ಬುಧವಾರ, ಮೇ 18, 2022
25 °C

25 ದ್ವಿಚಕ್ರವಾಹನ ವಶ: ಮೂವರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಗಲಿ: ದ್ವಿಚಕ್ರವಾಹನ ಕದಿಯುತ್ತಿದ್ದ ಮೂವರು ಕಳ್ಳರನ್ನು ನಂಗಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಿಂದ ₹ 7 ಲಕ್ಷ ಮೌಲ್ಯದ 25 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ತಗ್ಲಿಹೊಸಹಳ್ಳಿಯ ಮುನಿರಾಜು, ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬನಹಳ್ಳಿಯ ಅಶ್ವಥ್ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದ ಮಂಜುನಾಥ್ ಬಂಧಿತರು.

ಮಾಲೂರು ತಾಲ್ಲೂಕಿನ ಚಿಕ್ಕಯಲುವಹಳ್ಳಿಯಲ್ಲಿ 5, ಮಾದನಟ್ಟಿ ಗ್ರಾಮದಲ್ಲಿ 6, ದೊಡ್ದಮಲ್ಲೆ ಗ್ರಾಮದಲ್ಲಿ 1, ಬನಹಳ್ಳಿಯಲ್ಲಿ 4, ಮುಳಬಾಗಿಲು ತಾಲ್ಲೂಕಿನ ಎನ್. ವಡ್ಡಹಳ್ಳಿಯಲ್ಲಿ 1, ತಾತಿಘಟ್ಟ ಗ್ರಾಮದಲ್ಲಿ 3, ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ 4 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ 1 ದ್ವಿಚಕ್ರವಾಹನ ಕಳವು ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ದ್ವಿಚಕ್ರವಾಹನಗಳ ಕಳ್ಳತನ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದ ಆರೋಪಿಗಳು ಎಂಟು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದರು.

ಡಿವೈಎಸ್‌ಪಿ ಕೆ.ಸಿ. ಗಿರಿ ಮಾತನಾಡಿ, ದ್ವಿಚಕ್ರವಾಹನಗಳ ಕಳ್ಳತನದ ಬಗ್ಗೆ ಜನರಿಂದ ದೂರು ಬರುತ್ತಿದ್ದವು. ನಂಗಲಿ ಠಾಣೆಯ ಸಿಬ್ಬಂದಿಯಾದ ಎಎಸ್‌ಐ ಸಿ.ಜಿ. ನಾರಾಯಣಸ್ವಾಮಿ ಮತ್ತು ಕಾನ್‌ಸ್ಟೆಬಲ್ ವಿನಾಯಕ ಅವರನ್ನು ಆರೋಪಿಗಳ ಪತ್ತೆಗೆ ನೇಮಿಸಲಾಗಿತ್ತು. ಎನ್. ವಡ್ಡಹಳ್ಳಿಯಲ್ಲಿ ಕರ್ತವ್ಯದಲ್ಲಿದ್ದಾಗ ದ್ವಿಚಕ್ರವಾಹನದಲ್ಲಿ ಮುನಿಸ್ವಾಮಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ. ಪೊಲೀಸರನ್ನು ನೋಡಿ ಓಡಿಹೋಗಲು ಯತ್ನಿಸಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ದ್ವಿಚಕ್ರವಾಹನಗಳ ಕಳ್ಳತನ ಪ್ರಕರಣ ಬಯಲಿದೆ ಬಂದಿದೆ ಎಂದು ವಿವರಿಸಿದರು.

ಎಂಟು ತಿಂಗಳ ಹಿಂದೆ ಟಾಟಾ ಸುಮೊ ಕಳ್ಳತನ ಮಾಡಿ ಜೈಲಿಗೆ ಹೋಗಿ ಬಿಡುಗಡೆಯಾಗಿದ್ದ. ಬಳಿಕ ಕಳ್ಳತನ ವೃತ್ತಿಯನ್ನು ಶುರು ಮಾಡಿದ್ದ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಶೀಘ್ರವೇ ಆತನನ್ನೂ ಬಂಧಿಸಲಾಗುವುದು ಎಂದರು.

ಕಳ್ಳರ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ ಮತ್ತು ಡಿವೈಎಸ್‌ಪಿ ಕೆ.ಸಿ. ಗಿರಿ ಮಾರ್ಗದರ್ಶನದಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಎನ್‌. ಗೋಪಾಲನಾಯಕ್‌, ನಂಗಲಿ ಪಿಎಸ್‌ಐಗಳಾದ ವರಲಕ್ಷ್ಮಮ್ಮ ಮತ್ತು ಚೌಡಪ್ಪ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದ ನಂಗಲಿ ಪೊಲೀಸ್‌ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ₹ 10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.