ಶನಿವಾರ, ಜುಲೈ 2, 2022
25 °C
ಸಿಇಒ ಬೀಳ್ಕೊಡುಗೆ ಸಮಾರಂಭ

ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸೊಸೈಟಿಗಳ ಗಣಕೀಕರಣ, ಸಾಮಾನ್ಯ ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುವ ಮೈಕ್ರೋ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಸಹಕಾರ ನೀಡಿದ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ರವಿ ಅವರ ಸೇವೆ ಸಿಬ್ಬಂದಿಗೆ ಮಾದರಿಯಾಗಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಲೆಕ್ಕ ಪರಿಶೋಧನಾ ಇಲಾಖೆ ಜಂಟಿ ನಿರ್ದೇಶಕರಾಗಿ ವರ್ಗಾವಣೆಗೊಂಡಿರುವ ರವಿ ಅವರಿಗೆ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ‘ರವಿ ಅವರ ಅವಧಿಯಲ್ಲಿ ಡಿಸಿಸಿ ಬ್ಯಾಂಕ್‌ ಬ್ಲೂರಿಬ್ಬನ್ ಗೌರವಕ್ಕೆ ಪಾತ್ರವಾಗಿ ದೇಶದಲ್ಲೇ ನಂಬರ್‌ 1 ಬ್ಯಾಂಕ್‌ ಆಗಲು ಸಾಧ್ಯವಾಯಿತು’ ಎಂದರು.

‘ಸಾಲ ವಿತರಣೆ ಮತ್ತು ವಸೂಲಾತಿಯಲ್ಲಿ ಬ್ಯಾಂಕ್‌ ಮುಂದಿದೆ. ಈ ಗೌರವ ಉಳಿಯಲು ಸಿಬ್ಬಂದಿ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಬ್ಯಾಂಕ್‌ನ ನಿಷ್ಕ್ರೀಯ ಆಸ್ತಿ ಮೌಲ್ಯ (ಎನ್‌ಪಿಎ) ಶೇ 2.5ಕ್ಕೆ ಇಳಿದಿದೆ. ಠೇವಣಿ ಸಂಗ್ರಹ ಪ್ರಮಾಣ ಸಹ ಹೆಚ್ಚಾಗಿದೆ. ಇದು ಬ್ಯಾಂಕ್‌ನ ಆರ್ಥಿಕ ಶಕ್ತಿಗೆ ಸಾಕ್ಷಿ’ ಎಂದರು.

‘ಬ್ಯಾಂಕ್‌ನ ಅಭಿವೃದ್ದಿಗೆ ಸಂಬಂಧಿಸಿದಂತೆ ರವಿ ಅವರ ಧನಾತ್ಮಕ ಭಾವನೆಯಿಂದ ಗಣಕೀಕರಣದಲ್ಲಿ ಶೇ 100 ಸಾಧನೆ ಸಾಧ್ಯವಾಗಿದೆ. ದೇಶದ ವಿವಿಧ ರಾಜ್ಯಗಳಿಗೆ ಮಾದರಿಯಾಗಿ ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭಿಸಿದ್ದು, ಇತರೆ ರಾಜ್ಯಗಳು ಈ ಬಗ್ಗೆ ಮಾರ್ಗದರ್ಶನ ಪಡೆಯುತ್ತಿವೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಮಹಿಳಾ ಸ್ವಸಹಾಯ ಸಂಘಗಳಿಗೆ ನಾವು ನೀಡಿದಷ್ಟು ಸಾಲವನ್ನು ದೇಶದ ಬೇರೆ ಯಾವುದೇ ಸಹಕಾರಿ ಬ್ಯಾಂಕ್‌ ನೀಡುವ ಧೈರ್ಯ ಮಾಡಿಲ್ಲ. ಈ ಬಾರಿ ಎನ್‌ಪಿಎ ಪ್ರಮಾಣ ಶೇ 2ಕ್ಕಿಳಿಸಲು ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಬೇಕು. ಠೇವಣಿ ಸಂಗ್ರಹ ಹೆಚ್ಚಿಸಬೇಕು. ಅನ್ನ ನೀಡಿದ ಬ್ಯಾಂಕ್ ಉಳಿಸಿ ಬೆಳೆಸುವುದು ಸಿಬ್ಬಂದಿಯ ಜವಾಬ್ದಾರಿ’ ಎಂದು ಕಿವಿಮಾತು ಹೇಳಿದರು.

ಸಂತೃಪ್ತಿ ಇದೆ: ‘ರಾಜ್ಯ ಮತ್ತು ಕೇಂದ್ರ ಸರ್ಕಾರ, ನಬಾರ್ಡ್‌ನಿಂದ ಬ್ಯಾಂಕ್ ಹಾಗೂ ಜಿಲ್ಲೆಗೆ ಸಿಗಬಹುದಾದ ಎಲ್ಲಾ ಸವಲತ್ತು ಪಡೆದುಕೊಳ್ಳಲಾಗಿದೆ. ನನ್ನ ಸೇವಾವಧಿಯಲ್ಲಿ ಸಂಘರ್ಷಕ್ಕೆ ಅವಕಾಶ ನೀಡದೆ ಕೆಲಸ ಮಾಡಿದ್ದೇನೆ. ಇಲ್ಲಿ ಕೆಲಸ ಮಾಡಿದ ಬಗ್ಗೆ ಸಂತೃಪ್ತಿ ಇದೆ. ಕಳೆದ ಒಂದೂವರೆ ವರ್ಷದಲ್ಲಿ ಇಲ್ಲಿ ಮಾಡಿದ ಕೆಲಸಕ್ಕೆ ಗೌರವ, ಎಲ್ಲರ ಪ್ರೀತಿ, ವಿಶ್ವಾಸ ಸಿಕ್ಕಿದೆ’ ಎಂದು ರವಿ ಸಂತಸ ವ್ಯಕ್ತಪಡಿಸಿದರು.

‘ವಾಣಿಜ್ಯ ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರು ಸಾಲ ಪಡೆಯುವುದು ಸುಲಭದ ಮಾತಲ್ಲ. ಡಿಸಿಸಿ ಬ್ಯಾಂಕ್‌ನಲ್ಲಿ ದೇಶದಲ್ಲೇ ಪ್ರಥಮವಾಗಿ ಮೈಕ್ರೋ ಎಟಿಎಂ ಸೇವೆ ಮೂಲಕ ಜನರ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ. ಇದು ಶೇ 100ರಷ್ಟು ಕಾರ್ಯಗತವಾಗಬೇಕು’ ಎಂದು ಆಶಿಸಿದರು.

ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಖಲೀಮುಲ್ಲಾ, ನಾಗೇಶ್, ಹುಸೇನ್ ದೊಡ್ಡಮನಿ, ವ್ಯವಸ್ಥಾಪಕ ಅರುಣ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.