ಶುಕ್ರವಾರ, ಜನವರಿ 22, 2021
28 °C

ಅಂಗವಿಕಲ ಮಕ್ಕಳನ್ನು ಮುಖ್ಯವಾಹಿನಿಗೆ ತನ್ನಿ: ಕೆ.ಎಸ್‌.ನಾಗರಾಜಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಶಿಕ್ಷಕರು ಅಂಗವಿಕಲ ಮಕ್ಕಳಲ್ಲಿನ ಕೀಳರಿಮೆ ಹೋಗಲಾಡಿಸಿ, ಆತ್ಮಸ್ಥೈರ್ಯ ತುಂಬಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ತಿಳಿಸಿದರು.

ಅಂಗವಿಕಲ ಮಕ್ಕಳ ನಿರ್ವಹಣೆ ಕುರಿತು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯು ಶಿಕ್ಷಕರಿಗೆ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೃತ್ತಿಪರ ಕಾರ್ಯಾಗಾರದಲ್ಲಿ ಮಾತನಾಡಿ, ‘ಅಂಗವಿಕಲ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಅಂಗವೈಕಲ್ಯ ಸಮಸ್ಯೆಯನ್ನು ಯಾರೂ ಬಯಸಿ ಪಡೆಯುವುದಿಲ್ಲ. ದೈಹಿಕ ತೊಂದರೆಯಿಂದ ಅಂಗವಿಕಲರಾಗುತ್ತಾರೆ. ಅಂಗವಿಕಲರೆಂದು ತಾರತಮ್ಯ ಮಾಡುವುದು ಸರಿಯಲ್ಲ. ಆಯಾ ಶಾಲೆಯಲ್ಲಿನ ಅಂಗವಿಕಲ ಮಕ್ಕಳಿಗೆ ಅಗತ್ಯವಿರುವ ಸೌಲಭ್ಯ, ಉಪಕರಣ, ಶಾಲೆಯಲ್ಲಿ ರ್‌್್ಯಾಂಪ್‌ ನಿರ್ಮಾಣದ ಬಗ್ಗೆ ಶಿಕ್ಷಕರು ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

‘ಅಂಗವಿಕಲ ಮಕ್ಕಳಿರುವ ಶಾಲೆಗಳಲ್ಲಿ ಅವರಿಗಾಗಿಯೇ ಪ್ರತ್ಯೇಕ ಶೌಚಾಲಯ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಪ್ರತ್ಯೇಕ ಶೌಚಾಲಯ ಇಲ್ಲದಿದ್ದರೆ ಶಿಕ್ಷಣ ಇಲಾಖೆ ಅಥವಾ ಗ್ರಾಮ ಪಂಚಾಯಿತಿ ಗಮನಕ್ಕೆ ತಂದು ನಿರ್ಮಿಸಬೇಕು’ ಎಂದು ಸೂಚಿಸಿದರು.

‘ಅಂಗವಿಕಲ ಮಕ್ಕಳ ಪೋಷಕರಿಗೆ ಅರಿವು ಮೂಡಿಸಬೇಕು. ಆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೋಷಕರ ಸಹಕಾರ ಪಡೆಯಬೇಕು. ಸಕಾಲಕ್ಕೆ ವಿದ್ಯಾರ್ಥಿವೇತನ ಸೌಲಭ್ಯ ತಲುಪುವಂತೆ ಮಾಡಬೇಕು. ಈ ಮಕ್ಕಳ ಆರೋಗ್ಯ ತಪಾಸಣೆ, ಆಸ್ಪತ್ರೆ ಸೌಲಭ್ಯ, ಔಷಧಗಳು ಮತ್ತು ಸಾರಿಗೆ ಸೇವೆ ಕಲ್ಪಿಸಲು ಕ್ರಮ ವಹಿಸಬೇಕು’ ಎಂದು ತಿಳಿಸಿದರು.

ಡಿವೈಪಿಸಿ ಮೋಹನ್ ಬಾಬು, ಬಿಆರ್‌ಸಿ ರಾಮಕೃಷ್ಣಪ್ಪ, ಎವೈಪಿಸಿ ಸಿದ್ದೇಶ್, ಇಸಿಒಗಳಾದ ಆರ್.ಶ್ರೀನಿವಾಸನ್, ವಿಜಯಕುಮಾರ್, ಬೈರೆಡ್ಡಿ, ಬಿಆರ್‌ಪಿ ನಾಗರಾಜ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.