ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಕೊಟ್ಟ ಕಾರ್ಯಕರ್ತರು: ಬಿಜೆಪಿ ರೋಡ್ ಶೋ 15 ನಿಮಿಷದಲ್ಲೇ ಅಂತ್ಯ

ಬೆರಳೆಣಿಕೆ ಮುಖಂಡರು
Last Updated 2 ಏಪ್ರಿಲ್ 2019, 13:01 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಕರ್ತರು ಪಾಲ್ಗೊಳ್ಳದೆ ಪಕ್ಷದ ಮುಖಂಡರು ಮುಜುಗರ ಅನುಭವಿಸುವಂತಾಯಿತು.

ಬೆಳಿಗ್ಗೆ 9 ಗಂಟೆಗೆ ರೋಡ್‌ ಶೋ ಆರಂಭಿಸುವುದಾಗಿ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ತಿಳಿಸಿದ್ದರು. ಆ ಸಮಯಕ್ಕೆ ಕಾರ್ಯಕರ್ತರು ಆಗಮಿಸಿದ್ದರು. ಆದರೆ, ಪಕ್ಷದ ಅಭ್ಯರ್ಥಿ ಸಿ.ಮುನಿಸ್ವಾಮಿ ಹಾಗೂ ಮುಖಂಡರು ಸಮಯಕ್ಕೆ ಸರಿಯಾಗಿ ಬರಲಿಲ್ಲ. ಅಭ್ಯರ್ಥಿಗಾಗಿ ಗಂಟೆಗಟ್ಟಲೇ ಬಿಸಿಲಲ್ಲಿ ಕಾದು ಬಸವಳಿದ ಕಾರ್ಯಕರ್ತರು ಮನೆಯತ್ತ ಮುಖ ಮಾಡಿದರು.

ಸುಮಾರು 3 ತಾಸು ತಡವಾಗಿ ಮಧ್ಯಾಹ್ನ 12 ಗಂಟೆ ವೇಳೆಗೆ ಮುನಿಸ್ವಾಮಿ ಮತ್ತು ಮುಖಂಡರು ನಗರದ ಶಕ್ತಿದೇವತೆ ಕೋಲಾರಮ್ಮ ದೇವಸ್ಥಾನದ ಬಳಿ ಬಂದರು. ಬಳಿಕ ಕೋಲಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರ‍್ಯಾಲಿ ಆರಂಭಿಸಲಾಯಿತು. ಮುನಿಸ್ವಾಮಿ ಹಾಗೂ ಬೆರೆಳೆಣಿಕೆ ಮುಖಂಡರು ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು.

ದೇವಸ್ಥಾನ ಮುಂಭಾಗದ ಕುರುಬರಪೇಟೆ ರಸ್ತೆಯಲ್ಲಿ ಸಾಗಿದ ರ‍್ಯಾಲಿ 15 ನಿಮಿಷದಲ್ಲೇ ಅಂತ್ಯಗೊಂಡಿತು. ಕಾರ್ಯಕರ್ತರು ಹಾಗೂ ಮುಖಂಡರು ಮಾರ್ಗ ಮಧ್ಯೆಯೇ ಜಾಗ ಖಾಲಿ ಮಾಡಿದರು. ಮುನಿಸ್ವಾಮಿ ಅವರು ಸೋದರ ಸಂಬಂಧಿ ಮಾಲೂರು ತಾಲ್ಲೂಕಿನ ಯಲುವಗುಳಿ ರಾಜಣ್ಣ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತರಾತುರಿಯಲ್ಲಿ ನಿರ್ಗಮಿಸಿದರು.

ಕೊತ್ತೂರು ಬೆಂಬಲ: ‘ಮುಳಬಾಗಿಲಿನ ಮಾಜಿ ಶಾಸಕ ಕಾಂಗ್ರೆಸ್‌ನ ಕೊತ್ತೂರು ಮಂಜುನಾಥ್ ನನಗೆ ಬೆಂಬಲ ಸೂಚಿಸಿದ್ದಾರೆ. ಜತೆಗೆ ಹಾಲಿ ಶಾಸಕ ಎಚ್‌.ನಾಗೇಶ್, ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಸುಧಾಕರ್ ಸಹ ನನಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ’ ಎಂದು ಮುನಿಸ್ವಾಮಿ ರೋಡ್‌ ಶೋ ವೇಳೆ ತಿಳಿಸಿದರು.

‘ಸತತ 7 ಬಾರಿ ಸಂಸದರಾಗಿರುವ ಕಾಂಗ್ರೆಸ್‌ನ ಮುನಿಯಪ್ಪ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. 28 ವರ್ಷಗಳಿಂದ ಕ್ಷೇತ್ರದ ಜನರನ್ನು ಯಾಮಾರಿಸುತ್ತಾ ಸಂಸದರಾಗುತ್ತಿರುವ ಅವರ ಆಟ ಈ ಬಾರಿ ನಡೆಯುವುದಿಲ್ಲ. ಕ್ಷೇತ್ರದಲ್ಲಿ ಮತ ಕೇಳಲು ಅವರಿಗೆ ನಾಚಿಕೆಯಾಗಬೇಕು’ ಎಂದು ವಾಗ್ದಾಳಿ ನಡೆಸಿದರು.

‘ಕ್ಷೇತ್ರದೆಲ್ಲೆಡೆ ಮುನಿಯಪ್ಪ ವಿರೋಧ ಅಲೆ ಇದೆ. ಜನ ರಾಜಕೀಯ ಬದಲಾವಣೆ ಬಯಸಿದ್ದಾರೆ. ಮುನಿಯಪ್ಪರಿಗೆ ಟಿಕೆಟ್‌ ನೀಡದಂತೆ ಸ್ವಪಕ್ಷೀಯರೇ ಕಾಂಗ್ರೆಸ್‌ ವರಿಷ್ಠರಿಗೆ ಮನವಿ ಮಾಡಿದ್ದರು. ಮುನಿಯಪ್ಪ ಸ್ವಪಕ್ಷೀಯರ ವಿರೋಧದ ನಡುವೆಯೂ ದೆಹಲಿ ಮಟ್ಟದಲ್ಲಿ ಲಾಬಿ ಮಾಡಿ ಟಿಕೆಟ್‌ ತಂದಿರಬಹುದು. ಆದರೆ, ಚುನಾವಣೆಯಲ್ಲಿ ಅವರ ಸೋಲು ನಿಶ್ಚಿತ’ ಎಂದು ಟೀಕಿಸಿದರು.

ಬೆಂಬಲಿಸುತ್ತಾರೆ: ‘ಮುನಿಯಪ್ಪರ ಭೂ ಅಕ್ರಮದ ವಿರುದ್ಧ ಸಂಘ ಸಂಸ್ಥೆಗಳ ಮುಖಂಡರು ಧ್ವನಿ ಎತ್ತಿದ್ದಾರೆ. ಅವರೆಲ್ಲಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುತ್ತಾರೆ. ಈಗಾಗಲೇ ಮಾಲೂರು, ಚಿಕ್ಕತಿರುಪತಿ, ಲಕ್ಕೂರು, ಬಂಗಾರಪೇಟೆಯಲ್ಲಿ ಪಕ್ಷದ ಮುಖಂಡರೆಲ್ಲಾ ಸಂಘಟಿತರಾಗಿ ಪ್ರಚಾರ ನಡೆಸಿದ್ದು, ಮತದಾರರು ಬಿಜೆಪಿ ಪರ ಒಲವು ವ್ಯಕ್ತಪಡಿಸಿದ್ದಾರೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿಯವರ ಆಲೆಯಲ್ಲಿ ಕೋಲಾರ ಕ್ಷೇತ್ರದಲ್ಲೂ ಈ ಬಾರಿ ಬಿಜೆಪಿ ಜಯದ ಖಾತೆ ತೆರೆಯಲಿದೆ. ಮುನಿಯಪ್ಪರ ಭ್ರಷ್ಟಾಚಾರ, ಭೂ ಅಕ್ರಮವನ್ನು ಜನರ ಮುಂದಿಟ್ಟು ಮತ ಯಾಚಿಸುತ್ತೇನೆ’ ಎಂದು ಹೇಳಿದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಡಿ.ರಾಮಚಂದ್ರಪ್ಪ, ಗ್ರಾಮಾಂತರ ಘಟಕದ ಅಧ್ಯಕ್ಷ ಬೈಚಪ್ಪ, ನಗರ ಘಟಕದ ಅಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT