ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

616 ಮಕ್ಕಳು ಶಾಲೆಯಿಂದ ಹೊರಗೆ

Last Updated 21 ಆಗಸ್ಟ್ 2019, 14:18 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ 6 ವರ್ಷದಿಂದ 14 ವರ್ಷದೊಳಗಿನ 616 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಅವರನ್ನು ಮುಖ್ಯವಾಹಿನಿಗೆ ಕರೆತರುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಾಜರಾತಿ ಅಧಿಕಾರಿಗಳ ಕಾರ್ಯಾಗಾರದಲ್ಲಿ ಮಾತನಾಡಿ, ‘ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ 6 ವರ್ಷದಿಂದ 14 ವರ್ಷದೊಳಗಿನ ಪ್ರತಿ ಮಗುವು ಶಾಲೆಗೆ ದಾಖಲಾಗಿರಬೇಕು, ಶಿಕ್ಷಕರು ಅಯಾ ಗ್ರಾಮದಲ್ಲಿ ಸರ್ವೆ ಮಾಡಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರಬೇಕು’ ಎಂದು ಸೂಚಿಸಿದರು.

‘ಕೆಲ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಾರೆ. ಆ ಮಕ್ಕಳ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸದಿದ್ದರೆ ವಂಚನೆ ಮಾಡಿದಂತೆ’ ಎಂದರು.

‘ಸಂವಿಧಾನದ ಪ್ರಕಾರ ಶಿಕ್ಷಣವು ಮೂಲಭೂತ ಹಕ್ಕಾಗಿದ್ದು, ಎಲ್ಲಾ ಮಕ್ಕಳಿಗೂ ಶಿಕ್ಷಣ ಕೊಡುವುದು ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಜವಾಬ್ದಾರಿ’ ಎಂದು ಡಯಟ್ ಪ್ರಾಂಶುಪಾಲ ಎನ್.ಶ್ರೀಕಂಠ ಅಭಿಪ್ರಾಯಪಟ್ಟರು.

‘ಮಗು ಸತತವಾಗಿ 3-4 ದಿನ ಶಾಲೆಗೆ ಗೈರಾದರೆ ಶಿಕ್ಷಕರು ಆ ಬಗ್ಗೆ ವಿಚಾರಣೆ ಮಾಡಿ ಶಾಲೆಗೆ ಕರೆತಂದರೆ ಆ ಮಗು ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿಗೆ ಸೇರುವುದಿಲ್ಲ. ಆದರೆ, ಸತತ 7 ದಿನ ಶಾಲೆಗೆ ಗೈರಾದರೆ ಕಾಯ್ದೆ ಅನ್ವಯಿಸುತ್ತದೆ. ಆ ಸಂದರ್ಭದಲ್ಲಿ ಹಾಜರಾತಿ ಅಧಿಕಾರಿಗಳು ಮಕ್ಕಳ ಮನೆಗೆ ಭೇಟಿ ನೀಡಿ ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ತಿಳಿಸಿದರು.

ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಮುನಿರತ್ನಯ್ಯಶೆಟ್ಟಿ, ಜಿಲ್ಲಾ ನೋಡಲ್ ಅಧಿಕಾರಿ ಸಿದ್ದೇಶ್, ತರಬೇತಿ ಕಾರ್ಯಾಗಾರದ ನೋಡಲ್ ಅಧಿಕಾರಿ ನರಸಿಂಹಯ್ಯ, ಡಯಟ್ ಹಿರಿಯ ಉಪನ್ಯಾಸಕ ಟಿ.ಕೆ.ರಾಘವೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT