ಜನಪದ ಕಲೆ ರಕ್ಷಣೆಗೆ ಮುಂದಾಗಿ: ವಿ.ರವಿಕುಮಾರ್ ಸಲಹೆ

ಕೋಲಾರ: ‘ಸಾಮಾಜಿಕ ಜಾಲತಾಣಗಳಿಂದ ಜನಪದ ಕಲೆ ನಶಿಸುತ್ತಿದ್ದು, ರಕ್ಷಿಸಲು ಯುವಕರು ಮುಂದಾಗಬೇಕು’ ಎಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ವಿ.ರವಿಕುಮಾರ್ ಸಲಹೆ ನೀಡಿದರು.
ಕರಾವಳಿ ಕನ್ನಡ ಸಂಘದಿಂದ ನಗರದಲ್ಲಿ ಶನಿವಾರ ರಾತ್ರಿ ನಡೆದ ಶಿವ ಪಂಚಾಕ್ಷರಿ ಮಹಿಮೆ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ‘ಟಿವಿ ಮಾದ್ಯಮಗಳು ಜನಪದ ಕಲೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ’ ಎಂದು ಅತಂಕ ವ್ಯಕ್ತಪಡಿಸಿದರು.
‘ದೇಶದ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯ ಯಕ್ಷಗಾನದಿಂದ ಆಗುತ್ತಿದೆ. ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಮೂಲಕ ನೈತಿಕತೆಯನ್ನು ಬೋಧಿಸಬಹುದು. ಆದರೆ ವ್ಯಕ್ತಿಚಿತ್ರಣ ಮೂಡಿಸಿದರೆ ಆಗ ಮನಮುಟ್ಟಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
‘ಕಲೆಗಳನ್ನು ನೋಡುವವರಿದ್ದರೂ ಕಲಿಯುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಈ ಕಲಾವಿದರ ನಂತರ ಮುಂದೆ ಯಾರು ಎಂಬ ಪ್ರಶ್ನೆ ಮೂಡುವುದರಿಂದ ಯುವಕರು ಯಕ್ಷಗಾನ ಕಲೆಯನ್ನು ಅಭ್ಯಸಿಸಿ ಮುಂದುವರಿಸಿಕೊಂಡು ಹೋಗಬೇಕು’ ಎಂದು ಹೇಳಿದರು.
‘ಯಕ್ಷಗಾನ ಗಂಡುಕಲೆ. ದೈಹಿಕ, ಮಾನಸಿಕವಾಗಿ ಸದೃಢರಾಗಿರುವವರು ಮಾತ್ರ ಪಾತ್ರಧಾರಿಗಳಾಗಬಹುದು. ಹಲವು ಸಂಶೋಧನೆ, ಪ್ರಯೋಗಗಳ ಮೂಲಕ ಯಕ್ಷಗಾನಕ್ಕೆ ವೈವಿಧ್ಯತೆ, ಮೆರುಗು ತಂದುಕೊಟ್ಟವರು ಶಿವರಾಮ ಕಾರಂತರು. 12 ಗಂಟೆಗಳ ಕಾಲ ನಡೆಯುತ್ತಿದ್ದ ಯಕ್ಷಗಾನ ಕಥಾಪ್ರಸಂಗ ಎರಡ್ಮೂರು ಗಂಟೆಗಳ ಕಾಲಕ್ಕೆ ಸೀಮಿತಗೊಳಿಸಿದ್ದಾರೆ’ ಎಂದು ವಿವರಿಸಿದರು.
‘ಧಾರ್ಮಿಕ, ಸಾಮಾಜಿಕ ಮತ್ತು ಮನರಂಜನೆ ಒಂದಾಗಿರುವ ಕಲೆ ಯಕ್ಷಗಾನ. ಹತ್ತಾರು ಮೇಳಗಳು ಬಿಡುವಿಲ್ಲದ ಕಾರ್ಯಕ್ರಮಗಳನ್ನು ನೀಡುತ್ತಿದೆ. ಕಟೀಲು ಮೇಳದಲ್ಲಿರುವ 12 ತಂಡಗಳಿಗೆ ಮುಂದಿನ 10 ವರ್ಷಗಳ ಕಾಲ ಈಗಲೇ ಪ್ರದರ್ಶನ ಬುಕ್ ಆಗಿದೆ. ಅಷ್ಟರ ಮಟ್ಟಿಗೆ ಯಕ್ಷಗಾನ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ’ ಎಂದರು.
‘ರಾಜ್ಯದ ಇತರೆ ಜಿಲ್ಲೆಗಳ ಜನಕ್ಕೆ ಯಕ್ಷಗಾನ ಪರಿಚಯಿಸುವ ಕೆಲಸ ಕರಾವಳಿ ಕನ್ನಡ ಸಂಘದಿಂದ ಮಾಡಲಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ; ಎಂದು ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಪಿ.ಹರ್ಷರಾಜ್ ಹೇಳಿದರು.
ಕರ್ನಾಟಕ ಕಲಾದರ್ಶಿನಿಯ ನಿರ್ದೇಶಕ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಲೇಖಕ ವಿಶ್ವ ಕುಂದಾಪುರ, ಸಂಘದ ಪದಾಧಿಕಾರಿಗಳಾದ ನವೀನ್ ಬ್ರಹ್ಮಾವರ, ವಿಶ್ವನಾಥ ವೈದ್ಯ, ನಿತ್ಯಾನಂದ ಶೆಟ್ಟಿ, ರವಿಕುಮಾರ್ ರೈ, ವಿಶ್ವಾಸ್ ಜೋಷಿ, ಫಣೀಂದ್ರ ನಾವುಡ, ರಮೇಶ್ಆಚಾರ್, ಜಯಕುಮಾರ್, ರಮೇಶ್, ಸುಜಾತ ಜೋಷಿ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.