ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹಕ ತಡಿಯಂಡಮೋಳ್ ಶಿಖರ

Last Updated 26 ಫೆಬ್ರುವರಿ 2012, 5:30 IST
ಅಕ್ಷರ ಗಾತ್ರ

ನಾಪೋಕ್ಲು: ಎಲ್ಲೆಡೆ ಬಿಸಿಲ ಧಗೆ ಏರುತ್ತಿರುವ ಈ ದಿನಗಳಲ್ಲಿ ತಂಪು ಹವೆಯ ಕೊಡಗಿಗೆ ಆಗಮಿಸುವ ಮಂದಿ ತಡಿಯಂಡ ಮೋಳ್ ಶಿಖರದತ್ತ ಹೆಜ್ಜೆ ಹಾಕುತ್ತಿದ್ದಾರೆ.

ಇಲ್ಲಿನ ಈ ಶಿಖರದ ಹಸಿರು ಸಿರಿ ಕಣ್ಮನ ಸೆಳೆಯುತ್ತಿದೆ. ಜಿಲ್ಲೆಯಲ್ಲಿ ಚಾರಣ ಪ್ರಿಯರಿಗೆ ಆಹ್ವಾನ ನೀಡುವ ಹಲವು ಶಿಖರಗಳ ಪೈಕಿ ತಡಿಯಂಡ ಮೋಳ್ ಕೂಡ ಒಂದು. ಇದು ಸಮುದ್ರ ಮಟ್ಟದಿಂದ 6500 ಅಡಿಗಳಷ್ಟು ಎತ್ತರವಿದ್ದು (1717ಮೀಟರ್) ಕೊಡಗಿನ ಅಗ್ರ ಶಿಖರವೆನಿಸಿದೆ.

ತಡಿಯಂಡ ಮೋಳ್ ಶಿಖರವನ್ನೇರಲು ಸಮೀಪದ ಕಕ್ಕಬ್ಬೆ ಎಂಬ ಊರಿಗೆ ದೂರದ ಊರುಗಳಿಂದ ಚಾರಣಿಗರು ಬರುತ್ತಿದ್ದಾರೆ. ವಾರಾಂತ್ಯದಲ್ಲಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಿಂದ ಯುವಕರು ಇಲ್ಲಿಗೆ ಆಗಮಿಸುತ್ತಿರುವುದು ಕಂಡು ಬರುತ್ತಿದೆ. ಕೊಡಗಿನ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ವೀಕ್ಷಿಸಿದ ನಂತರ ತಡಿಯಂಡಮೋಳ್ ಶಿಖರವನ್ನೇರಲು ಆಸಕ್ತಿ ತೋರುತ್ತಿದ್ದಾರೆ. ತಡಿಯಂಡಮೋಳ್ ಬೆಟ್ಟವು ಮಡಿಕೇರಿಯಿಂದ 55 ಕಿ.ಮೀ.ಗಳ ಅಂತರದಲ್ಲಿದೆ. ಕಕ್ಕಬ್ಬೆಯವರೆಗೆ ಬಸ್ ಸೌಲಭ್ಯವಿದೆಯಾದರೂ ಅಲ್ಲಿಂದ ಜೀಪನ್ನು ಬಾಡಿಗೆಗೆ ಒಯ್ಯಬೇಕಾಗುತ್ತದೆ. ಆಹಾರ ಮತ್ತು ನೀರು ಜೊತೆಗೊಯ್ಯಲೇಬೇಕು. ಕಕ್ಕಬ್ಬೆಯಿಂದ ತಡಿಯಂಡಮೋಳ್ ಶಿಖರದ ತುದಿಯನ್ನು ತಲುಪಲು 8-10 ಕಿ.ಮೀಗಳಷ್ಟು ಚಾರಣ ಮಾಡಬೇಕಾಗುತ್ತದೆ.

ಜಿಲ್ಲೆಯ ಆಗ್ನೇಯ ಭಾಗದಲ್ಲಿ ನಾಪೋಕ್ಲು ನಾಡಿನಲ್ಲಿರುವ ಈ ಪರ್ವತದ ಅಗ್ರಭಾಗವನ್ನು ತಲುಪುವುದು ಒಳ್ಳೆಯ ಸಾಹಸ ಯಾತ್ರೆ. ಚಾರಣ ಪ್ರಿಯರು ಕಕ್ಕಬ್ಬೆ ವ್ಯಾಪ್ತಿಯಲ್ಲಿರುವ ಹೋಂ ಸ್ಟೇಗಳಲ್ಲಿ ತಂಗಿದ್ದು, ಮುಂಜಾನೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಆರ್ಧದಷ್ಟು ದೂರವನ್ನು ಸುಲಭವಾಗಿ ಕ್ರಮಿಸಬಹುದಾದ್ದರಿಂದ ಸೂರ್ಯ ಭಾನೆತ್ತರಕ್ಕೇರುವ ಮುನ್ನ ಶಿಖರದ ಪಾದವನ್ನು ತಲುಪುವುದು ಸಾಧ್ಯ. ನಂತರದ ಹಾದಿಯೇ ಪರ್ವತಾರೋಹಣಕ್ಕೆ ಸವಾಲಾಗಿ ನಿಲ್ಲುವುದು. ಧಗೆ ಏರುತ್ತಿದ್ದಂತೆ ಎತ್ತರೆತ್ತರಕ್ಕೆ ಏರುವ ಸಾಹಸ ತುಸು ಶ್ರಮದಾಯಕವಾಗುತ್ತದೆ. ಪ್ರಪಾತದಂತಹ ಕಣಿವೆಗಳ ಅಡಿಯಿಂದ ಮುಗಿಲಿಗೆ ಮುತ್ತಿಕ್ಕುವಂತೆ ತೋರುವ ಶಿಖರದ ಸುತ್ತೆಲ್ಲ ಬರಿ ಬೋಳು ಗುಡ್ಡಗಳೇ ಆದರೂ ಅಪ್ಯಾಯಮಾನವೆನಿಸುತ್ತದೆ.

ತಡಿಯಂಡ ಮೋಳ್ ನಿಂದ ಸುತ್ತಲಿನ ದಿಗಂತದ ಸೌಂದರ್ಯವನ್ನು ವೀಕ್ಷಿಸುವುದೆಂದರೆ ಅದೊಂದು ಅವಿಸ್ಮರಣೀಯ ಅನುಭವ. ಮೋಡಗಳಿಲ್ಲದಾಗ ಕರಾವಳಿಯ ರಮ್ಯ ಸೂರ್ಯಾಸ್ತವನ್ನು ಕಣ್ತುಂಬಾ ನೋಡಿ ಸವಿಯಬಹುದು. ವರ್ಷದಲ್ಲಿ ಹಲವು ಚಾರಣಿಗರು ತಡಿಯಂಡ ಮೋಳ್ ಶಿಖರದ ಚಾರಣಕ್ಕೆ ಬರುತ್ತಾರೆ. ಈಗೀಗ ಶಿಖರದ ಅನುಪಮ ಬೆಡಗನ್ನು ಬೇಸಿಗೆಯಲ್ಲಿ ಸವಿಯ ಬಯಸುವ ಚಾರಣಾಸಕ್ತರ ಸಂಖ್ಯೆ ಅಧಿಕವಾಗಿದೆ.       

ತಡಿಯಂಡಮೋಳ್ ಬೆಟ್ಟದ ತಪ್ಪಲಿನಲ್ಲಿರುವ ನಾಲ್ಕು ನಾಡು ಅರಮನೆ, ಮತ್ತೊಂದು ಪಾರ್ಶ್ವದಲ್ಲಿರುವ ಪಾಡಿ ಇಗ್ಗುತಪ್ಪ ದೇವಾಲಯ, ಯವಕಪಾಡಿಯ ಪನ್ನಂಗಾಲತಮ್ಮೆ ದೇವಾಲಯ ಇನ್ನಿತರ ವೀಕ್ಷಣಾ ತಾಣಗಳಾಗಿದ್ದು ಮನಸೆಳೆಯುತ್ತವೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT