ಮಂಗಳವಾರ, ನವೆಂಬರ್ 19, 2019
22 °C
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ

ಸುಸ್ತಿ ಸಾಲ ವಸೂಲಿ ಮಾಡದಿದ್ದರೆ ಕ್ರಮ

Published:
Updated:
Prajavani

ಕೋಲಾರ: ‘15 ದಿನದೊಳಗೆ ಸುಸ್ತಿ ಸಾಲ ವಸೂಲಾತಿಯಲ್ಲಿ ಪ್ರಗತಿ ಕಾಣದಿದ್ದರೆ ಅಧಿಕಾರಿಗಳ ಮತ್ತು ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ನಡೆದ ಡಿಸಿಸಿ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಬಡವರ ಬ್ಯಾಂಕಾಗಿಸಲು ಸಿಬ್ಬಂದಿಯಲ್ಲಿ ಇಚ್ಚಾಶಕ್ತಿ ಕೊರತೆ ಕಾಣುತ್ತಿದೆ. ನಿರೀಕ್ಷೆಗೂ ಮೀರಿ ಕೆಲಸ ಮಾಡದಿದ್ದರೆ ಕ್ರಮ ಜರುಗಿಸುವುದು ಅನಿವಾರ್ಯ’ ಎಂದರು.

‘ಕೋಲಾರ ₨ 75ಲಕ್ಷ, ಮುಳಬಾಗಿಲು ₨ 47 ಲಕ್ಷ, ಮಾಲೂರು ₨ 55 ಲಕ್ಷ, ಕೆಜಿಎಪ್ ₨ 17 ಲಕ್ಷ ಉಳಿಸಿಕೊಂಡಿದ್ದೀರಿ. ಇದು ಮುಂದುವರೆದರೆ ಬ್ಯಾಂಕಿನ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ₨ 3.70 ಕೋಟಿ ಎನ್‌ಪಿಎ ಆದರೆ ಇದಕ್ಕೆ ನೀವೆ ಹೊಣೆಗಾರರಾಗುತ್ತೀರಿ’ ಎಂದು ಎಚ್ಚರಿಸಿದರು.

‘ಅಯಾ ತಾಲ್ಲೂಕಿನಲ್ಲಿ ಸಾಲ ವಸೂಲಾತಿಗೆ ನಿರ್ದೇಶಕರು ಬರುತ್ತಾರೆ, ಕೆಜಿಎಫ್‌ ತಾಲ್ಲೂಕಿನ ಸುಂದರಪಾಳ್ಯ ಸೊಸೈಟಿ ಆಡೀಟ್ ಮಾಡಿಸಿ, ₨ 17 ಲಕ್ಷ ವಾಪಸ್ಸು ಕಟ್ಟಿಸಿಕೊಳ್ಳಿ’ ಎಂದು ತಾಕೀತು ಮಾಡಿದರು.

‘ಹುದುಕುಳದಲ್ಲಿ ಸಾಲ ಮನ್ನಾ ಹಣ ರೈತರಿಗೆ ತಲುಪದೆ ಇರುವ ಬಗ್ಗೆ ದೂರು ಬಂದಿದೆ, ಕಾರ್ಯದರ್ಶಿ ಮೇಲೆ ಕ್ರಮ ಕೈಗೊಳ್ಳಬೇಕು. ಮೊದಲು ರೈತರಿಗೆ ಹಣ ತಲುಪಿಸುವ ಕೆಲಸ ಮಾಬೇಕು. 200 ಸೊಸೈಟಿಗಳು ಬ್ಯಾಂಕಿನಡಿ ಕೆಲಸ ಮಾಡುತ್ತಿವೆ. ಒಂದರಲ್ಲಿ ಸಮಸ್ಯೆಯಾದರೂ ಬ್ಯಾಂಕಿಗೆ ಕೆಟ್ಟ ಹೆಸರು ಬರುತ್ತದೆ’ ಎಂದು ಹೇಳಿದರು.

‘ಶ್ರೀನಿವಾಸಪುರದಲ್ಲಿ ₨ 37 ಲಕ್ಷ ಬಾಕಿ ಇದೆ. ಹೆಣ್ಣು ಮಕ್ಕಳು ಬ್ಯಾಂಕಿಗೆ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಿದ್ದಾರೆ, ಕೆಲ ಕಡೆ ಮಧ್ಯವರ್ತಿಗಳು ದಾರಿ ತಪ್ಪಿಸಿದ್ದು, ಅಂತಹ ಪ್ರಕರಣಗಳಲ್ಲಿ ಮುಲಾಜಿಲ್ಲದೇ ದೂರು ದಾಖಲಿಸಿ’ ಎಂದು ಸೂಚಿಸಿದರು.

ಸೆ.17 ನಬಾರ್ಡ್ ಸಿಜಿಎಂ ಭೇಟಿ: ‘ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕ ಪಿ.ವಿ.ಎಸ್.ಸೂರ್ಯಕುಮಾರ್ ತಂಡಡೆ ಬ್ಯಾಂಕಿಗೆ ಆಗಮಿಸುತ್ತಿದ್ದು, ಚಿನ್ನಾಪುರದಲ್ಲಿ ಸ್ತ್ರೀಶಕ್ತಿ ಸಂಘದವರು ನಡೆಸುವ ಆರ್ಥಿಕ ಚಟುವಟಿಕೆಗಳ ಕುರಿತು ಗಮನಕ್ಕೆ ತರಲಾಗುವುದು, ಯಾವುದೇ ಲೋಪ ಎದುರಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು’ ಎಂದು ಸಲಹೆ ನೀಡಿದರು.

‘ನೆರೆ ಸಂತ್ರಸ್ಥರ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₨ 25 ಲಕ್ಷ ಬ್ಯಾಂಕ್ ವತಿಯಿಂದ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಒಂದು ದಿನದ ಸಂಬಳ ₨ 2 ಲಕ್ಷ ಹಾಗೂ ಉಳಿದಂತೆ ಸೊಸೈಟಿ, ಬ್ಯಾಂಕ್ ವತಿಯಿಂದ ಪರಿಹಾರದ ಹಣವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಒಪ್ಪಿಗೆ ನೀಡಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ಎ.ನಾಗರಾಜ್, ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್, ಸೋಮಣ್ಣ, ನರಸಿಂಹರೆಡ್ಡಿ, ಕೆ.ವಿ.ದಯಾನಂದ್, ಸೊಣ್ಣೇಗೌಡ, ಚೆನ್ನರಾಯಪ್ಪ, ನಾರಾಯಣರೆಡ್ಡಿ, ಮೋಹನ್ ರೆಡ್ಡಿ, ದ್ಯಾವಪ್ಪ, ವೆಂಕಟಶಿವಾರೆಡ್ಡಿ, ನಾಗಿರೆಡ್ಡಿ, ಗೋವಿಂದರಾಜ್, ವ್ಯವಸ್ಥಾಪಕ ನಿರ್ದೇಶಕ ರವಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)