ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ ಘನತೆ ಪಸರಿಸುವ ರಾಯಭಾರಿಗಳಾಗಿ: ಪ್ರೊ.ನಿರಂಜನ ವಾನಳ್ಳಿ

ವಿದ್ಯಾರ್ಥಿಗಳಿಗೆ ಬೆಂಗಳೂರು ಉತ್ತರ ವಿ.ವಿ ನೂತನ ಕುಲಪತಿ ನಿರಂಜನ ವಾನಳ್ಳಿ ಕಿವಿಮಾತು
Last Updated 3 ಡಿಸೆಂಬರ್ 2021, 13:35 IST
ಅಕ್ಷರ ಗಾತ್ರ

ಕೋಲಾರ: ‘ಉತ್ತಮ ವರ್ತನೆ, ಸಂವಹನ, ನಡವಳಿಕೆಯಿಂದ ಸಾಧಕರಾಗಿ ವಿಶ್ವವಿದ್ಯಾಲಯದ ಘನತೆ ವಿಶ್ವದೆಲ್ಲೆಡೆ ಪಸರಿಸುವ ರಾಯಭಾರಿಗಳಾಗಿ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಗಣಿತಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗಣಿತಶಾಸ್ತ್ರ ವಿಭಾಗವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಜೀವನದಲ್ಲಿ ನಾವು ಬಯಸಲಿ, ಬಯಸದಿರಲಿ ಅನಿರೀಕ್ಷಿತ ತಿರುವುಗಳು ಬಂದೇ ಬರುತ್ತವೆ. ಅವುಗಳನ್ನು ಸ್ವೀಕರಿಸುವುದೇ ನಮ್ಮ ಧ್ಯೇಯವಾಗಬೇಕು. ಇಂದು ಬಹಳ ಬುದ್ಧಿವಂತರಿಗಿಂತ ಬದ್ಧತೆಯಿಂದ ಕೆಲಸ ಮಾಡುವವರಿಗೆ ಹೆಚ್ಚಿನ ಗೌರವವಿದೆ. ಅಂತಹ ಬದ್ಧತೆ ವಿದ್ಯಾರ್ಥಿಗಳಲ್ಲಿ ಬಂದರೆ ಎಲ್ಲೇ ಹೋಗಲಿ ಗೆಲ್ಲುತ್ತೀರಿ’ ಎಂದರು.

‘ಸರ್ಕಾರ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ಇದು ಹೊಸ ವಿ,ವಿಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ನ್ಯಾಯ ಒದಗಿಸಬೇಕಿದೆ. ನೂತನ ಕಟ್ಟಡ, ಮೂಲಸೌಕರ್ಯ, ಹಾಸ್ಟೆಲ್, ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯಗಳು ಅಗತ್ಯವಿದ್ದು, ಎಲ್ಲರ ಸಹಕಾರದಿಂದ ಇವೆಲ್ಲವನ್ನು ಮಾಡಿಸುವ ಆಸೆ ಮತ್ತು ವಿಶ್ವಾಸ ನನ್ನಲ್ಲಿದೆ’ ಎಂದು ಹೇಳಿದರು.

‘ನನ್ನಲ್ಲಿ ಆದ್ಯತೆಗಳಿವೆ. ಹಣ ಮಾಡುವ ಉದ್ದೇಶವಂತೂ ಇಲ್ಲವೇ ಇಲ್ಲ. ಆದ್ದರಿಂದಲೇ ವಿದೇಶದಲ್ಲಿ ಸಿಕ್ಕ ಉನ್ನತ ಅವಕಾಶ ಬಿಟ್ಟು ಬಂದೆ. ಗಣಿತ ಸಂಸ್ಕೃತಿ ಸ್ವೀಕರಿಸಿದವರು ಮಾತ್ರ ಇಲ್ಲಿ ಗೆಲ್ಲಲು ಸಾಧ್ಯ. ಗಣಿತ ಸ್ನಾತಕೋತ್ತರ ಪದವಿ ಮಾಡಿ, ಕೆ-ಸೆಟ್ ಮುಗಿಸಿದರೆ ಉದ್ಯೋಗ ಖಚಿತ. ಗಣಿತ ಎಲ್ಲಾ ನಿಕಾಯಗಳ ಮಾತೃವಿದ್ದಂತೆ. ಗಣಿತ ಕ್ಷೇತ್ರಕ್ಕೆ ಭಾರತ ಅಪಾರ ಕೊಡುಗೆ ನೀಡಿದೆ ಮತ್ತು ಸಾಧಕರನ್ನು ನೀಡಿದೆ. ಸೊನ್ನೆ ನೀಡಿದ್ದು ನಾವೇ’ ಎಂದು ತಿಳಿಸಿದರು.

‘ಗಣಿತ ಕಷ್ಟವಲ್ಲ. ಅದು ಎಲ್ಲಾ ವಿಷಯಗಳಿಗೆ ತಾಯಿಯಿದ್ದಂತೆ. ಸ್ನಾತಕೋತ್ತರ ಪದವಿ ಮುಗಿಸಿ ದೇಶ, ಸಮಾಜಕ್ಕೆ ಆಸ್ತಿಯಾಗಿ. ಕೌಶಲ ಪಡೆದು ಬದುಕು ರೂಪಿಸಿಕೊಳ್ಳಿ’ ಎಂದು ವಿ.ವಿ (ಮೌಲ್ಯಮಾಪನ) ಕುಲಸಚಿವ ಕೆ.ಜನಾರ್ಧನಂ ಸಲಹೆ ನೀಡಿದರು.

ಗಣಿತ ವಿಭಾಗದ ಮುಖ್ಯಸ್ಥೆ ಸಿ.ಎಸ್.ಶ್ರೀಲತಾ, ವಿದ್ಯಾರ್ಥಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT