ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ, ಸೈನಿಕ, ನ್ಯಾಯಾಂಗ ದೇಶಕ್ಕೆ ರಕ್ಷಾ ಕವಚ

ನ್ಯಾಯಾಲಯದ ಕಟ್ಟಡ, ವಸತಿ ಗೃಹ ಶಂಕುಸ್ಥಾಪನೆ
Last Updated 3 ಅಕ್ಟೋಬರ್ 2022, 5:26 IST
ಅಕ್ಷರ ಗಾತ್ರ

ಶ್ರೀನಿವಾಸಪುರ:ಪಟ್ಟಣದ ಹೊರವಲಯದ ಕಲ್ಲೂರು ಗ್ರಾಮದ ಸಮೀಪ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ತಾಲ್ಲೂಕು ವಕೀಲರ ಸಂಘದ ವತಿಯಿಂದ ಶನಿವಾರ ನೂತನ ನ್ಯಾಯಾಲಯ ಕಟ್ಟಡ ಮತ್ತು ವಸತಿ ಗೃಹಗಳ ನಿರ್ಮಾಣ ಶಂಕುಸ್ಥಾಪನಾ ಸಮಾರಂಭ ನಡೆಯಿತು.

ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಮಾತನಾಡಿ, ‘ವಕೀಲರು ಅಧ್ಯಯನಶೀಲರಾಗಬೇಕು. ನ್ಯಾಯಾಲಯಕ್ಕೆ ಬರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಕೀಲರು ನ್ಯಾಯ ಕೊಡಿಸಲು ಧೈರ್ಯ ಪ್ರದರ್ಶಿಸಬೇಕು’ ಎಂದು ಕಿವಿಮಾತು ಹೇಳಿದರು.

ದೇಶ ರೈತ, ಸೈನಿಕ ಹಾಗೂ ನ್ಯಾಯಾಂಗದ ಮೇಲೆ ನಿಂತಿದೆ. ಆದರೆ ದೇಶಕ್ಕೆ ಅನ್ನ ನೀಡುವ ರೈತನ ಬೆನ್ನು ಮೂಳೆ ಮುರಿಯಲಾಗಿದೆ. ಬೆಳೆಗೆ ತಗಲುವ ರೋಗ ರುಜಿನ ಹಾಗೂ ಬೆಳೆದ ಉತ್ಪನ್ನಕ್ಕೆ ಬೆಲೆ ಸಿಗದೆ ರೈತ ನಷ್ಟ ಅನುಭವಿಸುತ್ತಿದ್ದಾನೆ. ರೈತರ ಮಕ್ಕಳು ಕೃಷಿಗೆ ಬೆನ್ನು ತೋರಿಸಿ ಕೆಲಸ ಅರಸಿ ನಗರಗಳ ಕಡೆ ಮುಖ ಮಾಡಿದ್ದಾರೆ. ಇದು ದುರಂತದ ಸಂಗತಿ ಎಂದು ಹೇಳಿದರು.

ನ್ಯಾಯಾಂಗದಲ್ಲಿ ವಕೀಲರ ಪಾತ್ರ ಹಿರಿದು. ಕಕ್ಷಿದಾರರ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಿದಾಗ ನ್ಯಾಯಾಂಗ ವ್ಯವಸ್ಥೆ ಮೇಲೆ ವಿಶ್ವಾಸ ಹೆಚ್ಚುತ್ತದೆ. ಇದನ್ನು ವಕೀಲರು ಮರೆಯಬಾರದು. ಪ್ರಕರಣಗಳನ್ನು ಕಾಲ ಮಿತಿಯಲ್ಲಿ ಇತ್ಯರ್ಥಪಡಿಸಲು ಪ್ರಯತ್ನಿಸಬೇಕು.ಇಲ್ಲದಿದ್ದರೆ, ನ್ಯಾಯಾಂಗದ ಮೇಲಿನವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

‘ನಾನೂ ಸಹ ಬಡ ರೈತನ ಮಗನಾಗಿದ್ದು, ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಈ ಹಂತ ತಲುಪಿದ್ದೇನೆ. ತಾಲ್ಲೂಕಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ 10 ಎಕರೆ ಜಮೀನು ಮಂಜೂರು ಮಾಡಿಸಿದ್ದೇನೆ. ಈಗ ನೂತನ ಕಟ್ಟಡ ನಿಮಾರ್ಣ ಕಾರ್ಯಕ್ಕೆ ಚಾಲನೆ ದೊರೆತಿದೆ. ಇದಕ್ಕೆ ಸ್ಥಳೀಯ ಶಾಸಕಹಾಗೂ ಸ್ಥಳೀಯ ವಕೀಲರ ಸಂಘದ ಪ್ರಯತ್ನವೂ ಇದೆ’ ಎಂದು ಹೇಳಿದರು.

ರಾಜ್ಯ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಅಲೋಕ್ ಅರಾಧೆ, ನ್ಯಾಯಮೂರ್ತಿ ಸಂಜಯ್ ಗೌಡ, ಜಿಲ್ಲಾ ನ್ಯಾಯಾಧೀಶ ಸುನಿಲ್ ಯಾದವ್, ಭಾರತೀಯ ಬಾರ್ ಕೌನ್ಸಿಲ್ ಉಪಾಧ್ಯಕ್ಷ ಸದಾಶಿವರೆಡ್ಡಿ ಮಾತನಾಡಿದರು.

ಸ್ಥಳೀಯ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಡಿ.ಕೆ.ಮನು,ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಚ್.ಆರ್.ಸಚಿನ್, ಹಿರಿಯ ಶ್ರೇಣಿ ನ್ಯಾಯಾಧೀಶ ರಂಗೇಗೌಡ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ರೂಪ, ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್, ತಹಶೀಲ್ದಾರ್ ಶಿರಿನ್ ತಾಜ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಕೆ.ಹುಸೇನ್ ಸಾಬ್, ಪುರಸಭೆ ಮುಖ್ಯಾಧಿಕಾರಿ ಎಂ.ಜಯರಾಮ್, ವಕೀಲರಾದ ಟಿ.ವೆಂಕಟೇಶ್, ರಾಜಗೋಪಾಲರೆಡ್ಡಿ, ಅರ್ಜುನ್, ಶ್ರೀನಿವಾಸಗೌಡ, ಎಂ.ವಿ.ಜಯರಾಮೇಗೌಡ, ಅಭಿನಂದನ್ ಹಾಗೂ ದಿಂಬಾಲ ಅಶೋಕ್, ಅಶೋಕ ಮ್ಯಾಕಲ ಇದ್ದರು.

ಪ್ರಜಾತಂತ್ರ ಉಳಿವಿಗೆ ಸಂವಿಧಾನ ಪೂರಕ

ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ‘ನಾವು ಸಂವಿಧಾನದ ಅಡಿ ಜೀವಿಸುತ್ತಿದ್ದೇವೆ. ಡಾ. ಬಿ.ಆರ್.ಅಂಬೇಡ್ಕರ್ ಪ್ರಜಾತಂತ್ರ ಉಳಿವಿಗೆ ಪೂರಕವಾಗಿ ಒಳ್ಳೆಯ ಸಂವಿಧಾನ ನೀಡಿದ್ದಾರೆ. ಇದೊಂದು ಮಾದರಿ ಸಂವಿಧಾನ’ ಎಂದು ಪ್ರತಿಪಾದಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗಕ್ಕೆ ಹೆಚ್ಚು ಗೌರವವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT