ಶನಿವಾರ, ಜೂನ್ 6, 2020
27 °C
ರೋಗಿಗಳಿಗೆ ಕಾರ್ಪೋರೇಟ್ ಆಸ್ಪತ್ರೆ ಮಾದರಿಯಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ

ಜನಪ್ರತಿನಿಧಿಗಳ ಶ್ರಮ: ಬದಲಾದ ಆಸ್ಪತ್ರೆ

ಜಿ.ವಿ.ಪುರುಷೋತ್ತಮರಾವ್ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ಒಬ್ಬ ವೈದ್ಯ ಹಾಗೂ ಇಬ್ಬರು ವೈದ್ಯಕೀಯ ಸಿಬ್ಬಂದಿಯೊಂದಿಗೆ ಕಾರ್ಯಾರಂಭ ಮಾಡಿದ ನಗರದ ಸಾರ್ವಜನಿಕ ಆಸ್ಪತ್ರೆಯು ಇಂದು ಗುಣಮಟ್ಟದ ವೈದ್ಯಕೀಯ ಸೇವೆ ನೀಡುವುದರೊಂದಿಗೆ ಕಾರ್ಪೋರೇಟ್‌ ಆಸ್ಪತ್ರೆಯ ಮಟ್ಟಕ್ಕೆ ಬೆಳೆದಿದೆ.

ಈ ಹಿಂದೆ ಮುನ್ಸಿಪಲ್‌ ಆಸ್ಪತ್ರೆಯಾಗಿ ಆರಂಭವಾದಾಗ ಇಲ್ಲಿ ಸಮಸ್ಯೆಗಳ ಸರಮಾಲೆಯೇ ಇತ್ತು. ಮೂಲಸೌಕರ್ಯ ಸಮಸ್ಯೆ ಕಾರಣಕ್ಕೆ ರೋಗಿಗಳು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದರು. ವೈದ್ಯಕೀಯ ಸಿಬ್ಬಂದಿ ಕೊರತೆ ಕಾರಣಕ್ಕೆ ಇಲ್ಲಿನ ರೋಗಿಗಳನ್ನು ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿತ್ತು.

ಕಾಲ ಬದಲಾದಂತೆ ಆಸ್ಪತ್ರೆ ಸ್ವರೂಪವೇ ಬದಲಾಯಿತು. ಸ್ಥಳೀಯ ಜನಪ್ರತಿನಿಧಿಗಳ ಶ್ರಮದ ಫಲವಾಗಿ ಆಸ್ಪತ್ರೆಯಲ್ಲಿನ ಮೂಲಸೌಕರ್ಯ ಸಮಸ್ಯೆಗಳೆಲ್ಲಾ ಬಗೆಹರಿದು ಬಡ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗಿದೆ. ಚಿಕಿತ್ಸೆಗಾಗಿ ದೂರದ ಜಿಲ್ಲಾ ಕೇಂದ್ರ ಆಸ್ಪತ್ರೆಗಳ ಹೋಗುತ್ತಿದ್ದ ರೋಗಿಗಳು ಇದೀಗ ನಗರದ ಸಾರ್ವಜನಿಕ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ.

100 ಹಾಸಿಗೆ ಸಾಮರ್ಥ್ಯ ಆಸ್ಪತ್ರೆಯಲ್ಲಿ ದಿನಕ್ಕೆ ಸುಮಾರು 150 ಮಂದಿ ಹೊರ ರೋಗಿಗಳು ಬರುತ್ತಾರೆ. 30 ಮಂದಿ ಒಳ ರೋಗಿಗಳಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸುಸಜ್ಜಿತ ಕಟ್ಟಡ, ವೈದ್ಯಕೀಯ ಸಿಬ್ಬಂದಿ, ಔಷಧ, ಮಾತ್ರೆ ವಿತರಣೆ ಹೀಗೆ ಎಲ್ಲಾ ಸೇವೆಗಳಲ್ಲೂ ಆಸ್ಪತ್ರೆಯು ಮಾದರಿಯಾಗಿದೆ.

ನೀರಿನ ಸಮಸ್ಯೆ: ಆಸ್ಪತ್ರೆ ಆವರಣದಲ್ಲಿ ಒಂದೇ ಒಂದು ಕೊಳವೆ ಬಾವಿಯಿದ್ದು, ನೀರಿನ ಇಳುವರಿ ಕಡಿಮೆಯಾಗಿದೆ. ಆಸ್ಪತ್ರೆಯ ಅಗತ್ಯತೆಗೆ ತಕ್ಕಂತೆ ಕೊಳವೆ ಬಾವಿಯಲ್ಲಿ ನೀರು ಲಭ್ಯವಿಲ್ಲ. ಹೀಗಾಗಿ ನಗರಸಭೆಯು ಆಸ್ಪತ್ರೆಗೆ ಪ್ರತಿನಿತ್ಯ 3 ಟ್ಯಾಂಕರ್‌ ಲೋಡ್‌ ನೀರು ಸರಬರಾಜು ಮಾಡುತ್ತಿದೆ. ಆದರೆ, ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಸಂಖ್ಯೆ ಹೆಚ್ಚಿರುವುದರಿಂದ ನೀರು ಸಾಕಾಗುತ್ತಿಲ್ಲ.

ಶೌಚಾಲಯ ದುರ್ಬಳಕೆ: ಆಸ್ಪತ್ರೆ ಶೌಚಾಲಯವು ಸಾರ್ವಜನಿಕ ಶೌಚಾಲಯದಂತಾಗಿದೆ. ಅಕ್ಕಪಕ್ಕದ ನೇತಾಜಿ ನಗರ, ಗಾಣಿಗರಬೀದಿ, ಜಹಂಗೀರ್‌ ಮೊಹಲ್ಲಾ ಬಡಾವಣೆ ನಿವಾಸಿಗಳು ಆಸ್ಪತ್ರೆಯ ಶೌಚಾಲಯ ಬಳಕೆ ಮಾಡುತ್ತಿದ್ದಾರೆ. ಈ ಬಡಾವಣೆಗಳ ನಿವಾಸಿಗಳು ಬೆಳಗಿನ ಸಂದರ್ಭದಲ್ಲಿ ಆಸ್ಪತ್ರೆಗೆ ಅತಿಕ್ರಮ ಪ್ರವೇಶ ಮಾಡಿ ಶೌಚಾಲಯದಲ್ಲಿ ಮಲ ಹಾಗೂ ಮೂತ್ರಬಾಧೆ ತೀರಿಸಿಕೊಳ್ಳುತ್ತಿದ್ದಾರೆ.

ಆಸ್ಪತ್ರೆ ವೈದ್ಯರು ಹಾಗೂ ಕಾವಲು ಸಿಬ್ಬಂದಿಯು ಹಲವು ಬಾರಿ ಎಚ್ಚರಿಕೆ ನೀಡಿದರೂ ಸ್ಥಳೀಯರ ಆಟಾಟೋಪಕ್ಕೆ ಕಡಿವಾಣ ಬಿದ್ದಿಲ್ಲ. ಶೌಚಾಲಯಗಳಲ್ಲಿ ಸ್ವಚ್ಛತೆಯ ಸಮಸ್ಯೆಯಿದ್ದು, ಗಬ್ಬೆದ್ದು ನಾರುತ್ತಿವೆ. ನೀರಿನ ಕೊರತೆಯ ಕಾರಣಕ್ಕೆ ಶೌಚಾಲಯಗಳನ್ನು ಸರಿಯಾಗಿ ಸ್ವಚ್ಛ ಮಾಡುತ್ತಿಲ್ಲ.

ಆಹಾರ ಕೊಡುತ್ತಿಲ್ಲ: ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತವಾಗಿ ಆಹಾರ ನೀಡಲು ಸುಸಜ್ಜಿತ ಅಡುಗೆ ಕೋಣೆ ನಿರ್ಮಿಸಲಾಗಿದೆ. ಆದರೆ, ಅಡುಗೆ ಕೋಣೆ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಹೀಗಾಗಿ ಸದ್ಯಕ್ಕೆ ಒಳ ರೋಗಿಗಳಿಗೆ ಆಹಾರ ವಿತರಣೆ ಮಾಡುತ್ತಿಲ್ಲ. ರೋಗಿಗಳು ಆಸ್ಪತ್ರೆಯ ಅಕ್ಕಪಕ್ಕದ ಹೋಟೆಲ್‌ಗಳಿಂದ ಆಹಾರ ತರಿಸಿಕೊಳ್ಳುವ ಪರಿಸ್ಥಿತಿಯಿದೆ.

ಆಸ್ಪತ್ರೆಯಲ್ಲಿನ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪ್ರಯೋಗಾಲಯ ತಜ್ಞರ ಹುದ್ದೆಗಳು ಸಂಪೂರ್ಣ ಭರ್ತಿಯಾಗಿದ್ದು, ಸಿಬ್ಬಂದಿ ಕೊರತೆಯಿಲ್ಲ. ರೋಗಿಗಳು ಹಾಗೂ ಸಿಬ್ಬಂದಿಯ ಭದ್ರತೆ ದೃಷ್ಟಿಯಿಂದ ಕಾವಲುಗಾರರನ್ನು ನೇಮಿಸಿಕೊಳ್ಳಲಾಗಿದೆ. ಅಲ್ಲದೇ, ಹಲವೆಡೆ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ವೈದ್ಯಕೀಯ ಸಿಬ್ಬಂದಿಯ ವಾಸಕ್ಕೆ ಯೋಗ್ಯ ವಸತಿಗೃಹಗಳಿಲ್ಲ. ಹೀಗಾಗಿ ಕೆಲ ಸಿಬ್ಬಂದಿಯು ಬಾಡಿಗೆ ಮನೆಗಳಲ್ಲಿ ವಾಸವಿದ್ದಾರೆ. ಮತ್ತೆ ಕೆಲವರು ದೂರದ ಊರುಗಳಲ್ಲಿ ಮನೆ ಮಾಡಿ ಪ್ರತಿನಿತ್ಯ ಆಸ್ಪತ್ರೆಗೆ ಬಂದು ಹೋಗುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು