ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಭಾಗ್ಯವಿಲ್ಲ

ಮೂಲಸೌಕರ್ಯ ಮರೀಚಿಕೆ: ಜೀವ ಭಯದ ನಡುವೆ ಕಂದಮ್ಮಗಳ ಆಟ ಪಾಠ
Last Updated 21 ಫೆಬ್ರುವರಿ 2021, 14:38 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಬಹುಪಾಲು ಅಂಗನವಾಡಿ ಕೇಂದ್ರಗಳಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದ್ದು, 431 ಅಂಗನವಾಡಿಗಳಿಗೆ ಸರ್ಕಾರ ಸ್ವಂತ ಕಟ್ಟಡ ಭಾಗ್ಯ ಕರುಣಿಸಿಲ್ಲ.

ಸಾಕಷ್ಟು ಕಡೆ ಹಳೆಯ ಶಿಥಿಲ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಲ್ಲಿ ಜೀವ ಭಯದ ನಡುವೆ ಕಂದಮ್ಮಗಳ ಆಟ ಪಾಠ ಸಾಗಿದೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್‌, ಕಲಿಕೋಪಕರಣ ಕೊರತೆ ಹೀಗೆ ಪಟ್ಟಿ ಮಾಡಿದರೆ ಅಂಗನವಾಡಿ ಕೇಂದ್ರಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ನಗರ ಪ್ರದೇಶದ ಅಂಗನವಾಡಿಗಳ ಪರಿಸ್ಥಿತಿ ಗ್ರಾಮೀಣ ಭಾಗಕ್ಕಿಂತ ಭಿನ್ನವಾಗಿಲ್ಲ.

ಜಿಲ್ಲೆಯಲ್ಲಿ ಒಟ್ಟಾರೆ 2,080 ಅಂಗನವಾಡಿ ಕೇಂದ್ರಗಳಿದ್ದು, 89,223 ಮಕ್ಕಳು, 11,184 ಗರ್ಭಿಣಿಯರು ಮತ್ತು 11,721 ಬಾಣಂತಿಯರು ಅಂಗನವಾಡಿ ಫಲಾನುಭವಿಗಳಾಗಿದ್ದಾರೆ. 1,014 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ, 93 ಅಂಗನವಾಡಿಗಳು ಗ್ರಾಮ ಪಂಚಾಯಿತಿ ಕಟ್ಟಡಗಳಲ್ಲಿ, 224 ಅಂಗನವಾಡಿಗಳು ಸಮುದಾಯ ಭವನಗಳಲ್ಲಿ ಮತ್ತು 318 ಅಂಗನವಾಡಿಗಳು ಶಾಲಾ ಕಟ್ಟಡಗಳಲ್ಲಿ ನಡಡೆಯುತ್ತಿವೆ.

ಅಂಗನವಾಡಿ ಸ್ವಂತ ಕಟ್ಟಡಗಳು ನಿರ್ಮಾಣವಾಗಿ ದಶಕಗಳೇ ಕಳೆದಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಹಲವೆಡೆ ಕಟ್ಟಡಗಳ ಮೇಲ್ಛಾವಣಿ ಉದುರುತ್ತಿದ್ದು, ತುಂತುರು ಮಳೆ ಬಂದರೂ ಕಟ್ಟಡಗಳು ಸೋರುತ್ತವೆ. ಗೋಡೆಗಳಿಗೆ ಬಣ್ಣ ಬಳಿದು ವರ್ಷಗಳೇ ಕಳೆದಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಗೆ ತಲುಪಿವೆ. ಸುರಕ್ಷತೆ ಕಾರಣಕ್ಕೆ ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಕುಸಿಯುತ್ತಿದೆ.

ಅಂಗನವಾಡಿಗಳ ಮೇಲ್ವಿಚಾರಣೆಯ ಹೊಣೆ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಭಾಗ್ಯ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿದ್ದಾರೆ. ಸರ್ಕಾರಕ್ಕೆ ಮೇಲಿಂದ ಮೇಲೆ ಪತ್ರ ಬರೆದು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಕೋರುತ್ತಿದ್ದಾರೆ. ಆದರೆ, ಜಿಲ್ಲೆಯ ಬೇಡಿಕೆಗೆ ತಕ್ಕಂತೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡದ ಕಾರಣ ಎಲ್ಲಾ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಕನಸು ನನಸಾಗಿಲ್ಲ.

ಪ್ರತ್ಯೇಕ ಬಾಡಿಗೆ: ಅಧಿಕಾರಿಗಳು ಅನಿವಾರ್ಯವಾಗಿ ಖಾಸಗಿ ಕಟ್ಟಡಗಳನ್ನು ಬಾಡಿಗೆಗೆ ಪಡೆದು ಅಂಗನವಾಡಿ ನಡೆಸುತ್ತಿದ್ದಾರೆ. ನಗರ ಮತ್ತು ಗ್ರಾಮೀಣ ಭಾಗಕ್ಕೆ ಸರ್ಕಾರ ಪ್ರತ್ಯೇಕ ಬಾಡಿಗೆ ದರ ನಿಗದಿಪಡಿಸಿದ್ದು, ಇಲಾಖೆ ಅನುದಾನ ಬಾಡಿಗೆ ರೂಪದಲ್ಲಿ ಖಾಸಗಿ ಕಟ್ಟಡ ಮಾಲೀಕರ ಜೇಬು ಸೇರುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ₹ 1 ಸಾವಿರ ಮತ್ತು ನಗರ ಪ್ರದೇಶದಲ್ಲಿ ₹ 4 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ. ವಿದ್ಯುತ್‌, ಕುಡಿಯುವ ನೀರಿನ ಸೌಲಭ್ಯ, ಸ್ವಚ್ಛತಾ ಕಾರ್ಯದ ನಿರ್ವಹಣೆಗೆ ಇಲಾಖೆಯು ಪ್ರತ್ಯೇಕ ಹಣ ಕೊಡುವುದಿಲ್ಲ.

ಬಯಲು ಬಹಿರ್ದೆಸೆ: ಅಂಗನವಾಡಿ ಕೇಂದ್ರಕ್ಕೆ ಬಾಡಿಗೆಗೆ ಪಡೆಯುವ ಕಟ್ಟಡಗಳಲ್ಲಿ ಕಡ್ಡಾಯವಾಗಿ ಶೌಚಾಲಯ, ನೀರು ಮತ್ತು ವಿದ್ಯುತ್‌ ಸೌಲಭ್ಯ ಇರಬೇಕೆಂಬ ನಿಯಮವಿದೆ. ಆದರೆ, ಸಾಕಷ್ಟು ಬಾಡಿಗೆ ಕಟ್ಟಡಗಳಲ್ಲಿ ಈ ಸೌಕರ್ಯಗಳಿಲ್ಲ. ಗ್ರಾಮೀಣ ಭಾಗದ 440 ಮತ್ತು ನಗರ ಪ್ರದೇಶದ 128 ಕೇಂದ್ರಗಳಲ್ಲಿ ಶೌಚಾಲಯಗಳಿಲ್ಲ. ಕೆಲವೆಡೆ ಶೌಚಾಲಯವಿದ್ದರೂ ನೀರಿನ ಸೌಕರ್ಯವಿಲ್ಲ.

ಶೌಚಾಲಯ ಮತ್ತು ನೀರಿನ ಸಮಸ್ಯೆಯ ಕಾರಣಕ್ಕೆ ಮಕ್ಕಳು ಅಂಗನವಾಡಿಗಳ ಸಮೀಪದ ಬಯಲಲ್ಲೇ ಬಹಿರ್ದೆಸೆಗೆ ಹೋಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಸ್ವಂತ ಹಣದಲ್ಲಿ ಟ್ಯಾಂಕರ್‌ ನೀರು ಖರೀದಿಸಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.

ಕೇಂದ್ರದ ಸಿಬ್ಬಂದಿ ತೊಟ್ಟಿ ಮತ್ತು ಡ್ರಮ್‌ಗಳಲ್ಲಿ ನೀರು ಶೇಖರಿಸಿಟ್ಟುಕೊಂಡು ಅಡುಗೆ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ ಹಾಗೂ ಮಕ್ಕಳಿಗೆ ಕುಡಿಯಲು ಕೊಡುತ್ತಿದ್ದಾರೆ. ನೀರಿನ ಜತೆ ಧೂಳು ಮತ್ತು ಕಸ ಸೇರಿ ಕಲುಷಿತವಾಗುತ್ತಿದೆ. ಬಯಲು ಬಹಿರ್ದೆಸೆ ಮತ್ತು ಕಲುಷಿತ ನೀರಿನ ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ.

ಕಿರಿದಾದ ಕಟ್ಟಡ: ಸಾಕಷ್ಟು ಅಂಗನವಾಡಿ ಕಟ್ಟಡಗಳು ತುಂಬಾ ಕಿರಿದಾಗಿದ್ದು, ಈ ಜಾಗದಲ್ಲೇ ಮಕ್ಕಳ ಆಟ, ಪಾಠ, ನಿದ್ದೆ, ಅಡುಗೆ ಸಿದ್ಧತೆ ಎಲ್ಲಾ ಚಟುವಟಿಕೆಗಳು ನಡೆಯುತ್ತಿದೆ. ಜತೆಗೆ ಆಹಾರ ಪದಾರ್ಥಗಳನ್ನು ಕೇಂದ್ರದ ಚಿಕ್ಕ ಕೊಠಡಿಯಲ್ಲೇ ದಾಸ್ತಾನು ಮಾಡಲಾಗಿದೆ. ಇಲಾಖೆಯಿಂದ ಕೇಂದ್ರಕ್ಕೆ ಕೊಟ್ಟಿರುವ ಆಟಿಕೆಗಳನ್ನು ಸ್ಥಳಾವಕಾಶದ ಕೊರತೆಯಿಂದಾಗಿ ಮಕ್ಕಳಿಗೆ ಆಟವಾಡಲು ಕೊಡದೆ ಅಲ್ಮೇರಾದಲ್ಲಿ ಇಡಲಾಗಿದೆ.

ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಿ ಬಾಡಿಗೆ ಹಣ ಉಳಿಸಲು ಅವಕಾಶವಿದ್ದರೂ ಸರ್ಕಾರ ಆ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ. ವರ್ಷದಲ್ಲಿ ಬೆರಳೆಣಿಕೆ ಅಂಗನವಾಡಿಗಳಿಗೆ ಕಟ್ಟಡ ನಿರ್ಮಿಸಿ ಬಾಡಿಗೆಗಾಗಿ ಜನರ ತೆರಿಗೆ ಹಣ ಪೋಲು ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT