ಶುಕ್ರವಾರ, ಜೂನ್ 5, 2020
27 °C

ಜಾಗೃತಿ ಗೀತೆ ಜಾಲತಾಣದಲ್ಲಿ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ ಹೆಸರಾಂತ ಕವಿ ಪನಸಮಾಕನಹಳ್ಳಿಯ ಆರ್.ಚೌಡರೆಡ್ಡಿ ಅವರು ಕೊರೊನಾ ಸೋಂಕು ಕುರಿತು ರಚಿಸಿರುವ ಜಾಗೃತಿ ಗೀತೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ವಾಟ್ಸ್‌ಆ್ಯಪ್‌ ಮೂಲಕ ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡುತ್ತಿರುವ ಈ ವಿಡಿಯೋಗಳು ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಈ ಹಾಡಿನ ಸಾಲುಗಳು ಪಟ್ಟಣ ಪ್ರದೇಶದಲ್ಲಿ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶದ ಜನರ ಬಾಯಲ್ಲೂ ನಲಿದಾಡುತ್ತಿವೆ.

‘ಕಾಣದಂತೆ ಕಾಡುತಿಹುದು ಪಾಪಿ ಕೊರೊನಾ, ಮನೆಯ ಬಿಟ್ಟು ಮಾರು ದೂರ ಹೋಗದಿರೋಣ’ ಎಂದು ಆರಂಭವಾಗುವ ಗೀತೆಯನ್ನು ಶ್ರೀನಿವಾಸಪುರದ ಗಾಯಕಿ ಮಾಯಾ ಬಾಲಚಂದ್ರ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ವೇದಾಂತ್‌ ಶಾಸ್ತ್ರಿ ಅವರು ಗೀತೆಗಳಿಗೆ ತಕ್ಕಂತೆ ಸಾಂದರ್ಭಿಕ ಚಿತ್ರಗಳನ್ನು ಹಾಕಿ ವಿಡಿಯೋ ಸಂಕಲನ ಮಾಡಿದ್ದಾರೆ.

ಇದೇ ಗೀತೆಯನ್ನು ಗಾಯಕ ಅಹನ್ಯ ಜಿ.ಪ್ರಭಾಕರರೆಡ್ಡಿ ಅವರು ಪ್ರತ್ಯೇಕವಾಗಿ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ಈ ಇಬ್ಬರೂ ಗಾಯಕರು ಹಾಡಿರುವ ಗೀತೆಗಳು ಕೊರೊನಾ ಸೋಂಕಿನ ಚಿಂತೆಯಲ್ಲಿ ಮುಳುಗಿರುವ ಜಿಲ್ಲೆಯ ಜನರ ಗಮನ ಸೆಳೆದಿವೆ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಈ ಗೀತೆಗಳನ್ನು ಹಾಡಲಾಗುತ್ತಿದೆ.

‘ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಭಯ ಬಿತ್ತದೆ ಮಧುರ ಗಾಯನದ ಮೂಲಕ ಜಾಗೃತಿ ಉಂಟು ಮಾಡುವುದು ಈ ಗೀತೆಗಳ ವಿಶೇಷ. ಗೀತೆಗಳ ರಚನೆ ಸೊಗಸಾಗಿದೆ. ಪ್ರಾಸವು ಲಯಬದ್ಧವಾಗಿ ಅರ್ಥಪೂರ್ಣವಾಗಿದೆ. ಇಬ್ಬರೂ ಗಾಯಕರು ಚೆನ್ನಾಗಿ ಹಾಗೂ ವಿಭಿನ್ನವಾಗಿ ಹಾಡಿದ್ದಾರೆ’ ಎಂದು ಸಾಹಿತಿ ಟಿ.ಎಸ್‌.ನಾಗರಾಜಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

‘ಚೌಡರೆಡ್ಡಿ ಅವರ ರಚನೆಯ ಗೀತೆಗಳನ್ನು ಬಳಸಿಕೊಂಡು ನಗರದೆಲ್ಲೆಡೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಗೀತೆಗಳು ಸಕಾಲಿಕವಾಗಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ’ ಎಂದು ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು