ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಗೆ ಮಣೆ ಹಾಕಿದ ರೈತ: 12 ನಾಟಿ ಹಸು ಸಾಕಣೆ

Last Updated 10 ಡಿಸೆಂಬರ್ 2021, 1:47 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಗುಂಡಮನತ್ತ ಗ್ರಾಮದ ಗೇಟ್ ಸಮೀಪ ಪ್ರಗತಿಪರ ರೈತರೊಬ್ಬರು ಕೃಷಿ ಉದ್ದೇಶಕ್ಕಾಗಿ ನಾಟಿ ಹಸು ಪಾಲನೆ ಮಾಡುತ್ತಿದ್ದಾರೆ. ತೋಟದ ಒಂದು ಭಾಗದಲ್ಲಿ ಹಸು ಸಾಕಾಣಿಕೆಗಾಗಿ ನಿರ್ಮಿಸಲಾಗಿರುವ ಮಾದರಿ ಕೊಟ್ಟಿಗೆ ರೈತರ ಗಮನ ಸೆಳೆದಿದೆ.

ಮೂಲತಃ ಕೃಷಿಕ ಕುಟುಂಬಕ್ಕೆ ಸೇರಿದ ಜಿ. ಗೋವಿಂದಗೌಡ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಡಿಪೊ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಮೇಲೆ ಸಾವಯವ ಕೃಷಿಗೆ ಒತ್ತು ನೀಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ನಾಟಿ ಹಸುವಿನ ಉತ್ಕೃಷ್ಟ ಗೊಬ್ಬರ ಹಾಗೂ ಗಂಜಳ ಒದಗಿಸುವ ಉದ್ದೇಶದಿಂದ ನಾಟಿ ಗೋವು ಪಾಲನೆ ಮಾಡುತ್ತಿದ್ದಾರೆ. ಗೋಮೂತ್ರ ವ್ಯರ್ಥವಾಗದಂತೆ ಸಂಗ್ರಹಿಸಲು ತೊಟ್ಟಿ ನಿರ್ಮಿಸಿದ್ದಾರೆ.‌

ಸಗಣಿ, ಗಂಜಳ, ಬೆಲ್ಲ ಹಾಗೂ ಕಡಲೆ ಹಿಟ್ಟು ಸೇರಿಸಿ ಜೀವಾಮೃತ ಉತ್ಪಾದಿಸಲು ಅಗತ್ಯವಾದ ವ್ಯವಸ್ಥೆ ಮಾಡಿದ್ದಾರೆ. ಆಧುನಿಕ ಕೃಷಿ ಪದ್ಧತಿಯಲ್ಲಿ ಜೀವಾಮೃತ ತನ್ನದೆ ಆದ ಸ್ಥಾನ ಪಡೆದಿದೆ. ಕೆಲವು ಸಾವಯವ ಕೃಷಿಕರು ಬೆಳೆಗಳಿಗೆ ಜೀವಾಮೃತ ಉಣಿಸಿ ಉತ್ತಮ ಫಸಲು ತೆಗೆಯುತ್ತಿದ್ದಾರೆ.

‘ರಾಸಾಯನಿಕ ಗೊಬ್ಬರ, ಕೀಟ ಹಾಗೂ ಕಳೆನಾಶಕಗಳ ಅತಿಯಾದ ಬಳಕೆಯಿಂದ ಭೂಮಿಯ ಆರೋಗ್ಯ ಕೆಟ್ಟಿದೆ. ಅಂಥ ಭೂಮಿಯಲ್ಲಿ ಬೆಳೆಯಲಾಗುವ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳ ಸೇವನೆಯಿಂದ ಮನುಷ್ಯನ ಆರೋಗ್ಯ ಕೆಡುತ್ತಿದೆ. ನಾಟಿ ಗೋವಿನ ಸಗಣಿ ಹಾಗೂ ಗಂಜಳ ಭೂಮಿಗೆ ಮರುಜೀವ ಕೊಡುತ್ತದೆ. ಗಂಜಳಕ್ಕೆ ಬೇವಿನ ಸೊಪ್ಪು ಸೇರಿಸಿ ಕೀಟನಾಶಕವಾಗಿ ಬಳಸಬಹುದಾಗಿದೆ. ಹಾಗಾಗಿ, ಮತ್ತೆ ಸಾಂಪ್ರದಾಯಿಕ ಕೃಷಿಗೆ ಹಿಂದಿರುಗಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶೇಷವಾಗಿ ನಿರ್ಮಿಸಿರುವ ಕೊಟ್ಟಿಗೆಯಲ್ಲಿ ಸದ್ಯ 12 ನಾಟಿ ಹಸುಗಳಿವೆ. ಒಂದು ಗೂಳಿ ಹಾಗೂ ಒಂದು ಕರು ಇದೆ. ಇಲ್ಲಿನ ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಿಸುವುದಿಲ್ಲ. ಸಹಜ ಗರ್ಭಧಾರಣೆಗೆ ಪೂರಕವಾಗಿ ಹೋರಿಯೊಂದನ್ನು ಸಾಕಲಾಗಿದೆ. ಹಸುಗಳಲ್ಲಿ ಜನಿಸುವ ಗಂಡು ಕರುಗಳು ಹಾಲು ಬಿಟ್ಟ ಮೇಲೆ ಅಗತ್ಯ ಇರುವ ರೈತರಿಗೆ ಸಾಕಲು ಉಚಿತವಾಗಿ ನೀಡಲಾಗುತ್ತಿದೆ. ಹೆಣ್ಣು ಕರುಗಳನ್ನು ಉಳಿಸಿಕೊಳ್ಳಲಾಗುತ್ತಿದೆ.

‘ಇನ್ನಷ್ಟು ನಾಟಿ ಹಸುಗಳನ್ನು ಖರೀದಿಸಿ ನಾಟಿ ಹಸುವಿನ ಡೇರಿ ತೆರೆಯುವ ಉದ್ದೇಶ ಇದೆ. ಗೋಮೂತ್ರವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಮನುಷ್ಯರ ಆರೋಗ್ಯ ರಕ್ಷಣೆಗೆ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ನಾಟಿ ಹಸುವಿನ ಮೈದಡವಿದರೂ ಆರೋಗ್ಯ ವೃದ್ಧಿಯಾಗುತ್ತದೆ. ಹಾಲು ಎಲ್ಲಾ ವಯೋಮಾನದ ವ್ಯಕ್ತಿಗಳ ಆರೋಗ್ಯ ರಕ್ಷಣೆ ಮಾಡುತ್ತದೆ’ ಎಂದು ಹೇಳಿದರು.

ಗೌಡರು ತಾವು ನಾಟಿ ಹಸು ಸಾಕುವುದಲ್ಲದೆ, ಇತರ ರೈತರೂ ಸಾಕುವಂತೆ ಪ್ರೇರೇಪಿಸುತ್ತಿದ್ದಾರೆ. ರೈತರಿಗೆ ಸಾವಯವ ಕೃಷಿ ಪದ್ಧತಿ ಅನುಸರಿಸಬೇಕಾದ ಅಗತ್ಯ ಕುರಿತು ತಿಳಿಸುತ್ತಿದ್ದಾರೆ. ಮಾದರಿಯಾಗಿ ಸಾವಯವ ಕೃಷಿಗೆ ಮಣೆ
ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT