ಭಾನುವಾರ, ಸೆಪ್ಟೆಂಬರ್ 20, 2020
21 °C
ಪಕ್ಷದ ಕಚೇರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ ಹೇಳಿಕೆ

ಕೋಲಾರ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ನೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ನೆಲೆಯಿದೆ. ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷದ ಸಂಘಟನಾ ಬೇರುಗಳನ್ನು ಇನ್ನೂ ಗಟ್ಟಿಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಹೇಳಿದರು.

ನಗರದ ಹೊರವಲಯದ ಕೋಗಿಲಹಳ್ಳಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಜಿಲ್ಲಾ ಕಚೇರಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಪ್ರಚುರಪಡಿಸಿ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು’ ಎಂದು ಸಲಹೆ ನೀಡಿದರು.

‘ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ಬಂದಿರುವ ಮತಗಳನ್ನು ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಉಳಿಸಿಕೊಂಡು ಹೋಗಲು ಕಾರ್ಯಕರ್ತರು ಒಗ್ಗೂಡಬೇಕು. ಆಗ ಮಾತ್ರ ಚುನಾವಣೆಗಳಲ್ಲಿ ಪಕ್ಷದ ಗೆಲುವು ಸಾಧ್ಯ. ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಕಾರ್ಯಕರ್ತರು ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ. ರಾಮಮಂದಿರಕ್ಕೆ ಭಕ್ತರು ಸ್ವಇಚ್ಛೆಯಿಂದ ಹಣ, ಇಟ್ಟಿಗೆ, ಸಲಕರಣೆ ನೀಡಿದ ರೀತಿ ದೇಶದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಕಚೇರಿ ನಿರ್ಮಿಸಲು ಪಕ್ಷದ ಕಾರ್ಯಕರ್ತರು ದೇಣಿಗೆ ನೀಡುವ ಮೂಲಕ ಸಂಘಟಿತರಾಗಿ ಪಕ್ಷ ಕಟ್ಟುತ್ತಿದ್ದಾರೆ’ ಎಂದು ಸಂಸದ ಎಸ್.ಮುನಿಸ್ವಾಮಿ ಸ್ಮರಿಸಿದರು.

‘ಭವಿಷ್ಯದ ದೃಷ್ಟಿಯಿಂದ ಪ್ರತಿ ರಾಜ್ಯದಲ್ಲೂ ಪಕ್ಷದ ಸಂಸದರು ಮತ್ತು ಶಾಸಕರು ಇರಬೇಕು. ಕಾರ್ಯಕರ್ತರ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ರಾಷ್ಟ್ರ ಮಟ್ಟದಲ್ಲಿ ನಿರ್ಧಾರ ಕೈಗೊಂಡು ಜಿಲ್ಲೆಗಳಲ್ಲಿ ಪಕ್ಷದ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯದ 8 ಜಿಲ್ಲೆಗಳಲ್ಲಿ ಪಕ್ಷದ ಕಚೇರಿಗೆ ಒಂದೇ ದಿನ ಶಿಲಾನ್ಯಾಸ ನೆರವೇರಿಸಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ₹ 3 ಕೋಟಿ ಅಂದಾಜು ವೆಚ್ಚದಲ್ಲಿ ಪಕ್ಷದ ಕಚೇರಿ ನಿರ್ಮಿಸಲಾಗುತ್ತಿದೆ. ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು’ ಎಂದು ತಿಳಿಸಿದರು.

ಶ್ಲಾಘನೀಯ: ‘ಜಿಲ್ಲೆಯಲ್ಲಿ ಭವ್ಯ ದೇವಮಂದಿರ ಕಟ್ಟಲು ಪಕ್ಷವು ದೇವರ ಸಮಾನವೆಂದು ತಿಳಿದು ಭಕ್ತರ ರೂಪದ ಕಾರ್ಯಕರ್ತರು ಪಕ್ಷ ಬಲಪಡಿಸುವ ಮಹಾನ್ ಕಾರ್ಯಕ್ಕೆ ಹಣಕಾಸು ನೆರವು ನೀಡುತ್ತಿರುವುದು ಶ್ಲಾಘನೀಯ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಬಿಜೆಪಿಯ ಬೇರು ಗಟ್ಟಿಯಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಪಕ್ಷದ 3 ಮಂದಿ ಶಾಸಕರಿದ್ದರು. ಈಗ ಸಂಸದ ಸ್ಥಾನವನ್ನು ಗೆದ್ದಾಗಿದೆ. ಭವಿಷ್ಯದಲ್ಲಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಬಲಗೊಳಿಸಬೇಕು. ಪ್ರಾಮಾಣಿಕವಾಗಿ ಪಕ್ಷದ ಏಳಿಗೆಗೆ ದುಡಿಯುವ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಸಿಗಲಿದೆ’ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಮುಖಂಡರು ವರ್ಚುವಲ್ ಸಭೆ ಮೂಲಕ ಬಿಜೆಪಿ ಜಿಲ್ಲಾ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವೈ.ರಾಮಕ್ಕ, ವೈ.ಸಂಪಂಗಿ, ಎ.ನಾಗರಾಜ್, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೃಷ್ಣರೆಡ್ಡಿ, ರಾಜ್ಯ ಪ್ರಭಾರಗಳಾದ ಗೀತಾ, ಕಾಂತರಾಜ್ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.