ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ: ಹಲಸಿನ ಹಣ್ಣಿಗೆ ಹೆಚ್ಚಿದ ಬೇಡಿಕೆ

ಈ ಬಾರಿ ಉತ್ತಮ ಫಸಲು l ಲಾಭದ ನಿರೀಕ್ಷೆಯಲ್ಲಿ ಮಾರಾಟಗಾರರು
Published 29 ಮೇ 2024, 6:29 IST
Last Updated 29 ಮೇ 2024, 6:29 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನಲ್ಲಿ ಹಲಸಿನ ಹಣ್ಣಿನ ಋತು ಆರಂಭವಾಗಿದೆ. ಈ ಬಾರಿ ಉತ್ತಮ ಫಸಲು ಬರುತ್ತಿದ್ದು, ಹಲಸು ಮಾರಾಟಗಾರರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.

‘ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು’ ಎಂಬ ಗಾದೆ ಮಾತಿನಂತೆ ಹಲಸು ಹಾಗೂ ಮಾವಿನ ಋತು ಶುರುವಾಗಿದ್ದು ರಸ್ತೆ ಬದಿಯಲ್ಲಿ ಹಲಸು ಮತ್ತು ಮಾವು ಹಣ್ಣುಗಳು ಮಾರಾಟ ನಡೆಯುತ್ತಿದೆ. ಆದರೆ ಈ ಬಾರಿ ಮಾವು ತೀರಾ ಕಡಿಮೆಯಾಗುವ ಲಕ್ಷಣಗಳಿವೆ. ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಹಲಸು ಇಳುವರಿಗೆ ಸಹಾಯಕವಾಗಿ ಸ್ವಾದಿಷ್ಟ ಹಣ್ಣುಗಳು ಬರತೊಡಗಿವೆ.

ಈ ಹಣ್ಣನ್ನು ಮನೆಗೆ ತಂದು, ಯಾವುದಾದರೂ ಮೂಲೆಯಲ್ಲಿ ಇಟ್ಟರೂ ಸಾಕು, ಇದರ ಪರಿಮಳವು, ಅಕ್ಕಪಕ್ಕದವರ ಮನೆಗೂ ಹಬ್ಬುತ್ತದೆ! ಇದೇ ಈ ಹಣ್ಣಿನ ತಾಕತ್ತು. ತನ್ನಲ್ಲಿ ಅಡಗಿರುವ ರುಚಿ ಹಾಗೂ ಸುವಾಸನೆಯಿಂದ, ಈ ಹಣ್ಣನ್ನು ಹೆಚ್ಚಿನವರು ಇಷ್ಟಪಡುತ್ತಾರೆ.

ಹಲಸು ಬೆಳೆ: ಹಲಸು ಬಡವರ ಹಣ್ಣು ಎಂದೇ ಜನಜನಿತವಾಗಿದೆ. ಮಾವು–ಬಾಳೆಗಳಂತೆ ಹಲಸನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಇಳುವರಿ ದೃಷ್ಟಿಯಿಂದ ಈ ಹಣ್ಣಿನ ಬೇಸಾಯ ಇತರ ಹಣ್ಣಿಗಿಂತ ಹೆಚ್ಚು ಲಾಭದಾಯಕವಲ್ಲ, 5 ಕೆಜಿಯಿಂದ 25 ಕೆಜಿಯವರೆಗೆ ತೂಗುವ ಇದು ಗಾತ್ರದಲ್ಲಿ ಹಣ್ಣುಗಳ ದೊಡ್ಡಣ್ಣನೂ ಹೌದು. ತಾಲ್ಲೂಕಿನ ಗಡಿಭಾಗವಾದ ಕಾಮಸಮುದ್ರ ತಳೂರು ,ಬತ್ತಲಹಳ್ಳಿ ,ಸಾಕರಸನಹಳ್ಳಿ,ಕದರಿನತ್ತ,ದೋಣಿಮಡಗು,ಭುವನಹಳ್ಳಿ ಮತ್ತು ಬೂದಿಕೋಟೆ ಹೋಬಳಿಯಲ್ಲಿ ಕೋಟರಾಮಗೂಳ್ಳ,ಮೂತ್ತನೂರು,ಪಾತರಾಮಗೊಳ್ಳ ಕದಿರೇನಹಳ್ಳಿ ಹೆಚ್ಚು ಹಲಸು ಬೆಳೆಯಲಾಗುತ್ತದೆ.

ಹೋಬಳಿಗಳಿಂದಲೂ ಈ ಋತುವಿನಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಬಯಲುಸೀಮೆಯ ಕೋಲಾರ ಜಿಲ್ಲೆಯಲ್ಲಿ ಹಲಸಿನ ಹಣ್ಣುಗಳ ಹೆಚ್ಚು ಜನಪ್ರಿಯವಾಗಿದೆ. ಗಡಿಭಾಗವಾದ ಕಾಮಸಮುದ್ರ ಹೋಬಳಿಯ ಗಡಿಭಾಗದಲ್ಲಿರುವ ಹಳ್ಳಿಗಳಲ್ಲಿ ನೂರಾರು ವರ್ಷಗಳ ಹಳೆಯ ಮರಗಳಿವೆ.

ಈ ಬಾರಿ ಇಳುವರಿ ಉತ್ತಮವಾಗಿದೆ. ಕಳೆದ ವರ್ಷ ಬಿದ್ದ ಮಳೆ ಹಲಸು ಬೆಳೆಗೆ ಪೂರಕವಾಗಿದೆ. ನೀರಾವರಿ ಜಮೀನು ಹಾಗೂ ನೀರಿನ ಆಶ್ರಯವಿರುವ ತೋಟ ಗಳ ಬಳಿ ಹೆಚ್ಚಿನ ಇಳುವರಿ ಬಂದಿದೆ. ಹಲಸಿನ ತೋಪುಗಳು ಕಡಿಮೆಯಾಗುತ್ತಿದ್ದರೂ ತೋಟಗಳಲ್ಲಿ ಬೆಳೆಸಿರುವ ಹಲಸಿನ ಮರಗಳಲ್ಲಿ ಜನವರಿ– ಫೆಬ್ರುವರಿಯಲ್ಲಿಯೇ ವ್ಯಾಪಾರ ಮಾಡಿ ಏಪ್ರಿಲ್ ತಿಂಗಳಿನಿಂದ ಖರೀದಿಸಿ ತಂದು ಮಾರಾಟ ಮಾಡಲಾಗುತ್ತದೆ.

‘ದೊಡ್ಡಗಾತ್ರದ ಹಲಸಿನ ಹಣ್ಣುಗಳ ₹ 100ರಿಂದ ₹ 150ಗಳವರೆಗೆ ಮಾರಾಟವಾಗುತ್ತಿವೆ. ಹಲಸಿನ ಋತುವಿನಲ್ಲಿ ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿರುವ ಹಲಸಿನ ತಳಿಗಳಲ್ಲಿ ಹಳದಿ ಬಣ್ಣದ ತೊಳೆಯ ಹಲಸು, ಕೆಂಪು ಬಣ್ಣದ ತೊಳೆಯ ಹೆಬ್ಬಲಸು, ಬೇರು ಹಲಸು ಮೊದಲಾಗಿ ನಾನಾ ಹಲಸಿನ ಹಣ್ಣುಗಳ ಮಾರಾಟ ನಡೆಯುತ್ತಿದೆ. ಇತರ ಹಲಸಿನ ಹಣ್ಣುಗಳ ಗಾತ್ರ, ಹಣ್ಣಿನ ತಳಿ, ವೈವಿಧ್ಯತೆ ಅನುಗುಣವಾಗಿ ₹ 50ರಿಂದ ₹200ವರೆಗೆ ಮಾರಾಟವಾಗುತ್ತಿವೆ. ಗುಡ್ಡೆ ಹಲಸು ₹ 4 ರಿಂದ ₹ 5 ಸಾವಿರದವರೆಗೂ ಮಾರಾಟವಾಗುತ್ತಿವೆ ಎಂದು ಸಗಟು ವ್ಯಾಪಾರಿ ಇನಾಯತ್ ಉಲ್ಲಾ ತಿಳಿಸಿದರು.

ಹಲಸಿನ ಹಣ್ಣುಗಳನ್ನು ಕೆಜಿಎಫ್‌ನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಿದ್ದು ಈ ಬಾರಿ ಉತ್ತಮ ಆದಾಯ ಬಂದಿದೆ.

-ಮಂಜುನಾಥ, ರೈತ .ಗಾಜಗ ಗ್ರಾಮ

ಹಲಸಿನ ಹಣ್ಣಿನ ಸೇವನೆಯಿಂದ ಆಗುವ ಉಪಯೋಗಗಳು

* ಹಲಸಿನ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ದೇಹದ ಶಕ್ತಿ ಹೆಚ್ಚುತ್ತದೆ

* ಹಲಸಿನ ಹಣ್ಣಿನ ಬೀಜಗಳನ್ನು ಹುರಿದು ಸೇವಿಸಿದರೆ ವೀರ್ಯವೃದ್ದಿಯಾಗುತ್ತದೆ

* ಒಂದು ಕಪ್ ಹಲಸಿನಹಣ್ಣು ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ದೇಹಕ್ಕೆ ಒದಗಿಸುತ್ತದೆ

* 100 ಗ್ರಾಂ ಹಲಸಿನ ಹಣ್ಣಿನಲ್ಲಿ 303 ಮಿ. ಗ್ರಾಂ ಪೊಟ್ಯಾಷಿಯಂ ಇರುತ್ತದೆ. ಪೊಟ್ಯಾಷಿಯಂ ಸೇವಿಸಿದರೆ ಅದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.

* ಹಲಸಿನ ಹಣ್ಣು ವಿಟಮಿನ್ ‘ಎ’ಯಿಂದ ಸಮೃದ್ಧವಾಗಿದ್ದು ಆರೋಗ್ಯಕರ ಕಣ್ಣು ಮತ್ತು ತ್ವಚೆಗಾಗಿ ಒಂದು ಶಕ್ತಿಯುತ ನ್ಯೂಟ್ರಿಯೆಂಟ್ ಆಗಿದೆ.

* ಹಲಸಿನ ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್ ಮತ್ತು ಫ್ರುಕ್ಟೋಸ್ ನಿಮ್ಮ ಶಕ್ರಿಯನ್ನು ವರ್ಧಿಸುವಲ್ಲಿ ಸಹಕಾರಿಯಾಗಿದೆ.

* ಅಲ್ಸರ್ ವಿರುದ್ಧ ಹೋರಾಡುವ ವಿಶಿಷ್ಟ ಗುಣವನ್ನು ಹೊಂದಿರುವ ಹಲಸಿನ ಹಣ್ಣು ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರಮಾಡುತ್ತದೆ.

* ಹಲಸಿನ ಹಣ್ಣಿನಲ್ಲಿರುವ ಕಬ್ಬಿಣದ ಅಂಶ ಅನೀಮಿಯಾವನ್ನು ದೂರ ಮಾಡಿ ದೇಹದ ಸೂಕ್ತ ರಕ್ತ ಸಂಚಲನೆಗೆ ಫಲಪ್ರದವಾಗಿದೆ.

* ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಕಾಯಿಲೆಯನ್ನು ಹಲಸಿನ ಹಣ್ಣು ಪರಿಹರಿಸುತ್ತದೆ ಎಂದು ತೋಟಗಾರಿಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಾರೆಡ್ಡಿ ಮಾಹಿತಿ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT