ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತ್ರಿ ಯೋಜನೆ: ರೂ. 8.80 ಕೋಟಿ ಬಳಕೆ

Last Updated 6 ಜನವರಿ 2011, 7:25 IST
ಅಕ್ಷರ ಗಾತ್ರ

ಮಡಿಕೇರಿ: ದುಡಿಯುವ ಕೈಗಳಿಗೆ ಕನಿಷ್ಠ ನೂರು ದಿನ ಕೂಲಿ ನೀಡುವಂತಹ ಮಹಾತ್ವಾಕಾಂಕ್ಷೆಯ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಡಗು ಜಿಲ್ಲೆಯು 2010-11ನೇ ಸಾಲಿನಲ್ಲಿ ಸುಮಾರು 8.80 ಕೋಟಿ ರೂಪಾಯಿಗಳನ್ನು ಬಳಕೆ ಮಾಡಿಕೊಂಡಿದೆ. ಈ ವರ್ಷಕ್ಕೆ ಕೇಂದ್ರ ಸರ್ಕಾರ ಜಿಲ್ಲೆಗೆ ಈ ಯೋಜನೆಯಡಿ 54 ಕೋಟಿ ರೂಪಾಯಿಗಳಿಗೆ ಮಂಜೂರಾತಿ ನೀಡಿದೆ.
 
ಸುಮಾರು 107 ಕೋಟಿ ರೂಪಾಯಿಗಳಿಗೆ ಜಿಲ್ಲಾ ಪಂಚಾಯ್ತಿ ಪ್ರಸ್ತಾವನೆ ಸಲ್ಲಿಸಿದೆ. 2009-10ನೇ ಸಾಲಿನಲ್ಲಿ ಈ ಯೋಜನೆಯಡಿ 13.80 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಈ ವರ್ಷದಲ್ಲಿ ಸುಮಾರು 18.61 ಕೋಟಿ ರೂಪಾಯಿ ಮೊತ್ತ ಜಿಲ್ಲೆಗೆ ಲಭ್ಯವಾಗಿದ್ದು, ಈ ಪೈಕಿ 16.21 ಕೋಟಿ ರೂಪಾಯಿಗಳನ್ನು ಸರ್ಕಾರ ಈ ವರ್ಷ ಬಿಡುಗಡೆ ಮಾಡಿದ್ದರೆ, ಬಾಕಿ ಮೊತ್ತ ಉಳಿಕೆಯದ್ದು.

ಮಡಿಕೇರಿ ತಾಲ್ಲೂಕಿನಲ್ಲಿ 1.85 ಕೋಟಿ, ವಿರಾಜಪೇಟೆ ತಾಲ್ಲೂಕಿನಲ್ಲಿ 3.87 ಕೋಟಿ ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ 3.06 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಈಗಾಗಲೇ ಬಳಕೆ ಮಾಡಿಕೊಳ್ಳಲಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಸುಮಾರು 1,725 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ ಮಡಿಕೇರಿಯಲ್ಲಿ 521, ಸೋಮವಾರಪೇಟೆ ತಾಲ್ಲೂಕಿನಲ್ಲಿ 526 ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ 678 ಕಾಮಗಾರಿ ಸೇರಿವೆ.

ಜಿಲ್ಲೆಯ ಒಟ್ಟು 98 ಗ್ರಾಮ ಪಂಚಾಯ್ತಿಗಳಲ್ಲಿ 1,230 ಕಾಮಗಾರಿಗಳು ಪೂರ್ಣಗೊಂಡಿವೆ. ಮಡಿಕೇರಿ ತಾಲ್ಲೂಕಿನಲ್ಲಿ 277, ಸೋಮವಾರಪೇಟೆ ತಾಲ್ಲೂಕಿನಲ್ಲಿ 374 ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ 579 ಕಾಮಗಾರಿಗಳು ಪೂರ್ಣಗೊಂಡಿವೆ. ಈ ನಡುವೆ, ಮಳೆಗಾಲ ಮುಗಿದ ನಂತರ ಜಿ.ಪಂ. ಈ ಯೋಜನೆಯಡಿ ಇನ್ನಷ್ಟು ತ್ವರಿತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಗ್ರಾಮ ಪಂಚಾಯ್ತಿಗಳು ಗ್ರಾ.ಪಂ. ಅಧ್ಯಕ್ಷರು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಹೆಸರಿನಲ್ಲಿ ತೆರೆದಿರುವ ಜಂಟಿ ಖಾತೆಗಳಿಗೆ ನೇರವಾಗಿ ಅನುದಾನ ಬಿಡುಗಡೆಯಾಗುತ್ತಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ಕೆಲವು ಗ್ರಾಮ ಪಂಚಾಯ್ತಿಗಳು ಈ ಯೋಜನೆಯಡಿ ನಿರೀಕ್ಷಿತ ಪ್ರಗತಿ ಸಾಧಿಸುವಲ್ಲಿ ಹಿಂದೆ ಬಿದ್ದಿವೆ. ಬಲ್ಲಮಾವಟಿ, ಬೆಟ್ಟಗೇರಿ, ಚೆಂಬು, ಗಾಳಿಬೀಡು, ಕಡಗದಾಳು, ಮದೆ, ಮಕ್ಕಂದೂರು, ನಾಪೋಕ್ಲು, ಪೆರಾಜೆ ಹಾಗೂ ಸಂಪಾಜೆ ಗ್ರಾಮ ಪಂಚಾಯ್ತಿಗಳ ಬಳಿ ಸಾಕಷ್ಟು ಅನುದಾನ ಲಭ್ಯವಿದ್ದು, ಪ್ರಗತಿ ಸಾಧಿಸಿ ತೋರಿಸಬೇಕಿದೆ.

ಅಂತೆಯೇ, ಸೋಮವಾರಪೇಟೆ ತಾಲ್ಲೂಕಿನ ಐಗೂರು, ಆಲೂರು- ಸಿದ್ದಾಪುರ, ಬೆಸೂರು, ಚೆಟ್ಟಳ್ಳಿ, ಹೆಬ್ಬಾಲೆ, ಕಂಬಿಬಾಣೆ, ಕೆದಕಲ್, ಕೊಡಗರಹಳ್ಳಿ, ಮುಳ್ಳುಸೋಗೆ ಹಾಗೂ ನಾಕೂರು- ಶಿರಂಗಾಲ ಗ್ರಾಮ ಪಂಚಾಯಿತಿಗಳು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ವಿರಾಜಪೇಟೆ ತಾಲ್ಲೂಕಿನ ಬಿಳುಗುಂದ, ಚೆಂಬೆಬೆಳ್ಳೂರು, ದೇವರಪುರ, ಹಾಲುಗುಂದ, ಹೊಸೂರು ಹಾಗೂ ಕಣ್ಣಂಗಾಲ ಗ್ರಾಮ ಪಂಚಾಯ್ತಿಗಳಲ್ಲಿಯೂ ಪ್ರಗತಿ ಸಾಧಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT