ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರೀದ್‌: ಗೋವು– ಒಂಟೆ ಸಾಗಣೆ ನಿಷೇಧ

ಸರ್ಕಾರದ ಆದೇಶ ಜಾರಿಗೆ ಜಾಗೃತದಳ ರಚಿಸಿ: ಅಧಿಕಾರಿಗಳಿಗೆ ಡಿ.ಸಿ ಸೂಚನೆ
Last Updated 5 ಆಗಸ್ಟ್ 2019, 15:49 IST
ಅಕ್ಷರ ಗಾತ್ರ

ಕೋಲಾರ: ‘ಗೋವು ಮತ್ತು ಒಂಟೆಗಳ ಅಕ್ರಮ ಸಾಗಣೆಯನ್ನು ಸರ್ಕಾರ ನಿಷೇಧ ಮಾಡಿದ್ದು, ಈ ಆದೇಶದ ಸಮರ್ಪಕ ಜಾರಿಗೆ ಜಾಗೃತದಳ ರಚನೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಬಕ್ರೀದ್‌ ಹಿನ್ನೆಲೆಯಲ್ಲಿ ಇಲ್ಲಿ ಸೋಮವಾರ ನಡೆದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಒಂಟೆ ಮತ್ತು ಹಸುಗಳ ಸಾಗಾಣಿಕೆ ನಿರ್ಬಂಧಿಸಲಾಗಿದೆ. ನಿಯಮಬಾಹಿರವಾಗಿ ಹಸು ಹಾಗೂ ಒಂಟೆ ಸಾಗಿಸುವವರ ವಿರುದ್ಧ ಶಿಸ್ತುಕ್ರಮ ಜರುಗಿಸಿ’ ಎಂದು ಆದೇಶಿಸಿದರು.

‘ವಿಶೇಷವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪಶು ಸಂಗೋಪನಾ ಇಲಾಖೆ, ನಗರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಸರ್ಕಾರದ ಆದೇಶ ಜಾರಿಗೊಳಿಸಬೇಕು. ಅಕ್ರಮವಾಗಿ ಸಾಗಣೆ ಮಾಡುವ ಜಾನುವಾರುಗಳನ್ನು ರಕ್ಷಿಸಿ ಗೋಶಾಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿ’ ಎಂದು ಸೂಚಿಸಿದರು.

‘ಒಂಟೆ ಮತ್ತು ಜಾನುವಾರುಗಳ ಅಕ್ರಮ ಸಾಗಣೆ ಹಾಗೂ ಪ್ರಾಣಿ ವಧೆ ವಿರುದ್ಧ ಪ್ರಕರಣ ದಾಖಲಿಸಿ. ಈ ವಿಚಾರದಲ್ಲಿ ಯಾವುದೇ ಒತ್ತಡಕ್ಕೆ ಮಣಿಯಬೇಡಿ. ಕೆಜಿಎಫ್‌ನಲ್ಲಿ ಮಾತ್ರ ಕಸಾಯಿಖಾನೆಯಿದೆ. ಜಿಲ್ಲೆಯ ಇತರೆ ಭಾಗಗಳಲ್ಲಿ ಕಸಾಯಿಖಾನೆ ಇಲ್ಲದಿದ್ದರೂ ಪ್ರಾಣಿಗಳನ್ನು ಕಡಿಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇದರ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದರು.

ನೋಟಿಸ್ ಜಾರಿ: ‘ಪ್ರಾಣಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ನಿಗದಿತ ಸ್ಥಳದಲ್ಲಿ ಮಾತ್ರ ಪ್ರಾಣಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಈ ಬಗ್ಗೆ ಮಾಂಸ ಮಾರಾಟ ಮಳಿಗೆಗಳ ಮಾಲೀಕರಿಗೆ ನಗರಸಭೆಯಿಂದ ನೋಟಿಸ್ ಜಾರಿ ಮಾಡಿ. ಕೆರೆ ಅಂಗಳಕ್ಕೆ ಹಾಗೂ ಯುಜಿಡಿಗಳಿಗೆ ಪ್ರಾಣಿಗಳ ತ್ಯಾಜ್ಯ ಸುರಿಯಲಾಗುತ್ತಿದೆ. ಇದರಿಂದ ಯುಜಿಡಿಗಳಲ್ಲಿ ಕೊಳಚೆ ನೀರು ಕಟ್ಟಿಕೊಂಡು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಬೇಕು’ ಎಂದು ಹೇಳಿದರು.

‘ಮಾಂಸದಂಗಡಿಗಳ ತ್ಯಾಜ್ಯ ವಿಲೇವಾರಿಗೆ ನಿಗದಿತ ಸ್ಥಳ ಗುರುತಿಸಬೇಕು. ಕಂಡಕಂಡಲ್ಲಿ ಮಾಂಸದ ತ್ಯಾಜ್ಯ ಸುರಿದರೆ ಸಾಂಕ್ರಾಮಿಕ ರೋಗ ಬರುತ್ತವೆ. ಸಕಾಲಕ್ಕೆ ತ್ಯಾಜ್ಯ ವಿಲೇವಾರಿ ಮಾಡುತ್ತಿರಬೇಕು. ಈಗಾಗಲೇ ನಗರದಲ್ಲಿ ಕಸದ ಸಮಸ್ಯೆ ಗಂಭೀರವಾಗಿದೆ’ ಎಂದು ವಿಷಾದಿಸಿದರು.

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಮಧುಸೂದನರೆಡ್ಡಿ, ನಗರಸಭೆ ಆಯುಕ್ತ ಟಿ.ಆರ್‌.ಸತ್ಯನಾರಾಯಣ, ಸಮರ್ಥ ಭಾರತ್ ಟ್ರಸ್ಟ್ ಅಧ್ಯಕ್ಷ ತ್ಯಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT