ಭಾನುವಾರ, ಸೆಪ್ಟೆಂಬರ್ 19, 2021
29 °C

ಸದ್ಯದಲ್ಲೇ ಹಾಲು ಖರೀದಿ ದರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ರೈತರಿಗೆ ತೊಂದರೆ ನೀಡುವ ಉದ್ದೇಶದಿಂದ ಹಾಲು ಖರೀದಿ ದರ ಇಳಿಸಿಲ್ಲ. ಹಾಲು ಸಂಗ್ರಹ ಪ್ರಮಾಣ ಹೆಚ್ಚಿದ ಕಾರಣ ತಾತ್ಕಾಲಿಕವಾಗಿ ದರ ಕಡಿಮೆ ಮಾಡಲಾಗಿದ್ದು, ಸದ್ಯದಲ್ಲೇ ದರ ಹೆಚ್ಚಿಸಲಾಗುತ್ತದೆ’ ಎಂದು ಕೋಚಿಮುಲ್ ನಿರ್ದೇಶಕ ಆರ್.ರಾಮಕೃಷ್ಣೇಗೌಡ ಭರವಸೆ ನೀಡಿದರು.

ತಾಲ್ಲೂಕಿನ ಅಬ್ಬಣಿ ಗ್ರಾಮದಲ್ಲಿ ಶುಕ್ರವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ‘ಒಕ್ಕೂಟದ ವಿರುದ್ಧ ಕೆಲ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಹೇಳಿಕೆ ನೀಡುತ್ತಿದ್ದು, ಇದಕ್ಕೆ ಯಾರೂ ಕಿವಿಗೊಡಬಾರದು’ ಎಂದು ಹೇಳಿದರು.

‘ಹಾಲು ಉತ್ಪಾದಕರು ಸಂಘಕ್ಕೆ ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘವನ್ನು ಮತ್ತಷ್ಟು ಬಲಪಡಿಸಬೇಕು. ಮುಂದಿನ ದಿನಗಳಲ್ಲಿ ಸಂಘದಲ್ಲಿ ಬಿಎಂಸಿ ಕೇಂದ್ರ ಸ್ಥಾಪನೆಗೆ ಸಹಕಾರ ನೀಡುತ್ತೇವೆ. ಹೈನುಗಾರಿಕೆಯು ರೈತರು ಬೆನ್ನೆಲುಬಾಗಿದ್ದು, ಜಾನುವಾರುಗಳ ಆರೋಗ್ಯದ ಕಡೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

‘ಒಕ್ಕೂಟದಿಂದ ವಿತರಿಸುವ ಪಶು ಆಹಾರವನ್ನು ರಾಸುಗಳಿಗೆ ನೀಡಬೇಕು. ಕಾಲಕ್ಕೆ ತಕ್ಕಂತೆ ರಾಸುಗಳಿಗೆ ಗರ್ಭಧಾರಣೆ ಲಸಿಕೆ, ಜಂತು ಹುಳು ಮಾತ್ರೆ ನೀಡಿ ಆರೋಗ್ಯ ಕಾಪಾಡಬೇಕು. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಬೇಸಿಗೆಗೆ ಮೇವಿನ ಸಮಸ್ಯೆ ಎದುರಾಗಬಹುದು. ಆದ ಕಾರಣ ಈಗಿನಿಂದಲೇ ಮೇವು ದಾಸ್ತಾನು ಇಟ್ಟುಕೊಳ್ಳಬೇಕು’ ಎಂದು ಕೋಚಿಮುಲ್‌ ಉಪ ವ್ಯವಸ್ಥಾಪಕ ಎ.ಸಿ.ಶ್ರೀನಿವಾಸಗೌಡ ತಿಳಿಸಿದರು.

ರೈತರಿಗೆ ಸನ್ಮಾನ: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ನಗದು ಬಹುಮಾನ, ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಲಾಯಿತು. ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ 3 ಮಂದಿ ರೈತರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಎಂ.ಸುರೇಶ್, ಉಪಾಧ್ಯಕ್ಷ ಎಂ.ರಾಮಚಂದ್ರಪ್ಪ, ನಿರ್ದೇಶಕರಾದ ಬಿ.ಎಂ.ಕೃಷ್ಣಪ್ಪ, ಎ.ಎಂ.ಶ್ರೀನಿವಾಸಪ್ಪ, ಎ.ಎನ್.ಸಂಪತ್‌ಕುಮಾರ್‌, ವಿ.ನಾಗರಾಜ್, ಎಸ್.ವೆಂಕಟೇಶಪ್ಪ, ಎ.ಎಂ.ಕೃಷ್ಣಪ್ಪ, ವಿ.ನಾರಾಯಣಪ್ಪ, ರತ್ನಮ್ಮ, ಕವಿತಾ, ತನುಜಾ, ಕಾರ್ಯದರ್ಶಿ ಎಂ.ಶಂಕರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು