ಶುಕ್ರವಾರ, ನವೆಂಬರ್ 22, 2019
27 °C

ಅನರ್ಹ ಶಾಸಕರ ಪ್ರಕರಣ ತೀರ್ಪಿನಿಂದ ಚುನಾವಣೆ ಚಿತ್ರಣ ಬದಲು - ಸಚಿವ ಅಶೋಕ್‌

Published:
Updated:

ಕೋಲಾರ: ‘ಅನರ್ಹ ಶಾಸಕರ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ತೀರ್ಪು ಬರಲಿದ್ದು, ನಂತರ ಉಪ ಚುನಾವಣೆಯ ರಾಜಕೀಯ ಚಿತ್ರಣವೇ ಬದಲಾಗುತ್ತದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಉಪ ಚುನಾವಣೆಗೆ ಬಿಜೆಪಿ ಸನ್ನದ್ಧವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ತೀರ್ಪು ಬಂದರೂ ಪಕ್ಷವು ಪ್ಲಾನ್‌ ಎ ಮತ್ತು ಪ್ಲಾನ್‌ ಬಿ ಸಿದ್ಧ ಮಾಡಿಕೊಂಡಿದೆ. ಉಪ ಚುನಾವಣೆಯಲ್ಲಿ ಪಕ್ಷ 15 ಕ್ಷೇತ್ರದಲ್ಲೂ ಗೆಲ್ಲುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅಭ್ಯರ್ಥಿ ಆಯ್ಕೆ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಬಿಜೆಪಿಗಾಗಿ ತ್ಯಾಗ ಮಾಡಿದವರು ತುಂಬಾ ಜನ ಇದ್ದಾರೆ. ಈ ಹಿಂದೆ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಉಪ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ವೇದಿಕೆ ನಿರ್ಮಾಣವಾಗಿದೆ’ ಎಂದರು.

ದಿಕ್ಕು ದಿಸೆಯಿಲ್ಲ: ‘ಬಿಜೆಪಿ ಸರ್ಕಾರ ರಚನೆಯಾಗಿ 2 ತಿಂಗಳಾಗಿದೆ. ಕಾಂಗ್ರೆಸ್‌ಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಯೋಗ್ಯತೆಯಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೇ ರಾಜೀನಾಮೆ ಕೊಟ್ಟಿದ್ದು, ಆ ಪಕ್ಷಕ್ಕೆ ದಿಕ್ಕು ದಿಸೆಯಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್ ನಾಯಕರಲ್ಲಿ ಹೊಂದಾಣಿಕೆಯಿಲ್ಲ. ಹಳಬರು, ಹೊಸಬರು, ನಿನ್ನೆ ಬಂದವರು, ಹಿಂದೆ ಇದ್ದವರು ಎಂಬ ಬಣಗಳು ಸೃಷ್ಟಿಯಾಗಿವೆ. ಅವರು ಮೊದಲು ಪಕ್ಷದೊಳಗಿನ ಗೊಂದಲ ಸರಿಪಡಿಸಿಕೊಳ್ಳಲಿ. ಬಿಜೆಪಿ ಹೈಕಮಾಂಡ್‌ ಬಲಿಷ್ಠವಾಗಿದ್ದು, ನರೇಂದ್ರ ಮೋದಿಯವರಿಗೆ ಎದುರಾಳಿಗಳೇ ಇಲ್ಲ’ ಎಂದು ಗುಡುಗಿದರು.

‘ಹೊಸಕೋಟೆಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶಕ್ಕೆ ಆ ಪಕ್ಷದ ಮಾಜಿ ಅಧ್ಯಕ್ಷರೇ ಹೋಗಿಲ್ಲ. ಇನ್ನು ರಣಕಹಳೆ ಎಲ್ಲಿ? ಕಾಂಗ್ರೆಸ್‌ ಗೊಂದಲದ ಗೂಡಾಗಿದ್ದು, ಪೀಪಿ ಊದುವ ಶಕ್ತಿಯೂ ಕಾಂಗ್ರೆಸ್ ನಾಯಕರಲ್ಲಿ ಇಲ್ಲ. ಪರಮೇಶ್ವರ್ ರಣಕಹಳೆಗೆ ಪಂಚರ್‌ ಮಾಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಪ್ರತಿಕ್ರಿಯಿಸಿ (+)