ಗುರುವಾರ , ಫೆಬ್ರವರಿ 25, 2021
27 °C

ಬೃಹತ್ ಕೈಗಾರಿಕಾ ತರಬೇತಿ ಕೇಂದ್ರ ಆರಂಭ: ಸಂಸದ ಕೆ.ಎಚ್‌.ಮುನಿಯಪ್ಪ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ತಾಲ್ಲೂಕಿನ ವೇಮಗಲ್‌ನಲ್ಲಿ ಸದ್ಯದಲ್ಲೇ ಬೃಹತ್ ಕೈಗಾರಿಕಾ ತರಬೇತಿ ಕೇಂದ್ರ ಆರಂಭವಾಗಲಿದ್ದು, ಸುಮಾರು 1 ಲಕ್ಷ ಮಂದಿಗೆ ಉದ್ಯೋಗಾವಕಾಶ ಸೃಷ್ಟಿಸಲಾಗುವುದು’ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಭರವಸೆ ನೀಡಿದರು.

ದಲಿತ ಕೈಗಾರಿಕೋದ್ಯಮಿಗಳ ಒಕ್ಕೂಟವು ಇಲ್ಲಿ ಶನಿವಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ದಿಮೆ ಆಕಾಂಕ್ಷಿಗಳಿಗೆ ಆಯೋಜಿಸಿದ್ದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಬರಪೀಡಿತ ಜಿಲ್ಲೆಯಲ್ಲಿ ಮಳೆ ಬೆಳೆಯಿಲ್ಲದೆ ನಿರುದ್ಯೋಗ ಸೃಷ್ಟಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ನಿರುದ್ಯೋಗ ಸಮಸ್ಯೆ ಪರಿಹಾರಕ್ಕಾಗಿ ಕೈಗಾರಿಕಾ ತರಬೇತಿ ಕೇಂದ್ರಗಳು ಹೆಚ್ಚಾಗಿ ಸ್ಥಾಪನೆಯಾಗಬೇಕು. ವೇಮಗಲ್, ನರಸಾಪುರ ಹಾಗೂ ಮಾಲೂರಿನಲ್ಲಿ ಬಹುತೇಕ ರೈತರಿಗೆ ಭೂಮಿ ಇಲ್ಲವಾಗಿದ್ದು, ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಯಲು ಕೈಗಾರಿಕಾ ತರಬೇತಿ ನೀಡಬೇಕು. ಆಗ ಸ್ಥಳೀಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ ಅಭಿವೃದ್ಧಿಯಾಗುತ್ತವೆ’ ಎಂದು ಸಲಹೆ ನೀಡಿದರು.

‘ಈ ಹಿಂದೆ ನಾನು ಸಣ್ಣ ಮತ್ತು ಅತಿಸಣ್ಣ ಕೈಗಾರಿಕಾಭಿವೃದ್ಧಿ ಸಚಿವನಾಗಿ ಅಧಿಕಾರ ನಿರ್ವಹಿಸಿದ ಸಂದರ್ಭದಲ್ಲಿ ವಿವಿಧ ತರಬೇತಿ ಕೇಂದ್ರಗಳನ್ನು ಆರಂಭಿಸಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿದೆ. ಆಗ ಪರಿಶಿಷ್ಟರಿಗೆ ಸಹಾಯಧನ ಮಂಜೂರು ಮಾಡಲಾಗಿತ್ತು. ಇದಕ್ಕೆ ಬ್ಯಾಂಕ್‌ಗಳು ಸಹಕಾರ ನೀಡಿದವು’ ಎಂದು ಶ್ಲಾಘಿಸಿದರು,

ಬೇಸರದ ಸಂಗತಿ: ‘ಕೈಗಾರಿಕೆ ಸ್ಥಾಪಿಸುವವರಲ್ಲಿ ಪರಿಶಿಷ್ಟ ಜಾತಿಯವರು ಶೇ 4ರಷ್ಟು ಮತ್ತು ಪರಿಶಿಷ್ಟ ಪಂಗಡದವರು ಶೇ 2ರಷ್ಟು ಇಲ್ಲದಿರುವುದು ಬೇಸರದ ಸಂಗತಿ. ಕೇಂದ್ರ ಸರ್ಕಾರವು ಪರಿಶಿಷ್ಟ ಸಮುದಾಯದ ಉದ್ದಿಮೆದಾರರು ಉತ್ಪಾದಿಸುವ ವಸ್ತುಗಳನ್ನು ಖರೀದಿಸುವುದರ ಜತೆಗೆ ಸಹಾಯಧನ ನೀಡುತ್ತಿದೆ. ಇದನ್ನು ಸದ್ಭಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಿ’ ಎಂದು ಆಶಿಸಿದರು.

‘ತರಬೇತಿ ಪಡೆದವರಿಗೆ ಗರಿಷ್ಠ ₹ 25 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ರಾಜ್ಯದ ಮಹಾ ನಗರಗಳಲ್ಲಿ ಈ ಯೋಜನೆ ಪ್ರಗತಿಯಲ್ಲಿದೆ. ಸಾಲ ಭದ್ರತೆ ಯೋಜನೆಗಳಲ್ಲಿ ಸರ್ಕಾರ ₹ 500 ಕೋಟಿವರೆಗೆ ಭರಿಸುವ ಆಶ್ವಾಸನೆ ನೀಡಿತ್ತು. ಆಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ರೇಷ್ಮೆ ಬೆಳೆಗಾರರಿಗೆ ಕೋಟ್ಯಂತರ ರೂಪಾಯಿ ಸಾಲ ಮಂಜೂರು ಮಾಡಿಸಿದ್ದೆ’ ಎಂದು ವಿವರಿಸಿದರು.

‘ವೃತ್ತಿಪರ ತರಬೇತಿ ಪಡೆದು ಪ್ರಮಾಣಪತ್ರ ಹೊಂದಿದಲ್ಲಿ ಉದ್ಯೋಗ ಸಿಗುವುದು ನಿಶ್ಚಿತ. ಡಿಪ್ಲೊಮಾ ತರಬೇತಿ ಪಡೆದವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಉದ್ಯೋಗ ಅವಕಾಶಗಳಿವೆ. ಈಗಾಗಲೇ ಬೆಂಗಳೂರಿನ ದೇವನಹಳ್ಳಿಯಲ್ಲಿ ಕೈಗಾರಿಕಾ ತರಬೇತಿ ಕೇಂದ್ರ ಆರಂಭವಾಗಿದೆ. ಏಪ್ರಿಲ್‌ ವೇಳೆಗೆ ಜಿಲ್ಲೆಯಲ್ಲೂ ಕೇಂದ್ರ ಕಾರ್ಯಾರಂಭ ಮಾಡಲಿದ್ದು, 10 ಸಾವಿರ ಉದ್ಯೋಗಾವಕಾಶ ಸೃಷ್ಟಿಸುವ ಗುರಿಯಿದೆ’ ಎಂದು ಮಾಹಿತಿ ನೀಡಿದರು.

ನೊಂದಾಯಿಸಿ: ‘ಕೈಗಾರಿಕೆ ಆರಂಭಿಸಿದ ನಂತರ ಎದುರಾಗುವ ಉತ್ಪಾದನೆಯ ಮಾರುಕಟ್ಟೆಗೆ ಎಲ್ಲರೂ ಹಬ್ ಕಚೇರಿಯಲ್ಲಿ ನೊಂದಾಯಿಸಬೇಕು. ಉತ್ಪಾದಕರ ಉತ್ಪಾದನೆಯಲ್ಲಿ ಶೇ 4ರಷ್ಟು ಖರೀದಿಸಲಾಗುವುದು. ನೊಂದಾಯಿತ ಪ್ರಮಾಣಪತ್ರ ಇದ್ದಲ್ಲಿ ಸರ್ಕಾರದ ಟೆಂಡರ್‌ನಲ್ಲೂ ಉಚಿತವಾಗಿ ಭಾಗವಹಿಸಬಹುದು’ ಎಂದು ರಾಷ್ಟ್ರೀಯ ಎಸ್ಸಿ– ಎಸ್‌ಟಿ ಹಬ್ ಬೆಂಗಳೂರು ವಿಭಾಗದ ಮುಖ್ಯಸ್ಥೆ ಎ.ಕೋಕಿಲಾ ವಿವರಿಸಿದರು.

‘2017ರಲ್ಲಿ ದಲಿತ ಕೈಗಾರಿಕೋದ್ಯಮಿಗಳ ಒಕ್ಕೂಟ ಸ್ಥಾಪಿಸಿದ್ದು, ರಾಜ್ಯದಲ್ಲಿ ಇದು 2ನೇ ಕಾರ್ಯಕ್ರಮವಾಗಿದೆ. ದಲಿತರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯದ ಬಗ್ಗೆ ಅರಿವು ಮೂಡಿಸಿ ಅವರನ್ನು ಸಮಾಜದ ಮುಖ್ಯವಾಹಿತನಿಗೆ ತರುವುದು ಒಕ್ಕೂಟದ ಪ್ರಮುಖ ಗುರಿ’ ಎಂದು ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಮಾಮಿಡಿ ಸುದರ್ಶನ್ ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದಲಿಂಗಪ್ಪ ಬಿ.ಪೂಜಾರಿ, ಒಕ್ಕೂಟದ ರಾಜ್ಯ ಅಧ್ಯಕ್ಷ ಕೆ.ರಾಜೇಂದ್ರ ಪ್ರಸಾದ್, ಕಾರ್ಯದರ್ಶಿ ಎನ್.ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ವೈ.ವಿ.ನರಸಿಂಹಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಲಾಲ್‌ ಬಹದ್ದೂರ್ ಶಾಸ್ತ್ರಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.