ಸೋಮವಾರ, ಆಗಸ್ಟ್ 15, 2022
25 °C
ವರದಿ ತಡವಾದರೆ ಸಹಿಸುವುದಿಲ್ಲ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಎಚ್ಚರಿಕೆ

ಲೆಕ್ಕಪರಿಶೋಧನಾ ವರದಿ: ಜುಲೈ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅವಿಭಜಿತ ಜಿಲ್ಲೆಯ ಎಲ್ಲಾ ಪ್ಯಾಕ್ಸ್‌ಗಳ ಗಣಕೀಕರಣ ಆಧಾರಿತ ಲೆಕ್ಕಪರಿಶೋಧನಾ ವರದಿ ಜುಲೈ ಅಂತ್ಯದೊಳಗೆ ಸಿದ್ಧವಿರಬೇಕು. ವರದಿ ತಡವಾದರೆ ಸಹಿಸುವುದಿಲ್ಲ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ವಿ-ಸಾಫ್ಟ್ ಟೆಕ್ಸಾಲಜೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಪ್ಯಾಕ್ಸ್‌ಗಳ ಗಣಕೀಕೃತ ಲೆಕ್ಕಪರಿಶೋಧನೆ ಕುರಿತು ಇಲ್ಲಿ ಬುಧವಾರ ಬ್ಯಾಂಕ್‌ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಹಾಗೂ ವಿ-ಸಾಫ್ಟ್ ಸಂಸ್ಥೆ ಸಿಬ್ಬಂದಿಯೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಕೋಲಾರ ಡಿಸಿಸಿ ಬ್ಯಾಂಕ್ ದೇಶಕ್ಕೆ ಮಾದರಿಯಾಗಿರಬೇಕೆಂಬ ಕಾರಣದಿಂದ ಬ್ಯಾಂಕ್‌ ವ್ಯಾಪ್ತಿಯ ಸೊಸೈಟಿಗಳ ಗಣಕೀಕರಣದೊಂದಿಗೆ ಆನ್‌ಲೈನ್‌ ವಹಿವಾಟಿಗೆ ಒತ್ತು ನೀಡಿದ್ದೆವು. ಆದರೆ, ಸಿಬ್ಬಂದಿ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪಾರದರ್ಶಕತೆ ಹಾಗೂ ಭ್ರಷ್ಟಾಚಾರರಹಿತ ವಹಿವಾಟು ನಡೆಸುವ ಸದುದ್ದೇಶಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಸೊಸೈಟಿಗಳ ಗಣಕೀಕರಣ ಹಾಗೂ ಆನ್‌ಲೈನ್‌ ವಹಿವಾಟಿಗೆ ಕ್ರಮ ಕೈಗೊಂಡಿದ್ದೇವೆ. ಆದರೆ, ಈ ಕಾರ್ಯದ ಹೊಣೆ ಹೊತ್ತಿರುವ ವಿ-ಸಾಫ್ಟ್ ಸಂಸ್ಥೆ ಸಿಬ್ಬಂದಿಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿ–ಸಾಫ್ಟ್‌ ಸಿಬ್ಬಂದಿ, ‘ಲಾಕ್‌ಡೌನ್‌ನಿಂದ ದಾಖಲೀಕರಣ ಕಾರ್ಯ ತಡವಾಗಿದೆ’ ಎಂದರು. ಸಿಬ್ಬಂದಿ ಹೇಳಿಕೆ ಒಪ್ಪದ ಅಧ್ಯಕ್ಷರು, ‘ನೀವು ಕಚೇರಿಯಲ್ಲಿ ಕುಳಿತು ಕೆಲಸ ಮಾಡಲು ಲಾಕ್‌ಡೌನ್‌ ಅಡ್ಡಿಯೇ? ಕುಂಟು ನೆಪ ಹೇಳುವುದನ್ನು ಬಿಟ್ಟು ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.

‘ಮಾರ್ಚ್‌ಗೂ ಮುನ್ನವೇ ಸೊಸೈಟಿಗಳ ಗಣಕೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ ಲೆಕ್ಕಪರಿಶೋಧನಾ ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೆ, ವರದಿ ನೀಡಿಲ್ಲ. ಕೆಲಸ ಮಾಡಲು ಇಷ್ಟವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ವಷ್ಟಪಡಿಸಿ. 8 ಮಂದಿ ಸಿಬ್ಬಂದಿಯಿಂದ ಈ ಕಾರ್ಯ ನಿರ್ವಹಿಸಲು ಮುಗಿಸಲು ಅಸಾಧ್ಯ, ಅನುಭವವುಳ್ಳ ಇನ್ನೂ ನಾಲ್ಕೈದು ಸಿಬ್ಬಂದಿ ನೇಮಿಸಿಕೊಳ್ಳಿ. ಕನಿಷ್ಠ 12 ಪ್ಯಾಕ್ಸ್‌ಗಳಿಗೆ ಒಬ್ಬರು ಸಿಬ್ಬಂದಿ ಇರಬೇಕು’ ಎಂದು ಸಲಹೆ ನೀಡಿದರು.

ಅವಮಾನ: ‘ಹೊಸದಾಗಿ ಕೆಲಸಕ್ಕೆ ತೆಗೆದುಕೊಂಡರೆ ಅವರಿಗೆ ತರಬೇತಿ ನೀಡಬೇಕಾಗುತ್ತದೆ’ ಎಂಬ ವಿ-ಸಾಫ್ಟ್ ಸಂಸ್ಥೆ ಸಿಬ್ಬಂದಿ ಹೇಳಿದರು. ಇದಕ್ಕೆ ಸಿಡಿಮಿಡಿಗೊಂಡ ಅಧ್ಯಕ್ಷರು, ‘ಕೆಲಸ ಮಾಡುವವರನ್ನು ಇಟ್ಟುಕೊಳ್ಳಿ, ಇಲ್ಲವೇ ತೆಗೆದು ಹಾಕಿ. ನೀವು ಉಚಿತವಾಗಿ ಈ ಕೆಲಸ ಮಾಡುತ್ತಿಲ್ಲ. ಗಣಕೀಕೃತ ಲೆಕ್ಕಪರಿಶೋಧನಾ ವರದಿ ಪಡೆಯದಿರುವುದು ಬ್ಯಾಂಕ್‌ಗೆ ದೊಡ್ಡ ಅವಮಾನ’ ಎಂದು ಬೇಸರ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ನಾಗನಾಳ ಸೋಮಣ್ಣ, ಹನುಮಂತರೆಡ್ಡಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಿವಕುಮಾರ್, ಬೈರೇಗೌಡ, ನಾಗೇಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.