ಭಾನುವಾರ, ಜುಲೈ 25, 2021
25 °C
ಬಂಗಾರಪೇಟೆ ಎಪಿಎಂಸಿ 3ನೇ ಅವದಿಗೆ ನಡೆದ ಚುನಾವಣೆ

ಕೆಜಿಎಫ್ ಕ್ಷೇತ್ರಕ್ಕೆ ಒಲಿದ ಅದೃಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ಪಟ್ಟಣದ ಎಪಿಎಂಸಿ 3ನೇ ಅವದಿಗೆ ನಡೆದ ಚುನಾವಣೆಯಲ್ಲಿ ಕೆಜಿಎಫ್ ಕ್ಷೇತ್ರದ ವಿಜಯರಾಘವರೆಡ್ಡಿ ಅಧ್ಯಕ್ಷ ಮತ್ತು ಉಮಾದೇವಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಅಧ್ಯಕ್ಷ ಗಾದಿಗೆ ಬಂಗಾರಪೇಟೆ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಎಸ್.ನಾರಾಯಣಗೌಡ, ರಾಜಾರೆಡ್ಡಿ, ಕೆಜಿಎಫ್ ವಿಧಾನಸಭಾ ಕ್ಷೇತ್ರದ ವಿಜಯರಾಘವರೆಡ್ಡಿ ಸ್ಪರ್ಧಿಸಿದ್ದರು.

ಎಪಿಎಂಸಿಯ 16 ಮತಗಳಲ್ಲಿ ಎಸ್.ನಾರಾಯಣಗೌಡ ಮತ್ತು ವಿಜಯರಾಘವರೆಡ್ಡಿ ತಲಾ 6 ಮತ ಪಡೆದರು. ಆ ಕಾರಣದಿಂದಾಗಿ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ರಾಜಾರೆಡ್ಡಿ 4 ಮತ ಗಳಿಸಿ ಪರಾಭವಗೊಂಡರು.

ಎಪಿಎಂಸಿಯಲ್ಲಿ ಬಿಜೆಪಿಯ 3 ನಾಮನಿರ್ದೇಶಿತ ನಿರ್ದೇಶಕರನ್ನು ಒಳಗೊಂಡಂತೆ 9 ಬಿಜೆಪಿ ನಿರ್ದೇಶಕರು, 7 ಕಾಂಗ್ರೆಸ್ ನಿರ್ದೇಶಕರು ಮತ ಚಲಾಯಿಸಿದರು.

ಉಪಾಧ್ಯಕ್ಷ ಗಾದಿಗೆ ಸ್ಪರ್ಧಿಸಿದ್ದ ಕೆಜಿಎಫ್ ಕ್ಷೇತ್ರದ ಉಮಾದೇವಿ ಅವರು (9 ಮತ) ಪ್ರತಿಸ್ಪರ್ಧಿ ರಾಮಚಂದ್ರಪ್ಪ ಅವರ ವಿರುದ್ಧ 2 ಮತ ಅಂತರದಿಂದ ಜಯಗಳಿಸಿದರು.

ಎಪಿಎಂಸಿಯ ಐದು ವರ್ಷದ ಅವಧಿಯಲ್ಲಿ ಮೊದಲ ಇಪ್ಪತ್ತು ತಿಂಗಳಿಗೆ ಚಂಗಾರೆಡ್ಡಿ ಅಧ್ಯಕ್ಷರಾಗಿದ್ದರು. ಎರಡನೇ ಅವದಿಗೆ ಎಸ್.ನಾರಾಯಣಗೌಡ ಅವರು ಅಧ್ಯಕ್ಷರಾದ ಸಂದರ್ಭ ಮುಂದಿನ ಇಪ್ಪತ್ತು ತಿಂಗಳ ಅವದಿಗೆ ಅಧ್ಯಕ್ಷ ಸ್ಥಾನವನ್ನು ಕೆಜಿಎಫ್ ಕ್ಷೇತ್ರಕ್ಕೆ ಬಿಟ್ಟುಕೊಡುವುದಾಗಿ ಒಪ್ಪಂದ ನಡೆದಿತ್ತು.

ಒಪ್ಪಂದದಂತೆ ನಡೆದುಕೊಳ್ಳದ ಕಾರಣ ಚುನಾವಣೆ ಅನಿವಾರ್ಯವಾಯಿತು. ಅದೃಷ್ಟ ನಮಗೆ ಒಲಿಯಿತು ಎಂದು ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಕಲಾ ಅಭಿಪ್ರಾಯಪಟ್ಟರು.

ಚುನಾವಣೆಯಲ್ಲಿ ಕಾಂಗ್ರೆಸ್‌ನ ಎರಡು ಬಣಗಳ ನಡುವೆ ಪೈಪೋಟಿ ನಡೆಯಿತು. ಶಾಸಕ ಎಸ್.ನಾರಾಯಣಸ್ವಾಮಿ ಅವರು ಎಸ್.ನಾರಾಯಣಗೌಡ ಪರ ನಿಂತರೆ, ಕೆಜಿಎಫ್ ಕ್ಷೇತ್ರದ ಸಾಸಕಿ ರೂಪಕಲಾ ಅವರು ವಿಜಯರಾಘವರೆಡ್ಡಿ ಅವರ ಪರ ಲಾಬಿ ನಡೆಸಿದರು. ತಮ್ಮ ಪರ ಇದ್ದ ಅಭ್ಯರ್ಥಿಯನ್ನು ಗೆಲ್ಲಿಸುವುದು ಇಬ್ಬರಿಗೂ ಪ್ರತಿಷ್ಠೆಯಾಗಿ ಪರಿಣಮಿಸಿತ್ತು. ಚುನಾವಣೆಯಲ್ಲಿ ಇಬ್ಬರೂ ಸಮಬಲ ಸಾಧಿಸಿದರೂ ಲಾಟರಿಯಲ್ಲಿ ಕೆಜಿಎಫ್ ಕ್ಷೇತ್ರಕ್ಕೆ ಅದೃಷ್ಟ ಒಲೆಯಿತು.

ಮತ್ತೊಂದೆಡೆ ಬಿಜೆಪಿ ನಿರ್ದೇಶಕ ರಲ್ಲಿನ ಭಿನ್ನಮತದಿಂದಾಗಿ ಕಾಂಗ್ರೆಸ್ ಗೆಲವು ಸುಲಭವಾಯಿತು. ತಹಶೀಲ್ದಾರ್ ಬಿ.ಕೆ.ಚಂದ್ರ ಮೌಳೇಶ್ವರ ಚುನಾವಣಾಧಿಕಾರಿ ಯಾಗಿ ಕಾರ್ಯ ನಿರ್ವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.