ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲೆಬ್ಬಿಸಲು ಭೂಹಿಡುವಳಿದಾರರ ಪಿತೂರಿ

Last Updated 24 ಡಿಸೆಂಬರ್ 2016, 9:11 IST
ಅಕ್ಷರ ಗಾತ್ರ

ಮಡಿಕೇರಿ:  ‘ದಿಡ್ಡಳ್ಳಿಯ ಹಾಡಿಯಲ್ಲಿ ಗಿರಿಜನರನ್ನು ಒಕ್ಕಲೆಬ್ಬಿಸಿರುವ ಪ್ರಕರಣದಲ್ಲಿ ಅಲ್ಲಿನ ಸುತ್ತಮುತ್ತಲ ಭೂಹಿಡುವಳಿದಾರರು ಅರಣ್ಯ ಇಲಾಖೆಯ ಜತೆಗೆ ಸೇರಿ ಪಿತೂರಿ ನಡೆಸಿದ್ದರು’ ಎಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಶುಕ್ರವಾರ ಗಂಭೀರ ಆರೋಪ ಮಾಡಿದರು.

ಅವರು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ರಾಜ್ಯ ಪ್ರಗತಿಪರ ವೇದಿಕೆ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು.

‘ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಕೆಲವು ಗುಂಪುಗಳು ದಲಿತರನ್ನೇ ಎತ್ತಿ ಕಟ್ಟುವ ಕೆಲಸ ನಡೆಯಿತು. ಅಲ್ಲಿನ ಜನರ ಮೇಲೆ ಅಪಪ್ರಚಾರ ಮಾಡಲಾಯಿತು. ಆದರೆ, ಅದು ವಿಫಲ ಆಗಿದೆ’ ಎಂದು ಎಚ್ಚರಿಸಿದರು.

‘ದಿಡ್ಡಳ್ಳಿಯ ಆದಿವಾಸಿಗಳಿಗೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ನೇತೃತ್ವದಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ ಅಲ್ಲಿಯೇ ನಿವೇಶನ ಸಿಗುವ ಭರವಸೆ ದೊರೆತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ₹ 1 ಕೋಟಿ ಅನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ದಿಡ್ಡಳ್ಳಿ ಜಾಗವು ಪೈಸಾರಿಯಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಶಾಶ್ವತ ವ್ಯವಸ್ಥೆ ಆಗುವವರೆಗೂ ಅಲ್ಲಿಯೇ ಟೆಂಟ್‌ ನಿರ್ಮಿಸಿ ಮೂಲಸೌಲಭ್ಯ ಕಲ್ಪಿಸಲು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಆದಿವಾಸಿಗಳ 577  ಕುಟುಂಬಗಳಿಗೆ ಅಲ್ಲಿಯೇ 50 ಎಕರೆ ಗುರುತಿಸಿ ನಿವೇಶನ ನೀಡಬೇಕು. ಇಂದು ದಲಿತರು, ಗಿರಿಜನರು ಎಚ್ಚೆತ್ತುಕೊಂಡಿದ್ದಾರೆ. ಅವರ ಶಕ್ತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮುಖಂಡ ಸಿರಿಮನೆ ನಾಗರಾಜ್‌ ಮಾತನಾಡಿ, ‘ಇಷ್ಟು ದಿನದ ಚಳವಳಿ ವ್ಯರ್ಥ ಆಗಿಲ್ಲ. ಜಿಲ್ಲೆಯ ದಲಿತರ ಸಂಕಷ್ಟದ ಬದುಕಿಗೆ ಸಣ್ಣಮಟ್ಟದಲ್ಲಿ ದಾರಿಯಾಗಿದೆ’ ಎಂದು ತೃಪ್ತಿ ವ್ಯಕ್ತಪಡಿಸಿದರು.

ದಿಡ್ಡಳ್ಳಿಯಲ್ಲಿ ಹಮ್ಮಿಕೊಂಡ ಪ್ರತಿಭಟನೆಯ ಪ್ರಾರಂಭದಲ್ಲೇ ಒಪ್ಪಂದ ಆಗಿತ್ತು, ಆದರೆ, ಜಿಲ್ಲೆಯ ಪಟ್ಟಭದ್ರ ಹಿತಾಸಕ್ತಿಗಳು ಬಿಟ್ಟಿರಲಿಲ್ಲ. ಇದೀಗ ತಿಂಗಳೊಳಗೆ ಶಾಶ್ವತ ಪರಿಹಾರದ ಭರವಸೆ ಸಿಕ್ಕಿದೆ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ನಿರ್ವಾಣಪ್ಪ ಅವರು, ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅವರು ಆ ಜಾಗ ಪೈಸಾರಿ ಅಲ್ಲ. ಮೀಸಲು ಅರಣ್ಯ ಎಂದು ಹೇಳುವ ಮೂಲಕ ಸರ್ಕಾರ ತೀರ್ಮಾನವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಆದರೆ, ಇಂದು ಒಂದು ತಿಂಗಳೊಳಗೆ ನೆಲೆ ಸಿಗುವ ಭರವಸೆ ಸಿಕ್ಕಿದೆ ಎಂದು ಹೇಳಿದರು.

ರಾಜ್ಯದ ಎಲ್ಲಾ ಆದಿವಾಸಿಗಳು ಮತ್ತು ದಲಿತರು ಒಂದಾಗುತ್ತಾರೆ ಎಂಬುದಕ್ಕೆ ಈ ಸಮಾವೇಶ ನಿದರ್ಶನವಾಗಿದೆ. ಪ್ರತಿಭಟನಾ ನಿರತರಲ್ಲಿ ನಕ್ಸಲರಿದ್ದಾರೆ ಎಂದು ಅಪಪ್ರಚಾರ ಮಾಡಲಾಯಿತು. ಆದರೆ, ಇಂದು ಅಲ್ಲಿ ಯಾವುದೇ ನಕ್ಸಲರಿಲ್ಲ ಎಂಬುದನ್ನು ಐಜಿ ಅವರು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ನಟ ಚೇತನ್‌ ಅವರು, ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗೆ ಬಡವರ ದಬ್ಬಾಳಿಕೆಯೇ ಸಿದ್ಧಾಂತವಾಗಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿ ಯಾವುದೇ ಜನಪರ ಕೆಲಸ ಮಾಡಿಲ್ಲ. ಇದು ರಾಜ್ಯದ ದುರಂತ ಎಂದು ಆರೋಪಿಸಿದರು.

ದಿಡ್ಡಳ್ಳಿಯಲ್ಲಿ 577 ಆದಿವಾಸಿಗಳ ಕುಟುಂಬಗಳನ್ನು ಒಕ್ಕಲೆಬ್ಬಿಸಿರುವುದು ಗುರಿ ಇಟ್ಟು ಮಾಡಿದ ಅನ್ಯಾಯವಾಗಿದೆ. ಅಲ್ಲಿನ ಆದಿವಾಸಿಗಳಿಗೆ ಮೂಲ ಸೌಲಭ್ಯ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೂರ್‌ ಶ್ರೀಧರ್‌ ಅವರು, ಕೊಡಗು ಜಿಲ್ಲೆಯಲ್ಲಿನ ಜಿಲ್ಲಾಡಳಿತ ದುಷ್ಟರ ಕೈಗೊಂಬೆಯಾಗಿದೆ. ದಿಡ್ಡಳ್ಳಿಯಲ್ಲಿ ನಕ್ಸಲರಿದ್ದಾರೆ ಎಂದು ಅಪಪ್ರಚಾರ ಮಾಡಲಾಯಿತು. ಯಾವುದಕ್ಕೂ ಬಗ್ಗದೆ ನಡೆಸಿದ ಹೋರಾಟಕ್ಕೆ ಹಿನ್ನಡೆಯಾಗಿಲ್ಲ. ದಿಡ್ಡಳ್ಳಿಯನ್ನು ದಿಟ್ಟ ಹಳ್ಳಿ ಎಂದು ಕರೆಯಬೇಕು ಎಂದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಮಿನ್‌ ಮೊಹಿಸಿನ್‌ ಅವರು, ಸೈನಿಕರ ನೆಲೆಬಿಡಾದ ಕೊಡಗು ಜಿಲ್ಲೆಯಲ್ಲಿ ಇಂದು ಗಿರಿಜನರ ಕ್ರಾಂತಿಕಾರಿ ಚಳವಳಿ ದೇಶ
ವ್ಯಾಪಿ ಪ್ರಚಲಿತವಾಯಿತು.

ಜಿಲ್ಲೆಯಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಬಲಿಷ್ಠರು ಶೋಷಿತರನ್ನು ತುಳಿಯುತ್ತಿವೆ ಎಂದು ಆರೋಪಿಸಿದರು. ವೇದಿಕೆಯಲ್ಲಿ ಪರಿಸರ ಹೋರಾಟಗಾರ ಶೃಂಗೇರಿಯ ಕಲ್ಕುಳಿ ವಿಠಲ್‌ ಹೆಗಡೆ, ಕರ್ನಾಟಕ ರೈತ ಸಂಘದ ಮುಖಂಡ ಡಿ.ಎಚ್‌. ಪೂಜಾರ್‌, ಮಾನವ ಹಕ್ಕುಗಳ ಹೋರಾಟಗಾರ ನಿಸಾರ್‌ ವಸಂತ್‌, ಆದಿವಾಸಿ ಮುಖಂಡರಾದ ಮುತ್ತಮ್ಮ, ಅಪ್ಪಾಜಿ, ಅನಿತಾ, ಸ್ವಾಮಿ, ಎಸ್‌.ವೈ. ಗುರುಶಾಂತ್‌, ಎಸ್‌ಡಿಪಿಐ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮಜೀದ್‌, ಮನ್ಸೂರ್‌ ಅಲಿ, ಸಮಾಜವಾದಿ ಪಕ್ಷದ ಆಲಿಬಾಬ ಇದ್ದರು. ಮುಂಜಾಗ್ರತೆಯಾಗಿ ಅಗತ್ಯ  ಪೊಲೀಸ್‌ ಭದ್ರತೆಯನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT