ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಬಂದ್‌: ವಹಿವಾಟು ಸ್ಥಗಿತ

ಸೆಸ್‌ ಏರಿಕೆ ಕ್ರಮಕ್ಕೆ ವಿರೋಧ: ಮಂಡಿ ಮಾಲೀಕರ ಆಕ್ರೋಶ
Last Updated 22 ಡಿಸೆಂಬರ್ 2020, 4:48 IST
ಅಕ್ಷರ ಗಾತ್ರ

ಕೋಲಾರ: ಮಾರುಕಟ್ಟೆ ಮತ್ತು ಬಳಕೆದಾರರ ಶುಲ್ಕ (ಸೆಸ್‌) ಏರಿಕೆ ಕ್ರಮ ಖಂಡಿಸಿ ಜಿಲ್ಲೆಯಾದ್ಯಂತ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎಪಿಎಂಸಿ) ಮಂಡಿ ಮಾಲೀಕರು ಸೋಮವಾರ ವಹಿವಾಟು ಸ್ಥಗಿತಗೊಳಿಸಿ ಮಾರುಕಟ್ಟೆಗಳನ್ನು ಬಂದ್‌ ಮಾಡಿದರು.

ಜಿಲ್ಲಾ ಕೇಂದ್ರದ ಜತೆಗೆ ಶ್ರೀನಿವಾಸಪುರ, ಮುಳಬಾಗಿಲು ತಾಲ್ಲೂಕಿನ ಎನ್.ವಡ್ಡಹಳ್ಳಿ ಮಾರುಕಟ್ಟೆಗಳಲ್ಲೂ ವಹಿವಾಟು ಸ್ಥಗಿತಗೊಳಿಸಲಾಯಿತು. ಜೈ ಕರ್ನಾಟಕ ದಲ್ಲಾಳರ ಸಂಘ, ಜೈ ಭಾರತ್ ವರ್ತಕರ ಸಂಘ, ಜೆ.ಎನ್.ಜೆ ತರಕಾರಿ ಮಂಡಿ ಮಾಲೀಕರ ಸಂಘ, ಹಮಾಲರ ಸಂಘವು ಬಂದ್‌ಗೆ ಬೆಂಬಲ ಸೂಚಿಸಿದವು.

ಸದಾ ವಾಹನಗಳು, ರೈತರು, ವ್ಯಾಪಾರಸ್ಥರು, ಹಮಾಲಿಗಳಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆಯು ಬಂದ್‌ ಕಾರಣಕ್ಕೆ ಬಿಕೋ ಎನ್ನುತ್ತಿತ್ತು. ಬಂದ್ ಹಿನ್ನೆಲೆಯಲ್ಲಿ ರೈತರು ಹಣ್ಣು ಮತ್ತು ತರಕಾರಿಗಳನ್ನು ಸೋಮವಾರ ಎಪಿಎಂಸಿಗೆ ತರಬಾರದೆಂದು ಮಂಡಿ ಮಾಲೀಕರು ಭಾನುವಾರವೇ ಸೂಚನೆ ನೀಡಿದ್ದರು. ಹೀಗಾಗಿ ರೈತರು ಎಪಿಎಂಸಿಗಳತ್ತ ಮುಖ ಮಾಡಲಿಲ್ಲ.

‘ರಾಜ್ಯ ಸರ್ಕಾರ ಸೆಸ್‌ ಪ್ರಮಾಣವನ್ನು 35 ಪೈಸೆಯಿಂದ ₹ 1ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಈ ಆದೇಶ ವಿರೋಧಿಸಿ ವರ್ತಕರು ಮಾರುಕಟ್ಟೆ ಬಂದ್ ಮಾಡಿದರು. ಸರ್ಕಾರ ಸಮಗ್ರ ಚರ್ಚೆ ನಡೆಸದೆ ಏಕಾಏಕಿ ಮಾರುಕಟ್ಟೆ ಶುಲ್ಕ ಏರಿಕೆ ಮಾಡಿರುವುದು ಸರಿಯಲ್ಲ’ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದರು.

‘ಎಪಿಎಂಸಿಗಳ ಹೊರಗಡೆ ವ್ಯಾಪಾರ ಮಾಡಿದರೆ ಯಾವುದೇ ಶುಲ್ಕವಿಲ್ಲ. ಎಪಿಎಂಸಿ ಆವರಣದಲ್ಲಿ ವ್ಯಾಪಾರ ಮಾಡಿದರೆ ಶುಲ್ಕ ಭರಿಸಬೇಕು. ಈ ತಾರತಮ್ಯದಿಂದ ವರ್ತಕರು ಮತ್ತು ರೈತರಿಗೆ ತೀವ್ರ ನಷ್ಟವಾಗುತ್ತದೆ’ ಎಂದು ಅಳಲು ತೋಡಿಕೊಂಡರು.

‘ಬೇರೆ ರಾಜ್ಯಗಳಲ್ಲಿ ಬಳಕೆದಾರರಿಗೆ ಯಾವುದೇ ರೀತಿಯ ಶುಲ್ಕಗಳಿಲ್ಲ. ತರಕಾರಿ ವಹಿವಾಟಿನ ಸಂಬಂಧ ಕಾಲ ಕಾಲಕ್ಕೆ ಎಪಿಎಂಸಿಗೆ ಬಳಕೆದಾರರ ಶುಲ್ಕ ಪಾವತಿಸುತ್ತಿದ್ದೇವೆ. 7 ದಿನದೊಳಗೆ ಸೆಸ್‌ ಇಳಿಕೆ ಮಾಡಬೇಕು. ಇಲ್ಲದಿದ್ದರೆ ಎಪಿಎಂಸಿಗಳಲ್ಲಿ ಅನಿರ್ದಿಷ್ಟಾವಧಿವರೆಗೆ ವಹಿವಾಟು ಸ್ಥಗಿತಗೊಳಿಸಿ ಬಂದ್ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಾಕಷ್ಟು ನಷ್ಟ: ‘ಕೋವಿಡ್–19 ಕಾರಣಕ್ಕೆ ಲಾಕ್‌ಡೌನ್‌ ಜಾರಿಯಾದ ದಿನದಿಂದ ರೈತರ ಹಿತದೃಷ್ಟಿಯಿಂದ ಸವಾಲಿನ ರೀತಿ ವಹಿವಾಟು ನಡೆಸಿಕೊಂಡು ಬಂದಿದ್ದೇವೆ. ಲಾಕ್‌ಡೌನ್‌ ವೇಳೆ ವಹಿವಾಟು ಸರಿಯಾಗಿ ನಡೆಯದೆ ವರ್ತಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ’ ಎಂದು ಜೈ ಕರ್ನಾಟಕ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಎ.ನಾರಾಯಣಸ್ವಾಮಿ ಹೇಳಿದರು.

‘ಕೋವಿಡ್‌ ಆತಂಕದ ನಡುವೆಯೂ ಎಪಿಎಂಸಿಗಳಲ್ಲಿ ಟೊಮೆಟೊ, ಹಣ್ಣು ಮತ್ತು ತರಕಾರಿ ವಹಿವಾಟು ನಡೆಸುತ್ತಿದ್ದೇವೆ. ವಹಿವಾಟಿನ ನಂತರ ವ್ಯಾಪಾರಸ್ಥರಿಂದ ಹಣ ಸರಿಯಾಗಿ ವಸೂಲಿಯಾಗುತ್ತಿಲ್ಲ. ಆದರೂ ಸಾಲ ಮಾಡಿ ರೈತರಿಗೆ ಹಣ ಪಾವತಿಸಿ ಅವರ ಹಿತ ಕಾಪಾಡುತ್ತಿದ್ದೇವೆ. ಇದರ ನಡುವೆ ಸರ್ಕಾರ ಸೆಸ್‌ ಹೆಚ್ಚಿಸಿದೆ. ಇದರಿಂದ ಮಂಡಿ ಮಾಲೀಕರು ದಿವಾಳಿ ಹಂತಕ್ಕೆ ತಲುಪಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಜೈ ಕರ್ನಾಟಕ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಕೆ.ಆರ್.ಬೈಚೇಗೌಡ, ಕಾರ್ಯದರ್ಶಿ ಕೆ.ಎನ್.ಪ್ರಕಾಶ್, ಖಜಾಂಚಿ ಸೈಯದ್, ಮಂಡಿ ಮಾಲೀಕರಾದ ಶ್ರೀನಾಥ್, ಮುನೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT