ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರಳಿನಾಡಿನ ಪಾರಣ ಬೇಡು ಹಬ್ಬ

ಜಿಲ್ಲೆಯ ಅಂತಿಮ ಬೇಡು ಹಬ್ಬದಲ್ಲಿ ವಿವಿಧ ವೇಷ, ಬಿದಿರಿನ ಕುದುರೆ– ಆನೆ ಶೃಂಗಾರ
Last Updated 27 ಮೇ 2018, 13:31 IST
ಅಕ್ಷರ ಗಾತ್ರ

ವಿರಾಜಪೇಟೆ: ‘ಕುಂದತ ಬೊಟ್ಟ್‌ಲ್‌ ನೇಂದ ಕುದುರೆ ಪಾರಾಣ ಮಾನಿಲ್ ಅಳ್ಂಜ ಕುದುರೆ’ ಎಂಬ ನಾಣ್ಣುಡಿಯ ಬೇರಳಿನಾಡಿನ ಪಾರಣ ಬೇಡು ಹಬ್ಬವು ಮೇ 31 ಹಾಗೂ ಜೂ.1 ರಂದು ನಡೆಯಲಿದೆ.

ಹಬ್ಬದ ಅಂಗವಾಗಿ ಮೇ 31 ರಂದು ಸಂಜೆ ಪದ್ಧತಿಯಂತೆ ಕಂಡಂಗಾಲ, ಪೊದಕೇರಿ, ವಿ. ಬಾಡಗ ಹಾಗೂ ಮರೋಡಿ ಗ್ರಾಮದ ಅಂಬಲದಲ್ಲಿ ವೇಷಧಾರಿಗಳು ವಿವಿಧ ವೇಷ ಧರಿಸುತ್ತಾರೆ. ನಂತರ ರಾತ್ರಿಯಿಂದಲೇ ವೇಷಧಾರಿಗಳು ನಾಡಿನ ಮನೆ ಮನೆ ಸಂಚರಿಸಿ ಜೂ.1 ರಂದು ಬಿದಿರಿನ ಕುದುರೆ ಹಾಗೂ ಆನೆಯನ್ನು ಶೃಂಗರಿಸಿ ನಂತರ ಸಂಜೆ ಪಾರಣ ಮಾನಿಯಲ್ಲಿ ಹಬ್ಬಕ್ಕೆ ವಿದಾಯ ಹೇಳುವುದು ವಾಡಿಕೆ.

ಹಬ್ಬದ ಹಿನ್ನೆಲೆ: ಪುರಾತನ ಕಾಲದಲ್ಲಿ ಬೇರಳಿ ನಾಡಿನಲ್ಲಿದ್ದ ಭಸ್ಮಾಸುರ ಎಂಬ ರಾಕ್ಷಸ ಈಶ್ವರನನ್ನು ಘೋರ ತಪಸ್ಸಿನ ಮೂಲಕ ಒಲಿಸಿಕೊಂಡು ತಾನು ತಲೆಯ ಮೇಲೆ ಕೈ ಇಡುವ ಎಲ್ಲರೂ ಭಸ್ಮವಾಗುವ ವರವನ್ನು ಸಂಪಾದಿಸಿಕೊಳ್ಳುತ್ತಾನೆ. ಬೇರಳಿನಾಡಿನ ಕಮ್ಮರ್ಟ್ ಮಲೆ ಎಂಬ ದಟ್ಟಾರಣ್ಯದಲ್ಲಿ ಈಶ್ವರ ದೇವರು ಇದ್ದರೆಂದು ನಂಬಿಕೆಯಿದೆ. ವರ ನೀಡಿದ ಈಶ್ವರನನ್ನೇ ಪ್ರಯೋಗಾರ್ಥವಾಗಿ ಭಸ್ಮ ಮಾಡಲು ಭಸ್ಮಾಸುರ ಪ್ರಯತ್ನಿಸಿದಾಗ ಜಾಗೃತನಾದ ಈಶ್ವರನು ಪಾರಾಗುವುದಕ್ಕಾಗಿ ವಿಷ್ಣುವನ್ನು ಪ್ರಾರ್ಥಿಸುತ್ತಾನೆ.

ಪ್ರತ್ಯಕ್ಷನಾದ ವಿಷ್ಣು ಕೊಟ್ಟ ವರವನ್ನು ವಾಪಸು ಪಡೆಯಲು ಸಾಧ್ಯವಿಲ್ಲ, ಕುದುರೆ ಹಾಗೂ ಆನೆಗಳ ಯಾಗವನ್ನು ನಡೆಸಿ ಆಹುತಿ ನೀಡುವ ಮೂಲಕ ಭಸ್ಮಾಸುರನ ಸಂಹಾರ ಮಾಡಬಹುದೆಂದು ಸಲಹೆ ನೀಡುತ್ತಾನೆ. ಅದರಂತೆ ಕುದುರೆ ಹಾಗೂ ಆನೆಗಳು ಹೊರಡುವ ಸ್ಥಳದಿಂದ ವಿವಿಧ ವೇಷದೊಂದಿಗೆ ಅವುಗಳೊಂದಿಗೆ ಹೊರಟ ಬೇರಳಿನಾಡಿನ ಜನ ಪಾರಣ ಮಾನಿ ಎಂಬಲ್ಲಿ ಭಸ್ಮಾಸುರನ ಸಂಹಾರಕ್ಕಾಗಿ ಕುದುರೆ ಹಾಗೂ ಆನೆಯನ್ನು ಆಹುತಿ ನೀಡುತ್ತಾರೆ. ಈ ಪ್ರತೀತಿಯಂತೆ ಇಂದಿಗೂ ಪ್ರತಿ ವರ್ಷ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕೊಡಗಿನಲ್ಲಿಯೇ ಈ ಹಬ್ಬವು ಅಂತಿಮ ಬೇಡು ಹಬ್ಬವಾಗಿದ್ದು, ಕಾವೇರಿ ಸಂಕ್ರಮಣದ ಮಾರನೆಯ ದಿನ ಕುಂದತಬೊಟ್ಟ್ ದೇವಾಲಯದಲ್ಲಿ ಬೇಡು ಹಬ್ಬ ಪ್ರಾರಂಭಗೊಳ್ಳುವುದು.

ವಿಶಿಷ್ಟತೆ: ಬೇರಳಿನಾಡಿನ ಪಾರಣ ಹಬ್ಬದ ವಿಶಿಷ್ಟತೆಯೆಂದರೆ, ಜಿಲ್ಲೆಯಲ್ಲಿ ನಡೆಯುವ ಇತರ ಬೇಡು ಹಬ್ಬಗಳಂತೆ ಬಿದಿರಿನ ಕುದುರೆಯನ್ನು ಉತ್ಸವದ ನಂತರ ವಾಪಸ್‌ ಮನೆಗೆ ತಂದು ರಕ್ಷಿಸಲಾಗುವುದಿಲ್ಲ. ಬದಲಾಗಿ ನಾಡಿನ 5 ನಿಗದಿತ ಸ್ಥಳಗಳಾದ ವಿ. ಬಾಡಗ, ಪೊದಕೇರಿ, ಕಂಡಂಗಾಲ, ಪೆಗ್ಗರಿಮಾಡು ಹಾಗೂ ಮರೋಡಿಯ ಕಮ್ಮರ್ಟಪ್ಪ ಅಂಬಲಗಳಿಂದ ಶೃಂಗಾರಗೊಂಡು ಪಾರಣ ಮಾನಿಗೆ ತೆರಳಿ ಉತ್ಸವ ಕಳೆದ ನಂತರ ಸಾಯಂಕಾಲ ಕುದುರೆಯನ್ನು ಕಡಿದು ದೇವರಿಗೆ ಆಹುತಿ ಕೊಡಲಾಗುವುದು.

ಕುದುರೆ ಪುಂಡ: ದೇವರ ಕುದುರೆ ಹಾಗೂ ಆನೆಯನ್ನು ತಯಾರಿಸಲು ವಿ.ಬಾಡಗ ಕಮ್ಮರಟಪ್ಪ ಅಂಬಲದ ಪಕ್ಕದಲ್ಲಿರುವ ಕುದುರೆ ಪುಂಡ (ದೇವರ ಬಿದಿರು) ಗುಡ್ಡೆಯಿಂದ ತಲಾ 1ರಂತೆ 5 ಬಿದಿರನ್ನು ಕಡಿದು ಕುದುರೆ ಹಾಗೂ ಆನೆಗಳನ್ನು ತಯಾರಿಸಲಾಗುತ್ತದೆ. ಈ ಬಿದಿರನ್ನು ನಂತರದ ದಿನದಲ್ಲಿ ಯಾರು ಬಳಸುವುದಿಲ್ಲ. ಪ್ರಕೃತಿಯ ನಿಯಮದಂತೆ 40 ವರ್ಷಕ್ಕೊಮ್ಮೆ ಕೊಡಗಿನಾದ್ಯಂತ ಬಿದಿರು ಹೂ ಬಿಟ್ಟು ನಾಶವಾಗುತ್ತದೆ.

ಆದರೆ, ಈ ದೇವರ ಬಿದಿರು ಯಾವುದೇ ಕಾರಣಕ್ಕೂ ನಾಶವಾಗುವುದಿಲ್ಲ ಹಾಗೂ ದೇವರಿದ್ದಾರೆ ಎಂಬುವುದಕ್ಕೆ ಬಿದಿರು ಸಾಕ್ಷಿ, ಎನ್ನುತ್ತಾರೆ ಇಲ್ಲಿನ ಜನರು.

– ಹೇಮಂತ್‌ ಎಂ.ಎನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT