ಶನಿವಾರ, ಜುಲೈ 31, 2021
23 °C
ನಾಲ್ವರು ನೌಕರರಿಗೆ ಸೋಂಕು

ಆತಂಕದಲ್ಲಿ ಬೆಮಲ್‌ ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌: ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮಲ್‌ ಕಾರ್ಖಾನೆಯ ಮತ್ತೊಬ್ಬ ನೌಕರನಿಗೆ ಬುಧವಾರ ಕೊರೊನಾ ಸೋಂಕು ಇರುವುದು ಪತ್ತೆಯಾದ ಕಾರಣ ಬೆಮಲ್‌ ಕಾರ್ಮಿಕ ವಲಯದಲ್ಲಿ ಆತಂಕ ಮಡುಗಟ್ಟಿದೆ.

ಬೆಮಲ್‌ ಕಾರ್ಖಾನೆಯಲ್ಲಿ ಸರದಿ ಮೇರೆಗೆ ಕೆಲಸ ನಿರ್ವಹಣೆ ಮಾಡಲಾಗುತ್ತಿದ್ದರೂ, ಕಾರ್ಮಿಕರ ನಡುವೆ ಇರುವ ಸಂಪರ್ಕದ ಕಾರಣ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚಾಗಿದೆ. ಇದುವರೆಗೂ ನಾಲ್ವರು ಬೆಮಲ್‌ ಕಾರ್ಮಿಕರು ಸೋಂಕಿಗೆ ಒಳಗಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಮೃತ ನೌಕರನ ಜತೆ ಪ್ರಾಥಮಿಕ ಸಂಪರ್ಕ ಇದ್ದ ಒಂಬತ್ತು ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಸುಮತಿ ನಗರದ ನಿವಾಸಿಯೊಬ್ಬರಿಗೆ ಕೊರೊನಾ ವೈರಸ್ ಇರುವುದು ಬುಧವಾರ ದೃಢಪಟ್ಟಿದೆ.

ಬೆಮಲ್‌ ಕಾರ್ಖಾನೆ ಆವರಣದಲ್ಲಿ ಇದ್ ಎರಡು ಶಾಪ್‌ಗಳನ್ನು ಈಗಾಗಲೇ ಸೀಲ್‌ಡೌನ್‌ ಮಾಡಲಾಗಿದೆ. ಪ್ರಸ್ತುತ ಸೋಂಕು ತಗುಲಿರುವ ಕಾರ್ಮಿಕ ಮೊದಲೇ ಸೀಲ್‌ಡೌನ್ ಆಗಿದ್ದ ಶಾಪ್‌ನಲ್ಲಿಯೇ ಕೆಲಸ ಮಾಡುತ್ತಿದ್ದರು.

ಲಾಕ್‌ಡೌನ್ ಅವಧಿಯಲ್ಲಿ ಹಂತ ಹಂತವಾಗಿ ಬೆಮಲ್‌ ಕಾರ್ಖಾನೆ ಕೆಲಸ ಮಾಡಲು ಶುರು ಮಾಡಿತು. ಆಗ ಕೇವಲ ತಾಲ್ಲೂಕು ಮತ್ತು ಅಕ್ಕಪಕ್ಕದ ತಾಲ್ಲೂಕುಗಳ ಕಾರ್ಮಿಕರಿಗೆ ಮಾತ್ರ ಕಾರ್ಖಾನೆಯೊಳಗೆ ಪ್ರವೇಶ ಕಲ್ಪಿಸಲಾಗಿತ್ತು. ನಂತರ ಬೆಂಗಳೂರು ಸೇರಿದಂತೆ ಇತರ ಪ್ರದೇಶಗಳಿಂದಲೂ ಕಾರ್ಮಿಕರು ಕೆಲಸಕ್ಕೆ ಬರಲು ಶುರು ಮಾಡಿದರು. ಬೆಂಗಳೂರು ಸಂಪರ್ಕ ಹೊಂದಿರುವ ಕಾರ್ಮಿಕರೇ ಈಗ ಕೊರೊನಾ ವಾಹಕರಾಗಿದ್ದಾರೆ ಎಂದು ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಎಷ್ಟೇ ಎಚ್ಚರ ವಹಿಸಿದರೂ ಸೋಂಕು ಹರಡುವ ಸಾಧ್ಯತೆ ಇದೆ ಎಂಬ ಭೀತಿಗೆ ಒಳಗಾಗಿದ್ದಾರೆ.

ಕಾರ್ಖಾನೆಯಲ್ಲಿ ಸೋಂಕು ಹರಡುತ್ತಿರುವುದು ತಾಲ್ಲೂಕು ಆಡಳಿತಕ್ಕೆ ಕೂಡ ಚಿಂತೆಯಾಗಿದೆ. ಹಲವಾರು ಅಧಿಕಾರಿಗಳು ಈಗಾಗಲೇ ಬೆಮಲ್‌ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಮುಚ್ಚಬೇಕು ಎಂಬ ಪ್ರಸ್ತಾವವನ್ನು ಸಹ ಸರ್ಕಾರದ ಮುಂದಿಟ್ಟಿದ್ದಾರೆ. ಆದರೆ, ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಆಗಿರುವುದರಿಂದ ಉನ್ನತ
ಮಟ್ಟದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.