ಶನಿವಾರ, ಆಗಸ್ಟ್ 24, 2019
27 °C
ಸಭೆಯಲ್ಲಿ ಜನರಿಗೆ ಕುರಗಲ್‌ ಪಿಡಿಒ ಮುನಿರಾಜು ಕಿವಿಮಾತು

ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಳ್ಳಿ

Published:
Updated:
Prajavani

ಕೋಲಾರ: ‘ಸರ್ಕಾರದ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳನ್ನು ಜನರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು’ ಎಂದು ತಾಲ್ಲೂಕಿನ ಕುರಗಲ್‌ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಾಜು ಕಿವಿಮಾತು ಹೇಳಿದರು.

ಕುರಗಲ್ ಗ್ರಾ.ಪಂನಲ್ಲಿ ಶುಕ್ರವಾರ ನಡೆದ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಸರ್ಕಾರ ಗ್ರಾಮೀಣ ಭಾಗದ ಜನರ ಕಲ್ಯಾಣಕ್ಕಾಗಿ ವಿವಿಧ ಸವಲತ್ತು ಕಲ್ಪಿಸಿದೆ. ಆದರೆ, ಜನರಿಗೆ ಅರಿವಿಲ್ಲದೆ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರೈತರು ನರೇಗಾ ಯೋಜನೆಯಲ್ಲಿ ಸಾಕಷ್ಟು ಸೌಲಭ್ಯ ಪಡೆಯಬಹುದು. ಪಾಲಿಹೌಸ್ ನಿರ್ಮಾಣಕ್ಕೆ ರೈತರಿಗೆ ಸಹಾಯಧನ ನೀಡಲಾಗುತ್ತದೆ. ರೇಷ್ಮೆ ಇಲಾಖೆಯು ನರೇಗಾ ಕಾಮಗಾರಿಗಳ ಅನುಷ್ಠಾನದಲ್ಲಿ ಹೆಚ್ಚಿನ ಸಾಧನೆ ಮಾಡಿದೆ’ ಎಂದು ತಿಳಿಸಿದರು.

‘ಶಾಲೆ ಬಿಟ್ಟ ಮಕ್ಕಳಿದ್ದರೆ ಅವರ ಬಗ್ಗೆ ಮಾಹಿತಿಗೆ ಸಂಗ್ರಹಿಸಬೇಕು. ಜತೆಗೆ ಆ ಮಕ್ಕಳನ್ನು ಪತ್ತೆ ಮಾಡಿ ಪೋಷಕರ ಮನವೊಲಿಸಿ ಪುನಃ ಶಾಲೆಗೆ ದಾಖಲು ಮಾಡಿಸಬೇಕು. ಸರ್ಕಾರಿ ಶಾಲೆ ಉಳಿಸಬೇಕಿದ್ದು, ಅಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಬೇಕು. ಕಾರ್ಪೊರೇಟ್‌ ಕಂಪನಿಗಳಿಂದ ಆರ್ಥಿಕ ನೆರವು ಪಡೆದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.

‘ಹಸು ಸಾಕಣೆ ಮಾಡುವ ರೈತರು ರಾಸುಗಳಿಗೆ ತಪ್ಪದೇ ವಿಮೆ ಮಾಡಿಸಬೇಕು. ಹಸುಗಳು ಕಾಯಿಲೆಗೆ ತುತ್ತಾಗಿ ಮೃತಪಟ್ಟರೆ ₹ 50 ಸಾವಿರ, ಸಹಜ ಸಾವಿಗೆ ₹ 10 ಸಾವಿರ ವಿಮೆ ಹಣ ಸಿಗುತ್ತದೆ. ಕುರಿ ಹಾಗೂ ಮೇಕೆಗೂ ವಿಮೆ ಮಾಡಿಸಿದರೆ ಸಹಜ ಸಾವಿಗೆ ₹ 5 ಸಾವಿರ ಪಡೆಯಬಹುದು’ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಸ್ವಉದ್ಯೋಗಿಗಳಾಗಿ: ‘ಮಕ್ಕಳ ಹಾಗೂ ಗರ್ಭಿಣಿಯರ ಆರೋಗ್ಯ ದೃಷ್ಟಿಯಿಂದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಸ್ತ್ರೀಶಕ್ತಿ ಸಂಘಗಳನ್ನು ರಚನೆ ಮಾಡಿ ಬ್ಯಾಂಕ್‌ಗಳು ಸಾಲದ ನೆರವು ಪಡೆದು ಸ್ವಉದ್ಯೋಗಿಗಳಾಗಬೇಕು’ ಎಂದು ಅಂಗನವಾಡಿ ಮೇಲ್ವಿಚಾರಕಿ ರತ್ನಮ್ಮ ಸಲಹೆ ನೀಡಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಈಗಾಗಲೇ ನಿವೇಶನ ನೀಡಿದ್ದು, ಹೊಸ ಗ್ರಂಥಾಲಯ ಕಟ್ಟಡ ನಿರ್ಮಿಸಲು ಗ್ರಂಥಾಲಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಒಪ್ಪಿಗೆ ಸೂಚಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಕೃಷಿ, ಪಶುಪಾಲನೆ, ರೇಷ್ಮೆ, ಅರಣ್ಯ, ತೋಟಗಾರಿಕೆ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಜಲಾಮೃತ ಯೋಜನೆಯಡಿ ಗಿಡ ನೆಡುವುದು, ಕೋಟಿ ನಾಟಿ ಯೋಜನೆ, ಗ್ರಾ.ಪಂ ಮತ್ತು ಸರ್ಕಾರಿ ಶಾಲೆ ಆವರಣದಲ್ಲಿ ಸಸಿ ನೆಡುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದರು.

ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಎಂ.ಎನ್.ಕೃಷ್ಣಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವರಾಜ್, ಮುರಳಿಮೋಹನ್ ಹಾಜರಿದ್ದರು.

Post Comments (+)