ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬಾಡಿಗೆ ಕಟ್ಟಡದಲ್ಲಿ 462 ಅಂಗನವಾಡಿ! ಸ್ವಂತ ಕಟ್ಟಡ ಯಾವಾಗ?

Published 12 ಮಾರ್ಚ್ 2024, 6:02 IST
Last Updated 12 ಮಾರ್ಚ್ 2024, 6:02 IST
ಅಕ್ಷರ ಗಾತ್ರ

ಕೋಲಾರ: ಖಾಸಗಿ ಮತ್ತು ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಒಡ್ಡಿರುವ ಸ್ಪರ್ಧೆಯನ್ನು ಎದುರಿಸಲು ಕಸರತ್ತು ನಡೆಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದೇ ಇರುವುದು ಹಿನ್ನಡೆಯಾಗಿ ಪರಿಣಮಿಸುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 2,180 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, 462 ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಅಷ್ಟೂ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕಿದ್ದು, ಒಂದಲ್ಲ ಒಂದು ಕೊರತೆ ಇರುವುದು ಸಾಮಾನ್ಯವಾಗಿದೆ.

ಬಾಡಿಗೆ ಕಟ್ಟಡವನ್ನು ಅಂಗನವಾಡಿಗೆ ಬೇಕಾದ ರೀತಿಯಲ್ಲಿ ನವೀಕರಿಸಲು ಮಾಲೀಕರು ಒಪ್ಪುವುದಿಲ್ಲ. ಅಲ್ಲದೇ, ಬಾಡಿಗೆ, ನಿರ್ವಹಣೆಯೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅನುದಾನದ ಕೊರತೆಯಿಂದ ಕೆಲ ಕಟ್ಟಡಗಳಿಗೆ ಬಾಡಿಗೆ ಕಟ್ಟಲೂ ಇಲಾಖೆಗೆ ಸಾಧ್ಯವಾಗುತ್ತಿಲ್ಲ.

‘ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿ ನಡೆಸುತ್ತಿರುವುದು ನಿಜ. ಆದರೆ, ಡಿಸೆಂಬರ್‌ವರೆಗಿನ ಬಾಡಿಗೆಯನ್ನು ಪಾವತಿಸಲಾಗಿದೆ. ಯಾವುದೇ ತೊಂದರೆ ಇಲ್ಲದೇ ನಡೆಸುತ್ತಿದ್ದು, ಸದ್ಯದಲ್ಲೇ ಕೆಲವೆಡೆ ಕಟ್ಟಡ ದೊರೆಯಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರ ಪ್ರದೇಶದಲ್ಲಿ ನಿವೇಶನದ ಕೊರತೆ ಇದೆ. ಗ್ರಾಮಾಂತರದಲ್ಲಿ ಸರ್ಕಾರದ ನಿವೇಶಗಳು ಲಭ್ಯ ಇವೆ. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ.

ಸುಮಾರು 1,834 ಅಂಗನವಾಡಿಗಳು ಗ್ರಾಮಾಂತರ ಪ್ರದೇಶದಲ್ಲಿವೆ. ಈ ಭಾಗದ ಮಕ್ಕಳು ನೆಚ್ಚಿಕೊಂಡಿರುವುದು ಇದೇ ಸರ್ಕಾರಿ ಅಂಗನವಾಡಿಗಳನ್ನು.

ಬಾಕಿ ಇರುವ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬೇಗನೇ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಈಗಾಗಲೇ ಹಲವಾರು ಸಭೆ ನಡೆಸಿ ಸೂಚನೆ ನೀಡಿದ್ದಾರೆ. ಹೊಸ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಖಾಲಿ ಸ್ಥಳವನ್ನು ನೀಡುವಂತೆ ಹಾಗೂ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡಿರುವ ಹೊಸ ಕಟ್ಟಡಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಲು ನಿರ್ದೇಶಿಸಿದ್ದಾರೆ. ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಿಂದ ಸ್ಥಳೀಯ ಶಾಲೆಗಳ ಆವರಣದಲ್ಲಿ ನಡೆಸಲು ಕ್ರಮ ಕೈಗೊಳ್ಳಬೇಕು. ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದೂ ಹೇಳಿದ್ದಾರೆ.

ಸಮುದಾಯ ಭವನಗಳು ಬಹುತೇಕ ವರ್ಷವಿಡೀ ಖಾಲಿ ಇರುತ್ತವೆ. ಸಮುದಾಯದ ಮುಖಂಡರನ್ನು ಸಂಪರ್ಕಿಸಿ ಆ ಕಟ್ಟಡಗಳಿಗೂ ಅಂಗನವಾಡಿ ಕೇಂದ್ರಗಳನ್ನು ವರ್ಗಾಯಿಸಬಹುದು ಎಂಬ ಸಲಹೆ ಕೇಳಿ ಬಂದಿದೆ.

ಅಂಗನವಾಡಿ ಕಟ್ಟಡಗಳಿಗೆ ಸೌಲಭ್ಯ ಕಲ್ಪಿಸುವ ಹಾಗೂ ನಿವೇಶನ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಹಲವೆಡೆ ನಿವೇಶನ ಸಿಕ್ಕಿದ್ದು ಕಟ್ಟಡ ನಿರ್ಮಿಸಲಾಗುವುದು
-ನಾರಾಯಣಸ್ವಾಮಿ, ಉಪನಿರ್ದಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT