ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತು ಯೋಜನೆಯಡಿ ‘ಬೆಳಗಿದ ಶಾಲೆ’

Last Updated 16 ಸೆಪ್ಟೆಂಬರ್ 2017, 7:13 IST
ಅಕ್ಷರ ಗಾತ್ರ

ಕುಶಾಲನಗರ: ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಕೂಡಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ ಹೈಟೆಕ್‌ ಸ್ಪರ್ಶವಾಗಿದ್ದು ಮಾದರಿ ಶಾಲೆಯಾಗಿ ರೂಪುಗೊಂಡಿದೆ.‌ ಕುಶಾಲನಗರದಿಂದ 6 ಕಿ.ಮೀ ದೂರದಲ್ಲಿ ಹಾಸನ ಮಾರ್ಗದಲ್ಲಿರುವ ಈ ಶಾಲೆ ಖಾಸಗಿ ಶಾಲೆಗಳಿಗಿಂತ ವಿಭಿನ್ನವಾಗಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿ ಪ್ರೇರಣೆಯಾಗಿದೆ. ಈ ಶಾಲೆ ಪ್ರಗತಿಗೆ ನೆಡ್ ಕಮಾಡಿಟೀಸ್ ಇಂಡಿಯಾ ಸಂಸ್ಥೆ ಕೊಡುಗೆ ಅಪಾರ.

1953ರಲ್ಲಿ ಗ್ರಾಮಸ್ಥರ ಪರಿಶ್ರಮದಿಂದ ಬಸವೇಶ್ವರ ದೇವಾಲಯ ಆವರಣದಲ್ಲಿ ಆರಂಭಗೊಂಡ ಈ ಶಾಲೆ ನಂತರ ಊರಿನ ಜನರೇ ಕಟ್ಟಿದ ಹುಲ್ಲಿನ ಗುಡಿಸಲಿನಲ್ಲಿ ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳಿಂದ ಆರಂಭಗೊಂಡಿತು. ಈ ಶಾಲೆಗೆ ಮೊದಲ ಶಿಕ್ಷಕರಾಗಿ ನೇಮಕಗೊಂಡಿದ್ದ ದಿ.ಎ. ಸೋಮಪ್ಪ ಅವರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಶಾಲೆಯ ಪ್ರಗತಿಗೆ ವಿಶೇಷ ವಿಶೇಷ ಒತ್ತು ನೀಡಿದ್ದರು.

ಸರ್ಕಾರದ ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿಯಿಂದ ವಂಚಿತಗೊಂಡ ಗ್ರಾಮೀಣ ಶಾಲೆಗಳ ಪೈಕಿ ಹಳೇಕೂಡಿಗೆ ಶಾಲೆ ಕೂಡ ಒಂದಾಗಿತ್ತು. ಶಾಲಾ ಕಟ್ಟಡ ದುಃಸ್ಥಿತಿ ಹೇಳತೀರದಷ್ಟು ಹದಗೆಟ್ಟು ಹೋಗಿತ್ತು. ಮಳೆಗಾಲದಲ್ಲಿ ಶಾಲಾ ಕೊಠಡಿಯೊಳಗೆ ಮಕ್ಕಳು ಕುಳಿತು ಪಾಠ ಕೇಳಲು ಸಾಧ್ಯವಾಗುತ್ತಿರಲಿಲ್ಲ. ಇತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಈ ಸರ್ಕಾರಿ ಶಾಲೆ ಇದೀಗ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಾದರಿಯಾಗಿ ನಿಂತಿದೆ.

2016–17ನೇ ಸಾಲಿನಲ್ಲಿ ಹಳೇ ಕೂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೂಡ್ಲೂರು ಕೈಗಾರಿಕಾ ಬಡಾವಣೆಯ ನೆಡ್ ಕಮಾಡಿಟೀಸ್ ಇಂಡಿಯಾ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ಎಸ್.ಎಸ್. ಅನಿಲ್ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಎ.ಬಿ.ಹರೀಶ್ ಅವರು ಶಾಲೆಯನ್ನು ದತ್ತು ಪಡೆದು ₹28 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಶಾಲೆ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

1ರಿಂದ 7ನೇ ತರಗತಿವರೆಗೆ ಶಾಲೆಯಲ್ಲಿ ಪಾಠಪ್ರವಚನ ನಡೆಯುತ್ತಿದ್ದು, 42 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕಿ ಎಸ್.ಯು. ಪಾರ್ವತಿ ಸೇರಿದಂತೆ 5 ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಶಾಲೆಯನ್ನು ದತ್ತು ಪಡೆದುಕೊಂಡಿರುವ ಸಂಸ್ಥೆ ತಮ್ಮ ಸಂಸ್ಥೆಯ ಲಾಭಾಂಶದಲ್ಲಿ ಸಮುದಾಯ ಸೇವಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅನಸೂಯ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹೈಟೆಕ್ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶಾಲೆಯ ಮೂರು ಕಡೆ ತಡೆಗೋಡೆ ನಿರ್ಮಾಣ, 3 ಕೊಠಡಿಗಳು ಹಾಗೂ ಮೇಲ್ಚಾವಣಿ ದುರಸ್ತಿ, ಶಾಲಾ ಕಟ್ಟಡಕ್ಕೆ ಹಾಗೂ ತಡೆಗೋಡೆಗೆ ಸುಣ್ಣಬಣ್ಣ, ಅಡುಗೆ ಮನೆ ದುರಸ್ತಿ ಹಾಗೂ ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್ ಹಾಗೂ ವಿಜ್ಞಾನ ಪ್ರಯೋಗಾಲಯದ ವ್ಯವಸ್ಥೆ ಜೊತೆಗೆ ಸ್ಮಾರ್ಟ್ ಕ್ಲಾಸ್ ಕೊಠಡಿ ಸಿದ್ಧಪಡಿಸಿದ್ದಾರೆ.

ಶಾಲೆಯ ಗೋಡೆಗಳ ಮೇಲೆ ರಾಷ್ಟ್ರ ನಾಯಕರ, ರಾಷ್ಟ್ರಕವಿಗಳ ಭಾವಚಿತ್ರಗಳನ್ನು ಬಿಡಿಸಲಾಗಿದ್ದು, ಭೂಪಟಗಳನ್ನು ಹಾಕಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮೀಣ ಪ್ರದೇಶ ಮಕ್ಕಳು ಕಂಪ್ಯೂಟರ್ ಶಿಕ್ಷಣವನ್ನು ಹೊಂದುವ ಮೂಲಕ ನಗರ ಪ್ರದೇಶ ಮಕ್ಕಳಿಗೆ ಸರಿಸಮಾನವಾದ ಜ್ಞಾನವನ್ನು ಹೊಂದಬೇಕು ಎಂಬ ಉದ್ದೇಶದಿಂದ ಶಾಲೆಗೆ ಕಂಪ್ಯೂಟರ್ ಹಾಗೂ ವಿಜ್ಞಾನ ಪ್ರಯೋಗಾಲಯಗಳನ್ನು ನೀಡಿ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಒತ್ತಾಸೆಯಾಗಿದ್ದಾರೆ.

ಇದೇ ರೀತಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಸಂಘ– ಸಂಸ್ಥೆಗಳು ಶಾಲಾದತ್ತು ಯೋಜನೆ ಅಡಿ ದತ್ತು ಪಡೆಯುವ ಮೂಲಕ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಒತ್ತು ನೀಡಬೇಕಾಗಿದೆ ಎನ್ನುತ್ತಾರೆ ಪ್ರಜ್ಞಾವಂತರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT