ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿವಾಸಿಗಳಿಗೆ ತಲುಪದ ಸೌಲಭ್ಯ

Last Updated 16 ಜನವರಿ 2017, 6:17 IST
ಅಕ್ಷರ ಗಾತ್ರ

ಮಡಿಕೇರಿ: ಆದಿವಾಸಿಗಳಿಗೆ ರೂಪಿಸುತ್ತಿ ರುವ ಯಾವುದೇ ಯೋಜನೆಗಳು ಜಿಲ್ಲೆಯ ಅವಿದ್ಯಾವಂತ ಆದಿವಾಸಿಗಳಿಗೆ ತಲುಪುತ್ತಿಲ್ಲ ಎಂದು ಆದಿವಾಸಿ ಮುಖಂಡ ವೈ.ಕೆ. ಗಣೇಶ್ ಆರೋಪಿಸಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಲ್ಲದೇ, ತೋಟದ ಮನೆಗಳಲ್ಲಿ ಕಾರ್ಮಿಕರಾಗಿ ದುಡಿಯುವ ಆದಿವಾಸಿ ಮಕ್ಕಳನ್ನು ಕೂಡ ತೋಟ ಮಾಲೀಕರು ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುತ್ತಿ ದ್ದಾರೆ ಎಂದು ದೂರಿದರು.

ಜಿಲ್ಲೆಯಲ್ಲಿ ಆದಿವಾಸಿ ಮಕ್ಕಳು ಜೀತದಾಳುಗಳಾಗಿ, ಬಾಲ ಕಾರ್ಮಿಕ ರಾಗಿ ತೋಟಗಳ ಭದ್ರಕೋಟೆಯ ನಡುವೆ ದುಡಿಯುತ್ತಿದ್ದರೂ ಇವರನ್ನು ಜೀತದಿಂದ ಮುಕ್ತಗೊಳಿಸಲು ಕಾರ್ಮಿಕ ಇಲಾಖೆ, ಗಿರಿಜನ ಅಭಿವೃದ್ಧಿ ಇಲಾಖೆ ಹಾಗೂ ಯಾವುದೇ ಸಂಘ ಸಂಸ್ಥೆಗಳು ಮುಂದೆ ಬರುತ್ತಿಲ್ಲ ಎಂದು ವಿಷಾದಿಸಿದರು.

ಕಾರ್ಮಿಕರ ಕೊರತೆಯನ್ನು ನೀಗಿಸಿಕೊಳ್ಳಲು ತೋಟದ ಮಾಲೀಕರು ಅವಿದ್ಯಾವಂತ ಆದಿವಾಸಿಗಳನ್ನು ಲೈನ್‌ಮನೆಗಳಲ್ಲೇ ಇರಿಸಿಕೊಂಡಿದ್ದಾರೆ. ಪ್ರತಿದಿನ ಕಳಪೆ ಮದ್ಯದ ಆಮಿಷ ತೋರಿ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿ ದ್ದಾರೆ ಎಂದು ಆರೋಪಿಸಿದರು.

ಅಲ್ಲಿನ ಆದಿವಾಸಿಗಳಿಗೆ ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ದೊರೆಯದೆ ಕೇವಲ ಮದ್ಯದ ಆಮಿಷಕ್ಕೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊ ಳ್ಳುತ್ತಿದ್ದಾರೆ. ತಂದೆ– ತಾಯಿಯೊಂದಿಗೆ ಮಕ್ಕಳು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವರು ತಕ್ಷಣ ಎಚ್ಚೆತ್ತುಕೊಂಡು ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಆದಿವಾಸಿಗಳ ಬಗ್ಗೆ ಮಾಹಿತಿ ಕಲೆ ಹಾಕಲು ಹಿರಿಯ ಅಧಿಕಾರಿಗಳ ತಂಡದಿಂದ ಸರ್ವೇ ಕಾರ್ಯ ನಡೆಸಬೇಕು ಮತ್ತು ಆದಿವಾಸಿಗಳನ್ನು ಜೀತಮುಕ್ತರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಬಾಲ ಕಾರ್ಮಿಕರಾಗಿ ದುಡಿಯು ತ್ತಿರುವವರನ್ನು ಪತ್ತೆಹಚ್ಚಿ ಸರ್ಕಾರ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು.

ತಪ್ಪೆಸಗಿರುವ ತೋಟದ ಮಾಲೀಕರಮೇಲೆ ಕ್ರಮ ಕೈಗೊಳ್ಳಬೇಕು. ತೋಟ ಮಾಲೀಕರು ಸಭೆ ನಡೆಸಿ ಕೂಲಿ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಕಾರ್ಮಿಕ ಇಲಾಖೆಯ ನಿಯಮಾನುಸಾರ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ತೋಟದ ಲೈನ್‌ಮನೆ ಗಳಿಂದ ಆದಿವಾಸಿಗಳನ್ನು ಹೊರತಂದು ನಿವೇಶನ ಹಾಗೂ ವಸತಿ ಸೌಲಭ್ಯಗಳನ್ನು ನೀಡಬೇಕು. ತಿಂಗಳೊಳಗೆ ಈ ಬೇಡಿಕೆ ಈಡೇರದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುತ್ತ, ಸೀತೆ, ಲಲಿತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT