ಗುರುವಾರ , ಫೆಬ್ರವರಿ 20, 2020
26 °C

ಬಲಿಷ್ಠ ದೇಶ ನಿರ್ಮಾಣಕ್ಕೆ ಮುಂದಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಪೋಷಕರು ಐದುವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಬಲಿಷ್ಠ ದೇಶ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ತಹಶೀಲ್ದಾರ್ ಶೋಭಿತಾ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿನ ಗಾಂಧಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಹಿಂದೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯನ್ನು ಪೋಲಿಯೊ ಮುಕ್ತ ಜಿಲ್ಲೆ ಎಂದು ಗುರುತಿಸಲಾಯಿತು. ಇದನ್ನು ಮಾದರಿಯಾಗಿಸಿಕೊಂಡು ಕೇಂದ್ರ ಸರ್ಕಾರವು ದೇಶದಲ್ಲೆ ಪೋಲಿಯೊ ಕಾರ್ಯಕ್ರಮವನ್ನು ೧೯೯೫ ರಿಂದ ಜಾರಿಗೆ ತಂದಿತು’ ಎಂದರು.

‘ಭಾರತ ದೇಶವು ‘ಪೋಲಿಯೊ ಮುಕ್ತ ರಾಷ್ಟ್ರ’ ಎಂದು ಪ್ರಮಾಣಪತ್ರ ಪಡೆದಿದ್ದರೂ ಸಹ ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಪೋಲಿಯೊ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಅಕ್ಕಪಕ್ಕದ ಪಾಕಿಸ್ತಾನ, ಆಫ್ಘಾನಿಸ್ತಾನ ದೇಶಗಳಲ್ಲಿ ಪೋಲಿಯೊ ಪ್ರಕರಣಗಳು ಕಂಡು ಬಂದಿದ್ದು ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಯುವ ಉದ್ದೇಶದಿಂದ ಪ್ರಯತ್ನ ನಡೆಯುತ್ತಿದೆ’ಎ ಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರತ್ನಯ್ಯ ಮಾತನಾಡಿ, ‘ಕುಟುಂಬದವರ ಆರೋಗ್ಯ ಮತ್ತು ಆರೈಕೆ ಹೆಚ್ಚಾಗಿ ತಾಯಂದಿರ ಮೇಲೆ ಇರುತ್ತದೆ. ಆರೋಗ್ಯ ಪೂರ್ಣ ಸಮಾಜವು ನಿರ್ಮಾಣವಾಗ ಬೇಕಾದರೆ ಸರ್ಕಾರದ ಪಾತ್ರ ಪ್ರಮುಖವಾಗಿರುತ್ತದೆ’ ಎಂದು ತಿಳಿಸಿದರು.

ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನಾರಾಯಣಸ್ವಾಮಿ ಮಾತನಾಡಿ, ‘ಜಿಲ್ಲೆಯಲ್ಲಿ ಪಲ್ಸ್ ಪೋಲಿಯೊ ಅಭಿಯಾನದಡಿ ೧,೫೬,೧೫೫ ಮಕ್ಕಳಿಗೆ ೭೪೮ ಬೂತ್‌ಗಳಲ್ಲಿ, ೪೩ ಟ್ರಾನ್ಸಿಟ್ ಕೇಂದ್ರಗಳಲ್ಲಿ, ೧ ಮೊಬೈಲ್ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಮೊದಲನೆ ದಿನ ಬೂತ್‌ನಲ್ಲಿ ಮಕ್ಕಳಿಗೆ ಹನಿ ಹಾಕಿಸಲು ಅವಕಾಶ ನೀಡಲಾಗಿದೆ. 2ನೇ ದಿನ ಮನೆ ಮನೆ ಭೇಟಿ ನೀಡಿ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸುವ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಲಸಿಕಾ ಅಭಿಯಾನದ ನೋಡಲ್ ಅಧಿಕಾರಿ ಡಾ.ಚಂದ್ರಕಲಾ, ಮಹಿಳಾ ಮತ್ತು ಕುಟುಂಬ ಯೋಜನಾಧಿಕಾರಿ ಅಧಿಕಾರಿ ಡಾ.ಚಂದನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ, ವೈದ್ಯಾಧಿಕಾರಿ ಡಾ.ಫಿರ್‌ದೋಜ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು