಹೇಶ್ ಕುಮಾರ್ ಹಾಗೂ ಸಂಗಡಿಗರು ದೇಶಭಕ್ತಿ ಗೀತೆಗಳನ್ನು ಹಾಡಿದರು. ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆಯ ಖುಷಿ ಅಪ್ಪಚ್ಚು ಅವರು ಲೋಕಪಾಲ ಮಸೂದೆ ಬಗ್ಗೆ ಮಾತನಾಡಿದರು.

ನಗರ ಚೇಂಬರ್ ಆಫ್ ಕಾಮರ್ಸ್‌ನ ಮೊಂತಿ ಗಣೇಶ್ ಮಾತನಾಡಿ, ಭ್ರಷ್ಟಾಚಾರ ವಿರುದ್ಧದ ಹೋರಾಟದ ಪ್ರತಿಜ್ಞಾ ವಿಧಿ ಬೋಧಿಸಿದರು. ಮಾತೃಸೇವಾ ಸಮಿತಿಯ ಅರುಣ್‌ಕುಮಾರ್ ವಂದಿಸಿದರು.

ಹಜಾರೆ ಪರ ಹೋರಾಟ: 5 ನೇ ದಿನಕ್ಕೆ ಸರದಿ ನಿರಶನ 
ಕುಶಾಲನಗರ :ಜನ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಸಮಾಜ ಸೇವಾ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಬೆಂಬಲ ಸೂಚಿಸಿ ಭ್ರಷ್ಟಾಚಾರ ವಿರೋಧಿ ಜನಾಂದೋಲನ ವೇದಿಕೆ ವತಿಯಿಂದ ಕುಶಾಲನಗರದಲ್ಲಿ ನಡೆಸುತ್ತಿರುವ          ಒಂದು ವಾರ ಕಾಲದ ಸರದಿ ನಿರಶನ ಬುಧವಾರ 5 ನೇ ದಿನಕ್ಕೆ ಕಾಲಿಟ್ಟಿತು.

ಜನ ಲೋಕಪಾಲ ಮಸೂದೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು        ಎಂದು ಒತ್ತಾಯಿಸಿ ಶನಿವಾರ         ಪಟ್ಟಣದಲ್ಲಿ ನಡೆಸಲಿರುವ ಬಂದ್‌ಗೆ      ಎಲ್ಲರೂ ಸಹಕರಿಸಬೇಕು ಎಂದು ಬಿ.     ಅಮೃತ್‌ರಾಜ್ ಮನವಿ ಮಾಡಿದರು.

ಜನ ಲೋಕಪಾಲ ಮಸೂದೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು        ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ಬೈಸಿಕಲ್ ಜಾಥಾ ನಡೆಸಿದರು. ಬೈಸಿಕಲ್ ಜಾಥಾಕ್ಕೆ ಮುಖಂಡ ಜಿ.         ಎಲ್.ನಾಗರಾಜ್ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT