ಮಂಗಳವಾರ, ಜನವರಿ 26, 2021
25 °C
ಮೋಡ ಮುಸುಕಿದ ವಾತಾವರಣ ತಂದ ರೋಗಬಾಧೆ

ಶ್ರೀನಿವಾಸಪುರ: ಅವರೆ ಹೂವಿಗೆ ಮುಳುವಾದ ಮೋಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಉಂಟಾಗಿರುವ ವಾತಾವರಣ ವೈಪರೀತ್ಯದಿಂದ ಮಾವು ಹಾಗೂ ಅವರೆ ಹೂವಿಗೆ ಹಾನಿ ಉಂಟಾಗಿದೆ.

ತಾಲ್ಲೂಕಿನಲ್ಲಿ ಮೋಡ ಮುಸುಕಿದ ವಾತಾವರಣ ಇರುತ್ತಿದ್ದು, ಚಳಿ ಹೆಚ್ಚಾಗಿದೆ. ಆಗಾಗ ಮಳೆ ಹನಿಯುತ್ತಿದೆ. ಇಂಥ ವಾತಾವರಣದಲ್ಲಿ ಅವರೆ ಹಾಗೂ ಮಾವಿನ ಹೂ ರೋಗ ಪೀಡಿತವಾಗುತ್ತದೆ.

ಮಾವಿನ ತೋಟಗಳಲ್ಲಿ ಈಗ ಹೂ ಬರುತ್ತಿದೆ. ಮುಖ್ಯವಾಗಿ ಬಾದಾಮಿ ಹಾಗೂ ತೋತಾಪುರಿ ಜಾತಿಯ ಮರಗಳಲ್ಲಿ ಹೂಬಿಡುವ ಪ್ರಮಾಣ ಹೆಚ್ಚಾಗಿದೆ. ರಾಗಿ ಬೆಳೆಯೊಂದಿಗೆ ಹಾಗೂ ಪ್ರತ್ಯೇಕವಾಗಿ ಬೆಳೆಯಲಾಗಿರುವ ಅವರೆ ಹೊಲಗಳಲ್ಲಿ ಹೂ ಇದೆ. ಅದರಲ್ಲೂ ತಡವಾಗಿ ಬಿತ್ತನೆ ಮಾಡಲಾಗಿರುವ ಹೊಲಗಳಲ್ಲಿ ಈಗ ಹೂ ಬರುತ್ತಿದೆ.

ಸಂಕ್ರಾಂತಿ ಸಮಯಕ್ಕೆ ಅವರೆ ಕಾಯಿ ಸಿಕ್ಕಿದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುತ್ತದೆ. ರೈತರು ಅದರ ನಿರೀಕ್ಷೆಯಲ್ಲಿದ್ದಾರೆ. ಆದರೆ ವಾತಾವರಣ ವೈಪರೀತ್ಯ ಹೂವಿಗೆ ಮುಳುವಾಗಿ ಪರಿಣಮಿಸಿದೆ. ಔಷಧ ಸಿಂಪಡಣೆ ಸಾಧ್ಯವಾಗದ ಪರಿಣಾಮವಾಗಿ ಕಾಯಿಗೆ ಹುಳು ಬಾಧೆ ಹೆಚ್ಚಿದೆ. ಮಾವಿನ ಮರಗಳಿಗೆ ಔಷಧ ಸಿಂಪಡಣೆ ಮಾಡಲು ಈಗ ಸಕಾಲ. ಆದರೆ ಮೋಡ ಮುಸುಕಿದ ವಾತಾವರಣ ಹಾಗೂ ಹನಿಯುವ ಮಳೆ ಅದಕ್ಕೆ ಅವಕಾಶ ನೀಡುತ್ತಿಲ್ಲ.

ಹೊಲದಲ್ಲಿ ಅವರೆ ಹೂ ದೀಪ ಬೆಳಗಿದಂತಿತ್ತು. ಒಳ್ಳೆ ಫಸಲಿನ ನಿರೀಕ್ಷೆಯಲ್ಲಿದ್ದೆ. ಆದರೆ ಮೋಡ ಮುಸುಕಿದ ವಾತಾವರಣ ಹೂವನ್ನು ಹೊಸಕಿ ಹಾಕುತ್ತಿದೆ’ ಎಂದು ರೈತ ವೆಂಕಟರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೋಡ ಮುಸುಕಿದ ವಾತಾವರಣದಿಂದಾಗಿ ಮಾವಿನ ಮರಗಳಿಗೆ ಔಷಧ ಸಿಂಪಡಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಹೂ ಬರುವುದು ತಡವಾಗುತ್ತದೆ ಹಾಗೂ ಬಂದಿರುವ ಹೂ ರೋಗ ಪೀಡಿತವಾಗುತ್ತದೆ’ ಎಂಬುದು ಮಾವು ಬೆಳೆಗಾರ ನಾರಾಯಣಸ್ವಾಮಿ ಅವರ ಅಳಲು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು